ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಚೋರ್ಲಾ ಘಾಟ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
2025ರ ಅಕ್ಟೋಬರ್ 16ರಂದು ಗೋವಾದಿಂದ ಕರ್ನಾಟಕ ಮಾರ್ಗವಾಗಿ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ಅಪಹರಿಸಿ ಹಣ ದರೋಡೆ ಮಾಡಲಾಗಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದು ಭಾರತ ದೇಶದ ಇತಿಹಾಸದಲ್ಲೇ ಅತಿದೊಡ್ಡ ಕಂಟೇನರ್ ದರೋಡೆ ಎಂದು ಹೇಳಲಾಗ್ತಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ತನಿಖೆಗೆ ವಿಶೇಷ ತಂಡ (ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿದ್ದು, ಕರ್ನಾಟಕ–ಮಹಾರಾಷ್ಟ್ರ–ಗೋವಾ ರಾಜ್ಯಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ (ಜ.25, 2026) ಸುದ್ದಿಗೋಷ್ಠಿ ನಡೆಸಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ಸಂದೀಪ್ ದತ್ತ ಪಾಟೀಲ್ ಎಂಬಾತನನ್ನು 2025ರ ಅಕ್ಟೋಬರ್ 22ರಂದು ಐವರು ಅಪಹರಿಸಿದ್ದರು. ಆ ಐದು ಮಂದಿಯನ್ನು ಬಂಧಿಸಲಾಗಿದೆ. ಅಪಹರಣಕ್ಕೊಳಗಾದ ಸಂದೀಪ್ ದತ್ತ ಪಾಟೀಲ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ, “ನನ್ನನ್ನು 2025ರ ಅಕ್ಟೋಬರ್ 22ರಂದು ಫಾರ್ಚೂನರ್ ಕಾರಿನಲ್ಲಿ ಅಪಹರಿಸಿದ್ದರು. ಅಕ್ಟೋಬರ್ 16ನೇ ತಾರೀಖು ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂಪಾಯಿ ದರೋಡೆಯಾಗಿದೆ. ಅದರಲ್ಲಿ ನೀನು ಭಾಗಿಯಾಗಿದ್ದೀಯಾ.. ನೀನು 400 ಕೋಟಿ ರೂ. ಕೊಡಬೇಕು ಎಂದು ಒತ್ತಾಯಿಸಿ ಥಳಿಸಿದ್ದಾರೆ” ಎಂಬುವುದಾಗಿ ತಿಳಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಈ ಮಾಹಿತಿಯನ್ನು ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜನವರಿ 6ರಂದು ಪತ್ರ ಬರೆದು ನಮಗೆ ತಿಳಿಸಿದ್ದರು. ನಮಗೆ ಪತ್ರ ತಲುಪಿದ ಬಳಿಕ ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಬಿರಾದರ್ ಅವರ ನೇತೃತ್ವದಲ್ಲಿ ಖಾನಾಪುರ ಮತ್ತು ನಂದಗಡ ಪೊಲೀಸ್ ಠಾಣೆಗಳ ಮೂವರು ಮರಾಠಿ ಗೊತ್ತಿರುವ ಸಿಬ್ಬಂದಿಯನ್ನು ತಂಡ ಮಾಡಿ ನಾಸಿಕ್‌ಗೆ ಕಳಿಸಿದ್ದೆವು ಎಂದು ವಿವರಿಸಿದ್ದಾರೆ.
ಮುಂದುವರಿದು, ಸಬ್ ಇನ್ಪೆಕ್ಟರ್ ಬಿರಾದರ್ ಅವರ ತಂಡ ನಾಸಿಕ್‌ಗೆ ಹೋಗಿ ಅಪಹರಣಕ್ಕೊಳಗಾದ ಸಂದೀಪ್ ದತ್ತ ಪಾಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ಅವರು ತಾನು ಯಾವುದೇ ದರೋಡೆ ಘಟನೆ ನೋಡಿಲ್ಲ. ಆದರೆ, ನನ್ನನ್ನು ಅಪಹರಿಸಿ ಥಳಿಸಿದವರು, ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂಪಾಯಿ ದರೋಡೆ ನಡೆದಿದೆ ಎಂದು ಹೇಳುತ್ತಿದ್ದರು ಎಂಬುವುದಾಗಿ ತಿಳಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 198 ಪ್ರಕಾರ ಒಂದು ಅಪರಾಧ ಘಟನೆ ಒಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡು ಇನ್ನೊಂದು ಠಾಣೆಯ ವ್ಯಾಪ್ತಿಯಲ್ಲಿ ಕೊನೆಯಾದರೆ, ಆ ಎರಡು ಠಾಣೆಗಳ ನಡುವೆ ಬರುವ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಅವಕಾಶ ಇದೆ ಎಂದಿದ್ದಾರೆ.
ಈ ದರೋಡೆ ಮತ್ತು ಅಪಹರಣ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಎಸ್‌ಐಟಿ ರಚನೆಯಾಗಿದೆ. ಈ ಅಪರಾಧ ಮಹಾರಾಷ್ಟ್ರದಲ್ಲಿ ಪ್ರಾರಂಭಗೊಂಡು ಅಲ್ಲಿಯೇ ಕೊನೆಯಾಗಿದ್ದರೆ ಅಲ್ಲಿನ ಎಸ್‌ಐಟಿ ಸಂಪೂರ್ಣ ತನಿಖೆ ಮಾಡಲಿದೆ. ಒಂದು ವೇಳೆ ಅಪರಾಧ ಬೆಳಗಾವಿಯ ವ್ಯಾಪ್ತಿಯಲ್ಲಿ ನಡೆದಿದ್ದರೆ, ಮಹಾರಾಷ್ಟ್ರ ಪೊಲೀಸರು ಆ ಬಗ್ಗೆ ಮಾಹಿತಿ ಕೊಟ್ಟರೆ ನಾವು ಇಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಮಾಡುತ್ತೇವೆ. ಅದಕ್ಕಾಗಿ ನಮ್ಮ ಪೊಲೀಸ್ ತಂಡ ಮಹಾರಾಷ್ಟ್ರದಲ್ಲಿ ಕಾಯುತ್ತಿದೆ. ಅಪರಾಧ ಬೆಳಗಾವಿ ವ್ಯಾಪ್ತಿಯಲ್ಲಿ ನಡೆದಿರುವ ಮಾಹಿತಿ ಸಿಕ್ಕರೆ ನಾವು ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳುತ್ತೇವೆ ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.
ನಾಸಿಕ್ ಎಸ್ಪಿಯ ಪತ್ರ ಬರೆದಿರುವುದು ಬಿಟ್ಟರೆ ಅವರು ಈ ಪ್ರಕರಣ ಸಂಬಂಧ ನಮ್ಮ ಬಳಿ ಯಾವುದೇ ಚರ್ಚೆ ನಡೆಸಿಲ್ಲ, ಮಾಹಿತಿ ಹಂಚಿಕೊಂಡಿಲ್ಲ. ಈಗಾಗಾಲೇ ಸಬ್ ಇಸ್ಪೆಕ್ಟರ್ ನೇತೃತ್ವದ ನಮ್ಮ ಪೊಲೀಸ್ ತಂಡ ನಾಸಿಕ್‌ನಲ್ಲಿದೆ. ಇನ್ನೂ ಹಿರಿಯ ಅಧಿಕಾರಿಯನ್ನು ಕಳಿಸಿಕೊಡಬೇಕು ಎಂದರೆ ನಾವು ಕಳಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.
400 ಕೋಟಿ ದರೋಡೆ ನಡೆದಿರುವುದು ನಿಜವೇ ಎಂಬುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಅದನ್ನು ನೋಡಿದವರೂ ಇಲ್ಲ. ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಸಂದೀಪ್ ದತ್ತ ಪಾಟೀಲ್ ಕೊಟ್ಟಿರುವ ಹೇಳಿಕೆ ಆಧರಿಸಿ ಈ ದರೋಡೆಯ ಕುರಿತು ಚರ್ಚೆಯಾಗುತ್ತಿದೆ. ಘಟನೆ ನಡೆದ ಸ್ಥಳದ ಬಗ್ಗೆಯೂ ಖಚಿತ ಮಾಹಿತಿ ಇಲ್ಲ. ಮಹಾರಾಷ್ಟ್ರ ಪೊಲೀಸರು ಮಾಹಿತಿ ಕೊಟ್ಟರೆ ನಾವು ಮುಂದಿನ ತನಿಖೆ ಮಾಡುತ್ತೇವೆ ಎಂದು ಬೆಳಗಾವಿ ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.


