ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ ಪಡೆಯುವ ಪ್ರಯತ್ನದಂತೆ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಬೌದ್ಧ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂದು ಘೋಷಿಸಲಾದ ಉತ್ತರ ಪ್ರದೇಶದ ಸುಭಾರ್ತಿ ವೈದ್ಯಕೀಯ ಕಾಲೇಜಿನಲ್ಲಿ ಬೌದ್ಧ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆಯಲು ನಿರ್ದೇಶನಗಳನ್ನು ಕೋರಿ ಹರಿಯಾಣದ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದೆ.
ಅರ್ಜಿದಾರರು ತಾವು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇವೆಂದು ಹೇಳಿಕೊಂಡು, ಬೌದ್ಧ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಉಪವಿಭಾಗಾಧಿಕಾರಿ ನೀಡಿದ ಪ್ರಮಾಣಪತ್ರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಅರ್ಜಿದಾರರು ‘ಪುನಿಯಾ’ ಜಾತಿಗೆ ಸೇರಿದವರು ಎಂಬುವುದನ್ನು ಗಮನಿಸಿದ ಸಿಜೆಐ ಸೂರ್ಯ ಕಾಂತ್, “ಪುನಿಯಾಗಳು ಪರಿಶಿಷ್ಟ ಜಾತಿ ವರ್ಗದಲ್ಲಿ ಇರಬಹುದು, ಪುನಿಯಾಗಳು ಜಾಟ್ ಕೂಡ ಆಗಿರಬಹುದು, ಅದು ಸಾಮಾನ್ಯ ವರ್ಗ. ನೀವು ಯಾವ ಪುನಿಯಾ?” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಅರ್ಜಿದಾರರು “ನಾವು ಜಾಟ್” ಎಂದು ಉತ್ತರಿಸಿದ್ದಾರೆ. “ಹಾಗಾದರೆ ನೀವು (ಅಲ್ಪಸಂಖ್ಯಾತರು) ಹೇಗೆ ಆಗುತ್ತೀರಿ?” ಎಂದು ಸಿಜೆಐ ಕೇಳಿದ್ದಾರೆ.
ಈ ವೇಳೆ ಅರ್ಜಿದಾರರು “ನಾವು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇವೆ. ಯಾರಾದರೂ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಬಹುದು” ಎಂದು ಉತ್ತರಿಸಿದ್ದಾರೆ.
ಈ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಜೆಐ, “ಇದು ವಂಚನೆಯ ಮತ್ತೊಂದು ಹಾದಿ, ನಿಜವಾದ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಹಕ್ಕುಗಳನ್ನು ನೀವು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ನೀವು ಆರ್ಥಿಕವಾಗಿ ಸದೃಢರಾಗಿದ್ದೀರಿ, ಉತ್ತಮ ಪ್ರದೇಶಗಳಲ್ಲಿ ವಾಸಿಸುತ್ತಿದ್ದೀರಿ ಮತ್ತು ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದೀರಿ. ನಿಮ್ಮ ಬಳಿ ಕೃಷಿ ಭೂಮಿ ಮತ್ತು ಎಲ್ಲಾ ಅಗತ್ಯ ಸೌಲಭ್ಯಗಳಿವೆ. ನಿಮ್ಮ ಸ್ವಂತ ಅರ್ಹತೆ ಮತ್ತು ಸಾಮರ್ಥ್ಯದ ಬಗ್ಗೆ ನೀವು ಹೆಮ್ಮೆ ಪಡಬೇಕು. ಅದನ್ನು ಬಿಟ್ಟು, ನಿಜವಾಗಿಯೂ ವಂಚಿತರಾದವರ (ಬಡವರ ಅಥವಾ ಶೋಷಿತರ) ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಬಾರದು” ಎಂದು ಹೇಳಿದ್ದಾರೆ.
ಇದಕ್ಕೆ ಅರ್ಜಿದಾರರು “ನಾವು ನಿಜವಾಗಿಯೂ ಬೌದ್ಧಧರ್ಮವನ್ನು ಅನುಸರಿಸುತ್ತಿದ್ದೇವೆ ಅಥವಾ ಮತಾಂತಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ವಾದವನ್ನು ಒಪ್ಪಿಕೊಳ್ಳದ ಸಿಜೆಐ, “ಇದೇ ರೀತಿ ಮುಂದುವರಿದರೆ, ಪ್ರತಿಯೊಬ್ಬರೂ ಈ ಹಾದಿಯನ್ನು ಹಿಡಿಯುತ್ತಾರೆ. ಮೇಲ್ವರ್ಗದವರು ಸಹ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಲು ಅಥವಾ ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ” ಎಂದಿದ್ದಾರೆ. “ನಮ್ಮಿಂದ ಇನ್ನೂ ಹೆಚ್ಚಿನ ಕಠಿಣ ಕಾಮೆಂಟ್‌ಗಳನ್ನು (ಟೀಕೆಗಳನ್ನು) ಮಾಡಿಸಲು ನಮಗೆ ಒತ್ತಾಯ ಮಾಡಬೇಡಿ” ಎಂದು ವಕೀಲರಿಗೆ ಅಥವಾ ಅರ್ಜಿದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಅಭ್ಯರ್ಥಿಗಳು ನೀಟ್-ಪಿಜಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ತಾವು ‘ಸಾಮಾನ್ಯ ವರ್ಗಕ್ಕೆ’ (General Category) ಸೇರಿದವರೆಂದು ನಮೂದಿಸಿದ್ದಾರೆ ಮತ್ತು ತಮಗೆ ‘ಆರ್ಥಿಕವಾಗಿ ಹಿಂದುಳಿದ ವರ್ಗದ’ (EWS) ಸೌಲಭ್ಯ ಬೇಡವೆಂದು ಸ್ಪಷ್ಟಪಡಿಸಿದ್ದಾರೆ” ಎಂಬುವುದನ್ನು ನ್ಯಾಯಾಲಯ ಗಮನಿಸಿದೆ. ಹೀಗಿರುವಾಗ, ಅವರಿಗೆ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ನೀಡಿರುವುದು ಹೇಗೆ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ಈ ಕುರಿತು ಸೂಕ್ತ ತನಿಖೆ ಅಗತ್ಯವಿದೆ ಎಂದು ಹೇಳಿದೆ.
“ಅರ್ಜಿದಾರರು ಮೂಲತಃ ಸಾಮಾನ್ಯ ವರ್ಗದವರಾಗಿ (ಜನರಲ್ ಕ್ಯಾಟಗರಿ) ಜನಿಸಿದ್ದಾರೆ ಎಂಬುವುದನ್ನು ನಾವು ವಕೀಲರಿಂದ ಖಚಿತಪಡಿಸಿಕೊಂಡಿದ್ದೇವೆ. 2025ರ ನೀಟ್-ಪಿಜಿ ಪರೀಕ್ಷೆಯಲ್ಲಿ ಅವರು ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಹೀಗಿರುವಾಗ ಉಪ-ವಿಭಾಗಾಧಿಕಾರಿ (ಎಸ್‌ಡಿಒ) ನೀಡಿರುವ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ನೀಡುವ ವಿಷಯದಲ್ಲಿ ಇನ್ನಷ್ಟು ಆಳವಾದ ತನಿಖೆ ಅಗತ್ಯವಿದೆ ಎಂದು ತೋರುತ್ತದೆ” ಎಂದು ನ್ಯಾಯಪೀಠ ತಿಳಿಸಿದೆ.
ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಕೆಳಗಿನ ಮಾಹಿತಿಯನ್ನು ತಿಳಿಸಲು ಪೀಠ ಸೂಚಿಸಿದೆ.
1 ಅಲ್ಪಸಂಖ್ಯಾತ ಪ್ರಮಾಣಪತ್ರವನ್ನು ನೀಡಲು ಮಾರ್ಗಸೂಚಿಗಳು ಯಾವುವು?
2. 2025ರ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗ ಎಂದು ಗುರುತನ್ನು ಬಹಿರಂಗಪಡಿಸಿದ ಇಡಬ್ಲ್ಯುಎಸ್‌ಗಿಂತ ಮೇಲ್ಪಟ್ಟ ಮೇಲ್ವರ್ಗದ ಅಭ್ಯರ್ಥಿಯನ್ನು ಬೌದ್ಧ ಅಲ್ಪಸಂಖ್ಯಾತ ಸಮುದಾಯವಾಗಲು ಅನುಮತಿಸಬಹುದೇ? ಇಲ್ಲದಿದ್ದರೆ, ಯಾವ ಆಧಾರದಲ್ಲಿ ಉಪ ವಿಭಾಗದಿಕಾರಿ ಅರ್ಜಿದಾರರಿಗೆ ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡಿದ್ದಾರೆ?
ಈ ಬಗ್ಗೆ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗಳಾಗಿ ಪ್ರವೇಶ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನಿಖಿಲ್ ಕುಮಾರ್ ಪುನಿಯಾ ಮತ್ತು ಏಕ್ತಾ ಸಲ್ಲಿಸಿದ ಅರ್ಜಿಯಲ್ಲಿ ಮೀರತ್‌ನ ಸುಭಾರ್ತಿ ವೈದ್ಯಕೀಯ ಕಾಲೇಜಿನಲ್ಲಿ 50% ಸೀಟುಗಳನ್ನು ಬೌದ್ಧ ಅಲ್ಪಸಂಖ್ಯಾತ ಸಮುದಾಯಕ್ಕೆ ಹಂಚಿಕೆ ಮಾಡಲು ನಿರ್ದೇಶನಗಳನ್ನು ಕೋರಲಾಗಿತ್ತು. ಸುಪ್ರೀಂ ಕೋರ್ಟ್ ಅಕ್ಟೋಬರ್ 20,2022 ರಂದು ಎಸ್‌ಎಲ್‌ಪಿ (ಸಿ) ಸಂಖ್ಯೆ 17003/2022 ರಲ್ಲಿ ನೀಡಿದ ಮಧ್ಯಂತರ ಆದೇಶದ ಪ್ರಕಾರ. ಸದರಿ ಕಾಲೇಜಿಗೆ 2018ರಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗವು ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಿದೆ ಎಂದು ಹೇಳಲಾಗಿದೆ.
ಅರ್ಜಿದಾರರು ಬೌದ್ಧ ಅಲ್ಪಸಂಖ್ಯಾತ ಅಭ್ಯರ್ಥಿಗಳಾಗಿ ನೀಟ್-ಪಿಜಿ ಕೋರ್ಸ್‌ಗಳಿಗೆ ಸೀಟುಗಳನ್ನು ಹಂಚಿಕೆ ಮಾಡಲು ನಿರ್ದೇಶನಗಳನ್ನು ಕೋರಿದ್ದರು.


