ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾದ 131 ‘ಪದ್ಮ ಪ್ರಶಸ್ತಿ’ಗಳಲ್ಲಿ, 38 ಪ್ರಶಸ್ತಿಗಳು ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯ ಪಾಲಾಗಿವೆ.
ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಐದು ‘ಪದ್ಮವಿಭೂಷಣ’ ಪ್ರಶಸ್ತಿಗಳಲ್ಲಿ ಮೂರು ಕೇರಳದ ವ್ಯಕ್ತಿಗಳಾದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಮ್ಯುನಿಸ್ಟ್ ನಾಯಕ ವಿ.ಎಸ್. ಅಚ್ಯುತಾನಂದನ್ (ಮರಣೋತ್ತರ), ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಕೆ.ಟಿ. ಥಾಮಸ್ ಮತ್ತು ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಅವರಿಗೆ ಸಂದಿವೆ.
ಇನ್ನೆರಡು ಪ್ರಶಸ್ತಿಗಳಲ್ಲಿ ಒಂದು ತಮಿಳುನಾಡು ಮೂಲದ ಪ್ರಸ್ತುತ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಎನ್. ರಾಜಂ ಮತ್ತು ಇನ್ನೊಂದು ಹಿರಿಯ ನಟ ಹಾಗೂ ಬಿಜೆಪಿ ಮಾಜಿ ಸಂಸದ ಧರ್ಮೇಂದ್ರ ಅವರಿಗೆ ಕಲೆಗಳಿಗೆ ನೀಡಿದ ಕೊಡುಗೆಗಾಗಿ ಮರಣೋತ್ತರವಾಗಿ ನೀಡಲಾಗಿದೆ.
ಐದು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಅಸ್ಸಾಂನ ವ್ಯಕ್ತಿಗಳಿಗೆ ಮತ್ತು 11 ಪ್ರಶಸ್ತಿಗಳನ್ನು ಪಶ್ಚಿಮ ಬಂಗಾಳದಿಂದವರಿಗೆ ನೀಡಲಾಗಿದೆ. ಗಮನಾರ್ಹವಾಗಿ ಈ ಎರಡೂ ರಾಜ್ಯಗಳು ಚುನಾವಣೆಗೆ ಸಜ್ಜಾಗುತ್ತಿವೆ.
‘ಪದ್ಮ ಭೂಷಣ’ ವಿಭಾಗದಲ್ಲಿ ಕೇರಳದಿಂದ ನಟ ಮಮ್ಮುಟ್ಟಿ ಹಾಗೂ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಮಿಳುನಾಡಿನಿಂದ ಕೆ.ಆರ್. ಪಳನಿಸ್ವಾಮಿ ಮತ್ತು ಎಸ್.ಕೆ.ಎಂ. ಮೈಲಾನಂದನ್ ಸೇರಿದಂತೆ ಈ ವರ್ಷದ 13 ಮಂದಿ ಈ ಪ್ರಶಸ್ತಿ ಪಡೆಯಲಿದ್ದಾರೆ.
ಒಟ್ಟಾರೆಯಾಗಿ ಈ ಬಾರಿಯ ಪದ್ಮ ಭೂಷಣ ಪ್ರಶಸ್ತಿಗಳ ಪಟ್ಟಿಯಲ್ಲಿ 90 ಮಂದಿ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಇದಲ್ಲದೆ ಆರು ವಿದೇಶಿಯರು, ಎನ್‌ಆರ್‌ಐಗಳು, ಪಿಐಒಗಳು ಮತ್ತು ಒಸಿಐಗಳು ಇದ್ದಾರೆ. ಜೊತೆಗೆ 16 ಮಂದಿಗೆ ಮರಣೋತ್ತರವಾಗಿ ಈ ಗೌರವ ನೀಡಲಾಗಿದೆ.
ಪದ್ಮಭೂಷಣ ಪ್ರಶಸ್ತಿ ಪಡೆದ ಇತರರಲ್ಲಿ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಭಗತ್ ಸಿಂಗ್ ಕೋಶ್ಯಾರಿ, ಬ್ಯಾಂಕರ್ ಉದಯ್ ಕೊಟಕ್, ಜಾಹೀರಾತು ವೃತ್ತಿಪರ ಪಿಯೂಷ್ ಪಾಂಡೆ, ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ (ಮರಣೋತ್ತರ) ಮತ್ತು ಬಿಜೆಪಿ ನಾಯಕ ವಿ.ಕೆ. ಮಲ್ಹೋತ್ರಾ (ಮರಣೋತ್ತರ) ಸೇರಿದ್ದಾರೆ.
ವಿದೇಶಿ ವಿಭಾಗದಲ್ಲಿ, ಅಮೆರಿಕದ ಟೆನಿಸ್ ದಂತಕಥೆ ವಿಜಯ್ ಅಮೃತರಾಜ್ ಮತ್ತು ನೋರಿ ದತ್ತಾತ್ರೇಯುಡು ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದ್ದು, ಪ್ರತೀಕ್ ಶರ್ಮಾ, ಜಾರ್ಜಿಯಾದ ವ್ಲಾಡಿಮರ್ ಮೆಸ್ಟ್ವಿರಿಶ್ವಿಲಿ (ಮರಣೋತ್ತರ), ಜರ್ಮನಿಯ ಪ್ರೊಫೆಸರ್ ಲಾರ್ಸ್-ಕ್ರಿಶ್ಚಿಯನ್ ಕೋಚ್ ಮತ್ತು ರಷ್ಯಾದ ಭಾರತಶಾಸ್ತ್ರಜ್ಞ ಲಿಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ. ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವರ ಶ್ರೇಷ್ಠತೆ, ಸಮರ್ಪಣೆ ಮತ್ತು ಸೇವೆ ಭಾರತೀಯ ಸಮಾಜದ ರಚನೆಯನ್ನು ಶ್ರೀಮಂತಗೊಳಿಸುತ್ತದೆ ಮತ್ತು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
ಕ್ರಿಕೆಟಿಗ ರೋಹಿತ್ ಶರ್ಮಾ, ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್ ಪ್ರೀತ್ ಕೌರ್, ಹಾಕಿ ಆಟಗಾರ್ತಿ ಸವಿತಾ ಪುನಿಯಾ, ಜೆಎನ್‌ಯು ಮಾಜಿ ಉಪಕುಲಪತಿ ಎಂ. ಜಗದೇಶ್ ಕುಮಾರ್, ಪ್ರಸಾರ ಭಾರತಿ ಮಾಜಿ ಸಿಇಒ ಶಶಿ ಶೇಖರ್ ವೆಂಪತಿ, ನಟರಾದ ಆರ್. ಮಾಧವನ್, ಪ್ರೊಸೆನ್‌ಜಿತ್ ಚಟರ್ಜಿ ಹಾಗೂ ಹಾಸ್ಯನಟ ಸತೀಶ್ ಶಾ (ಮರಣೋತ್ತರ) ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
ಅರಣ್ಯ ದರೋಡೆಕೋರ ವೀರಪ್ಪನ್ ವಿರುದ್ದದ ಕಾರ್ಯಾಚರಣೆಯಲ್ಲಿ ತಮಿಳುನಾಡು ಎಸ್‌ಟಿಎಫ್‌ನ ನೇತೃತ್ವ ವಹಿಸಿದ್ದ ಮಾಜಿ ಸಿಆರ್‌ಪಿಎಫ್ ಮಹಾನಿರ್ದೇಶಕ ಕೆ. ವಿಜಯ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 113 ಪದ್ಮಶ್ರೀ ಗೌರವಗಳಲ್ಲಿ, ಎರಡು ಜಂಟಿ ಪ್ರಶಸ್ತಿಗಳಾಗಿವೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿದ್ವಾಂಸರಾದ ಆಸಿಡ್ ದಾಳಿಯ ಸಂತ್ರಸ್ತೆ ಮಂಗಳಾ ಕಪೂರ್ ಮತ್ತು ಏಷ್ಯಾದ ಮೊದಲ ಮಾನವ ಹಾಲಿನ ಬ್ಯಾಂಕ್ ಸ್ಥಾಪಿಸಿದ ನವಜಾತ ಶಿಶುಶಾಸ್ತ್ರಜ್ಞೆ ಅರ್ಮಿಡಾ ಫೆರ್ನಾಂಡಿಸ್ ಸೇರಿದಂತೆ 19 ಪ್ರೇರಣಾದಾಯಕ ಮಹಿಳೆಯರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಷ್ಟ್ರವ್ಯಾಪಿ ಮಂಜು-ಮೇಲ್ವಿಚಾರಣಾ ವ್ಯವಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಏರೋಸ್ಪೇಸ್ ವಿಜ್ಞಾನಿ ಶುಭಾ ವೆಂಕಟೇಶ್ ಅಯ್ಯಂಗಾರ್, ಭಾರತದ ಪ್ರಮುಖ ಸ್ವದೇಶಿ ರಕ್ಷಣಾ ಉತ್ಪಾದಕ ಸತ್ಯನಾರಾಯಣನ್ ನುವಾಲ್, ಬಡತನದಲ್ಲೇ ಮೇಲೆ ಬಂದು ಕಡಲಾಚೆಯ ಫ್ಯಾಬ್ರಿಕೇಶನ್ ಉದ್ಯಮವನ್ನು ಸ್ಥಾಪಿಸಿದ ಅಶೋಕ್ ಖಾಡೆ ಮತ್ತು ಸಸ್ಯ ತಳಿಶಾಸ್ತ್ರಜ್ಞ ಪಿ.ಎಲ್. ಗೌತಮ್ ಕೂಡ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
2026ರ ಪದ್ಮ ಪ್ರಶಸ್ತಿ ಪುರಸ್ಕೃತರು ಭಾರತದ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 84 ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕದ ಮಂಡ್ಯ, ಮಧ್ಯಪ್ರದೇಶ ಬೆತುಲ್, ಮಹಾರಾಷ್ಟ್ರದ ಪಾರ್ಭಣಿ, ಉತ್ತರಾಖಂಡದ ಬಾಗೇಶ್ವರ್, ತೆಲಂಗಾಣದ ರಂಗಾರೆಡ್ಡಿ, ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ್, ಒಡಿಶಾದ ನುವಾಪಾಡಾ, ಛತ್ತೀಸ್‌ಗಢದ ದಂತೇವಾಡಾ, ಆಂಧ್ರಪ್ರದೇಶದ ಏಲೂರು ಮತ್ತು ರಾಜಸ್ಥಾನದ ದೀಗ್ ಈ ಹತ್ತು ಜಿಲ್ಲೆಗೆಳು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಪದ್ಮ ಪ್ರಶಸ್ತಿಗಳಲ್ಲಿ ಸ್ಥಾನ ಪಡೆದಿವೆ.
ಪದ್ಮ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ, ದೇಶದ ಅತ್ಯುನ್ನತ ನಾಗರಿಕ ಗೌರವಗಳಾಗಿವೆ. ಕಲೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ವೈದ್ಯಕೀಯ, ಸಾಹಿತ್ಯ, ಕ್ರೀಡೆ ಮತ್ತು ನಾಗರಿಕ ಸೇವೆಯಂತಹ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ವಾರ್ಷಿಕವಾಗಿ ಗಣರಾಜ್ಯೋತ್ಸವದಂದು ಇವುಗಳನ್ನು ನೀಡಲಾಗುತ್ತದೆ.


