ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು. ಈ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ ಮೇಲ್ಮನವಿಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ. ಈ ಮೂಲಕ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಅನ್ನು ಪುರಸ್ಕರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ಕೆಸರೆ ಗ್ರಾಮದ 3.16 ಎಕರೆ ಭೂಮಿಗೆ ಬದಲಾಗಿ, ನಗರದ ಐಷಾರಾಮಿ ಬಡಾವಣೆಯಲ್ಲಿ 14 ಪರ್ಯಾಯ ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ. ಮೂಲ ಭೂಮಿಯ ಮೌಲ್ಯಕ್ಕಿಂತ ಹಂಚಿಕೆ ಮಾಡಲಾದ ನಿವೇಶನಗಳ ಮೌಲ್ಯ ಹತ್ತಾರು ಪಟ್ಟು ಅಧಿಕ ಎಂದು ಸ್ನೇಹಮಯಿ ಕೃಷ್ಣ, ಟಿ.ಜೆ. ಅಬ್ರಹಾಂ ದೂರು ನೀಡಿದ್ದರು. ಈ ವಿವಾದದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ಹಂಚಿಕೆಯಾಗಿದ್ದ 14 ನಿವೇಶನಗಳನ್ನು ಮುಡಾಕ್ಕೆ ಹಿಂತಿರುಗಿಸಿದ್ದರು.
ಈ ದೂರಿನ ಆಧಾರದಲ್ಲಿ ದೀರ್ಘ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಹಾಗೆಯೇ ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ಭೂಮಾಲೀಕ ದೇವರಾಜು ಅವರಿಗೆ ಕ್ಲೀನ್‌ಚಿಟ್ ನೀಡಿದೆ. ಮುಡಾದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ತನಿಖೆ ಮುಂದುವರೆಯಲಿದೆ.
ಏನಿದು ಬಿ ರಿಪೋರ್ಟ್?
ಪೊಲೀಸ್ ತನಿಖೆಯ ಬಳಿಕ ನ್ಯಾಯಾಲಯಕ್ಕೆ ಸಲ್ಲಿಸುವ ಅಂತಿಮ ವರದಿಗಳಲ್ಲಿ ‘ಬಿ’ ರಿಪೋರ್ಟ್ ಅತಿ ಮುಖ್ಯವಾದುದ್ದು. ದೂರಿನಲ್ಲಿ ಉಲ್ಲೇಖಿಸಿದ ಆರೋಪಗಳು ಸುಳ್ಳು ಅಥವಾ ಆಧಾರರಹಿತ ಎಂದು ಪೊಲೀಸರಿಗೆ ಕಂಡುಬಂದಾಗ ಅವರು ಈ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸುತ್ತಾರೆ. ದೂರುದಾರರು ನೀಡಿದ ದೂರು ಉದ್ದೇಶಪೂರ್ವಕವಾಗಿ ಸುಳ್ಳು ಅಥವಾ ದುರುದ್ದೇಶಪೂರಿತವಾಗಿದೆ ಎಂಬುದು ತನಿಖೆಯಲ್ಲಿ ಸಾಬೀತಾದಾಗ ಈ ರಿಪೋರ್ಟ್ ಸಲ್ಲಿಸಲಾಗುತ್ತದೆ.
ಹಾಗೆಯೇ ಆರೋಪಿಯ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷ್ಯಗಳು ಸಿಗದಿದ್ದ ಸಂದರ್ಭದಲ್ಲಿಯೂ ಈ ವರದಿಯನ್ನು ಸಲ್ಲಿಸಲಾಗುತ್ತದೆ. ಈ ವರದಿಯನ್ನು ನ್ಯಾಯಾಲಯವು ಅಂಗೀಕರಿಸಿದರೆ, ಆರೋಪಿಗಳು ದೋಷಮುಕ್ತರಾಗುತ್ತಾರೆ. ಇದೀಗ ಮುಡಾ ಪ್ರಕರಣದಲ್ಲಿ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ಪುರಸ್ಕರಿಸುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ದೋಷಮುಕ್ತರಾಗಿದ್ದಾರೆ.


