ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 20 ವರ್ಷಗಳ ಹಿಂದಿನ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ (ಜ.24) ಖುಲಾಸೆಗೊಳಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಏಪ್ರಿಲ್ 2006ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಟ್ಕರ್ ತಮ್ಮ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಕ್ಸೇನಾ ವಿಫಲರಾಗಿದ್ದಾರೆ ಎಂದು ಸಾಕೇತ್ ನ್ಯಾಯಾಲಯಗಳ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಹೇಳಿದ್ದಾರೆ.
ಸಕ್ಸೇನಾ ಅವರು ಅಹಮದಾಬಾದ್ ಮೂಲದ ಸರ್ಕಾರೇತರ ಸಂಸ್ಥೆಯಾದ (ಎನ್‌ಜಿಒ) ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದಾಗ ಈ ಪ್ರಕರಣ ದಾಖಲಾಗಿತ್ತು. ಪಾಟ್ಕರ್ ಅವರು ಎನ್‌ಜಿಒ ಸಿವಿಲ್ ಕಾಂಟ್ರಾಕ್ಟ್ ಪಡೆದಿರುವ ಬಗ್ಗೆ ಮಾನನಷ್ಟಕರ ಆರೋಪಗಳನ್ನು ಮಾಡಿದ್ದಾರೆ ಎಂದು ಸಕ್ಸೇನಾ ಆರೋಪಿಸಿದ್ದರು, ಆದರೆ ಪಾಟ್ಕರ್ ಅದನ್ನು ನಿರಾಕರಿಸಿದ್ದರು.
ಪಾಟ್ಕರ್ ಅವರು ಪ್ರಶ್ನಾರ್ಹ ಕಾರ್ಯಕ್ರಮದಲ್ಲಿ ಪ್ಯಾನೆಲಿಸ್ಟ್ ಆಗಿರಲಿಲ್ಲ, ಅವರ ಪ್ರಿ-ರೆಕಾರ್ಡ್ ಮಾಡಿದ ವೀಡಿಯೊ ಕ್ಲಿಪ್ ಅನ್ನು ಮಾತ್ರ ಪ್ರಸಾರ ಮಾಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ಪಿಟಿಐ ವರದಿ ಮಾಡಿದೆ.
“ವಾಸ್ತವವಾಗಿ ಆಡಿಯೋ-ವಿಡಿಯೋ ರೆಕಾರ್ಡ್ ಮಾಡಿದ ವರದಿಗಾರರನ್ನಾಗಲಿ ಅಥವಾ ಆರೋಪಿಯು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದನ್ನು ನೋಡಿದ ಯಾವುದೇ ವ್ಯಕ್ತಿಯನ್ನಾಗಲಿ ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ” ಎಂದು ನ್ಯಾಯಾಧೀಶರು ಹೇಳಿರುವುದಾಗಿ ವರದಿ ತಿಳಿಸಿದೆ.
ಪ್ರಸಾರದ ಸಮಯದಲ್ಲಿ ಪ್ಲೇ ಮಾಡಲಾದ ವೀಡಿಯೊ ಪಾಟ್ಕರ್ ನಡೆಸಿದ ಸಂದರ್ಶನ ಅಥವಾ ಪತ್ರಿಕಾಗೋಷ್ಠಿಯ ಭಾಗದಂತೆ ಕಂಡುಬಂದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ನ್ಯಾಯಾಲಯವು ಏನನ್ನಾದರೂ ಸ್ಥಾಪಿಸಲು ಅಥವಾ ದೃಢೀಕರಿಸಲು ಪತ್ರಿಕಾಗೋಷ್ಠಿಯ ಸಂಪೂರ್ಣ ವೀಡಿಯೊ ಮತ್ತು ಆಡಿಯೊವನ್ನು ಸಲ್ಲಿಸುವುದು ಅತ್ಯಗತ್ಯ ಎಂದಿದ್ದಾರೆ.
ಸಕ್ಸೇನಾ ಅವರು ಮೂಲ ವೀಡಿಯೊ ತುಣುಕನ್ನು ಅಥವಾ ಮಾನಹಾನಿಕರ ಹೇಳಿಕೆಗಳನ್ನು ರೆಕಾರ್ಡ್ ಮಾಡಿದ ರೆಕಾರ್ಡಿಂಗ್ ಸಾಧನವನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಪರಿಣಾಮವಾಗಿ, ಆರೋಪಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
2001ರಲ್ಲಿ ಸಕ್ಸೇನಾ ದಾಖಲಿಸಿದ್ದ ಮತ್ತೊಂದು ಮಾನನಷ್ಟ ಮೊಕದ್ದಮೆಯಲ್ಲಿ ಪಾಟ್ಕರ್ ಅವರ ಶಿಕ್ಷೆಯನ್ನು 2025ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. 2000ನೇ ಇಸವಿಯ ನವೆಂಬರ್‌ನಲ್ಲಿ ಪಾಟ್ಕರ್ “ದೇಶಭಕ್ತನ ನಿಜವಾದ ಮುಖ” ಎಂಬ ಶೀರ್ಷಿಕೆಯ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ಮಾನಹಾನಿ ಮಾಡಿದ್ದಾರೆ ಎಂದು ಈ ಪ್ರಕರಣದಲ್ಲಿ ಸಕ್ಸೇನಾ ಆರೋಪಿಸಿದ್ದರು.
ಮೇ 2024ರಲ್ಲಿ, ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಅವರು ಈ ಪ್ರಕರಣದಲ್ಲಿ ಪಾಟ್ಕರ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದರು. ಎರಡು ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಿದ್ದರು.
“ಗುಜರಾತ್ ಜನರು ಮತ್ತು ಅವರ ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡಮಾನ ಇಟ್ಟಿದ್ದಾರೆ” ಎಂದು ಪಾಟ್ಕರ್ ಸಕ್ಸೇನಾ ವಿರುದ್ಧ ಆರೋಪಿಸಿದ್ದಾರೆ. ಈ ಆರೋಪ ಸಕ್ಸೇನಾ ಅವರ ಸಮಗ್ರತೆ ಮತ್ತು ಸಾರ್ವಜನಿಕ ಸೇವೆಯ ಮೇಲಿನ ನೇರ ದಾಳಿ ಎಂದು ಅಭಿಪ್ರಾಯಪಟ್ಟಿದ್ದರು.
ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ, ಪಾಟ್ಕರ್ ಅವರಿಗೆ ವಿಧಿಸಲಾಗಿದ್ದ ಪರೋಲ್ (ಪ್ರೊಬೇಷನ್) ನಿಯಮವನ್ನು ಸ್ವಲ್ಪ ಮಾರ್ಪಡಿಸಿದೆ. ಮೊದಲು ಪಾಟ್ಕರ್ ಅವರು ಪ್ರತಿ ನಿಗದಿತ ಕಾಲಾವಧಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ (ಟ್ರಯಲ್ ಕೋರ್ಟ್‌ಗೆ) ಹಾಜರಾಗುವಂತೆ ಆದೇಶಿಸಲಾಗಿತ್ತು. ಆದರೆ, ಈಗ ಆ ನಿಯಮವನ್ನು ಬದಲಾಯಿಸಿ, ಅವರು ಬಾಂಡ್‌ಗಳನ್ನು (ಸಾಕ್ಷಿಗಳೊಂದಿಗೆ ಖಾತರಿ ಪತ್ರಗಳು ಅಥವಾ ಬಾಂಡ್‌ಗಳು) ಸಲ್ಲಿಸುವಂತೆ ಅನುಮತಿಸಲಾಗಿದೆ. ಹೀಗೆ ಮಾಡುವ ಮೂಲಕ ಅವರು ಆಗಾಗ್ಗೆ ನ್ಯಾಯಾಲಯಕ್ಕೆ ಹೋಗುವ ತೊಂದರೆಯನ್ನು ಕಡಿಮೆ ಮಾಡಲಾಗಿದೆ.


