ಕರ್ನಾಟಕದ ಮೂವರು ಸೇರಿದಂತೆ ದೇಶದ ಒಟ್ಟು 45 ಸಾಧಕರನ್ನು 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮಂಡ್ಯ ಮೂಲದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ ಡಾ. ಸುರೇಶ್ ಹನಗವಾಡಿ ಹಾಗೂ ಬೆಂಗಳೂರಿನ ಸಮಾಜ ಸೇವಕಿ ಎಸ್.ಜಿ ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಬಸ್ ಕಂಡಕ್ಟರ್ ಆಗಿದ್ದ ಅಂಕೇಗೌಡ ಅವರು ವಿಶ್ವದ ಅತಿದೊಡ್ಡ ಉಚಿತ ಪ್ರವೇಶ ಗ್ರಂಥಾಲಯವೆಂದು ಗುರುತಿಸಲ್ಪಟ್ಟಿರುವ ‘ಪುಸ್ತಕ ಮನೆ’ ಯನ್ನು ಸ್ಥಾಪಿಸಿದ್ದಾರೆ. ಅಪರೂಪದ ಹಸ್ತಪ್ರತಿಗಳನ್ನು ಒಳಗೊಂಡಂತೆ 20 ಭಾಷೆಗಳ 20 ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಈ ಗ್ರಂಥಾಲಯ ಹೊಂದಿದೆ.
ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದ 75 ವರ್ಷದ ‘ಗ್ರಂಥಪಾಲಕ’ ಅಂಕೇಗೌಡರನ್ನು ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆ ಹಾಗೂ ಜ್ಞಾನ ಸಬಲೀಕರಣಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಏಷ್ಯಾದ ಮೊದಲ ಮಾನವ ಹಾಲಿನ ಬ್ಯಾಂಕ್ ಸ್ಥಾಪಿಸಿದ ಮುಂಬೈ ಮೂಲದ ಮಕ್ಕಳ ತಜ್ಞೆ ಅರ್ಮಿಡಾ ಫೆರ್ನಾಂಡಿಸ್, ಮಧ್ಯಪ್ರದೇಶದ ಬುಂದೇಲಿ ಸಮರಕಲೆ ತರಬೇತುದಾರ ಭಗವಾನ್‌ದಾಸ್ ರಾಯ್ಕ್ವಾರ್, ಮಹಾರಾಷ್ಟ್ರದ 90 ವರ್ಷದ ಬುಡಕಟ್ಟು ತರ್ಪ ವಾದಕ ಭಿಕ್ಲ್ಯಾ ಲಡಕ್ಯಾ ದಿಂಡಾ (ಸೋರೆಕಾಯಿ ಮತ್ತು ಬಿದಿರಿನಿಂದ ತಯಾರಿಸಿದ ಸಂಗೀತ ವಾದ್ಯ), ಜಮ್ಮು ಮತ್ತು ಕಾಶ್ಮೀರದ ಸಮಾಜ ಸೇವಕ ಬ್ರಿಜ್ ಲಾಲ್ ಭಟ್ ಪ್ರಶಸ್ತಿಗಳಿಗೆ ಆಯ್ಕೆಯಾದ ಇತರ ಪ್ರಮುಖರು
ಗಣರಾಜ್ಯೋತ್ಸವದ ಮುನ್ನಾದಿನವಾದ ಭಾನುವಾರ (ಜ.25) ಕೇಂದ್ರ ಗೃಹ ಸಚಿವಾಲಯ ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದೆ. ಇದು ಅಧಿಕೃತವಾಗಿ ಪ್ರಕಟವಾಗಬೇಕಿದೆ.


