ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ.
ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಮತ್ತು ಕಷ್ಟಕರವಾದ ಪರ್ವತ ಪ್ರದೇಶವು ಅವಘಡದ ಸಂಭಾವ್ಯ ಕಾರಣಗಳು ಎಂದು ಅಧಿಕಾರಿಗಳು ಹೇಳಿದ್ದಾರೆ. ಅವಘಡಕ್ಕೂ ಮುನ್ನ ವಿಮಾನದ ತುರ್ತು ಸಿಗ್ನಲ್ ಸಕ್ರಿಯಗೊಂಡಿಲ್ಲ ಎಂದು ವರದಿಯಾಗಿದೆ.
ಘಟನೆಯಲ್ಲಿ 13 ಪ್ರಯಾಣಿಕರು ಮತ್ತು 2 ಸಿಬ್ಬಂದಿ ಸೇರಿ 15 ಜನರು ಸಾವಿಗೀಡಾಗಿದ್ದಾರೆ. ಸಂಘರ್ಷದ ಬಲಿಪಶುಗಳನ್ನು ಪ್ರತಿನಿಧಿಸುವ ಕೊಲಂಬಿಯಾದ ಸಂಸತ್ತಿನ ಸದಸ್ಯ 36 ವರ್ಷದ ಡಿಯೋಜೆನೆಸ್ ಕ್ವಿಂಟೆರೊ ಅಮಯಾ, ಕೊಲಂಬಿಯಾ ಸಂಸತ್ ಚುನಾವಣೆಯ ಅಭ್ಯರ್ಥಿ ಮತ್ತು ಸಾಮಾಜಿಕ ಕಾರ್ಯಕರ್ತ ಕಾರ್ಲೋಸ್ ಸಾಲ್ಸೆಡೊ ಮತ್ತು ಕ್ಯಾಪ್ಟನ್ ಮಿಗುಯೆಲ್ ವನೆಗಾಸ್ ಮತ್ತು ಕ್ಯಾಪ್ಟನ್ ಜೋಸ್ ಡೆ ಲಾ ವೆಗಾ ಎಂಬ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದವರಲ್ಲಿ ಪ್ರಮುಖರು.
ವಿಮಾನವು ಸ್ಥಳೀಯ ಸಮಯ ಬೆಳಿಗ್ಗೆ 11:42ಕ್ಕೆ ಕುಕುಟಾದ ಕ್ಯಾಮಿಲೊ ದಾಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಓಕಾನಾದ ಅಗುವಾಸ್ ಕ್ಲಾರಾಸ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಸುಮಾರು 12 ನಿಮಿಷಗಳ ನಂತರ ಮತ್ತು ನಿಗದಿತ ಲ್ಯಾಂಡಿಂಗ್‌ಗೆ ಸುಮಾರು 11 ನಿಮಿಷಗಳ ಮೊದಲು, ಬೆಳಿಗ್ಗೆ 11:54 ಕ್ಕೆ ಸಂಪರ್ಕ ಕಡಿತಗೊಂಡಿತ್ತು ಎಂದು ವರದಿಯಾಗಿದೆ.
ಘಟನೆಯ ಕುರಿತು ಕೊಲಂಬಿಯಾದ ನಾಗರಿಕ ವಿಮಾನಯಾನ (ಏರೋಸಿವಿಲ್) ಮತ್ತು ಸಾರಿಗೆ ಸಚಿವಾಲಯವು ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ.
ಪುಣೆಯ ಬಾರಾಮತಿಯಲ್ಲಿ ವಿಮಾನ ಪತನಗೊಂಡು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ ದಿನವೇ ಕೊಲಂಬಿಯಾದಲ್ಲಿ ಈ ದುರಂತ ಸಂಭವಿಸಿದೆ.


