ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ. 82 ವರ್ಷದ ಸುಬ್ಬರಾವ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನವರಾದ ಸುಬ್ಬರಾವ್ ಅವರು ಭಾರತೀಯ ಜೀವ ವಿಮಾ ನಿಗಮದ (LIC) ಮೂಲಕ ಕಾರ್ಮಿಕ ಚಳವಳಿಗೆ ಪಾದಾರ್ಪಣೆ ಮಾಡಿದ್ದರು. ಕಾರ್ಮಿಕರ ಹಕ್ಕುಗಳ ಪರವಾಗಿ ರಾಜಿ ಮಾಡಿಕೊಳ್ಳದ ಹೋರಾಟಗಾರರೆಂದೇ ಹೆಸರುವಾಸಿಯಾಗಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸುಬ್ಬರಾವ್ ಅವರು, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು.
ಸಾರಿಗೆ ನೌಕರರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ (Arrears) ಪಾವತಿ ಮತ್ತು ನಾಲ್ಕು ಸಾರಿಗೆ ನಿಗಮಗಳ ವಿಲೀನಕ್ಕಾಗಿ ನಿರಂತರವಾಗಿ ಧ್ವನಿ ಎತ್ತಿ ಹೋರಾಡಿದವರು ಅನಂತ ಸುಬ್ಬರಾವ್.
ಇನ್ನು ಸಾರಿಗೆ ನೌಕರರ ಮುಖಂಡ ಸುಬ್ಬರಾವ್ ನಿಧನರಾದ ಕಾರಣ ನಾಳೆ ನಡೆಯಲಿದ್ದ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಲಾಗಿದೆ.


