ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು.
ಗುರುವಾರ (ಜ.29) ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ’17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಚಲನಚಿತ್ರೋತ್ಸವದಲ್ಲಿ ರಾಜಕೀಯ ಪ್ರವೇಶ ಆಗಿದೆ. ಇಂತಹ ಅದ್ಬುತ ಕಾರ್ಯಕ್ರಮದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳನ್ನು ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡುತ್ತಿಲ್ಲ. ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಇದನ್ನು ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು ಎಂದು ನಾನು ರಾಯಬಾರಿಯಾಗಿ ಒತ್ತಾಯಿಸುತ್ತಿದ್ದೇನೆ ಎಂದು ಪ್ರಕಾಶ್ ರಾಜ್ ಹೇಳಿದರು.
ನಮ್ಮ ನಾಡಿನ ಕಣ್ಣೀರಿನ ಕಥೆಗಳ ಪುಸ್ತಕ ಬೇರೆ ಭಾಷೆಗೆ ತರ್ಜುಮೆಯಾಗಿ ಬೂಕರ್ ಪ್ರಶಸ್ತಿ ಪಡೆದುಕೊಂಡಾಗ ಸಂಭ್ರಮಿಸಿದ ನಾವು, ನಮ್ಮ ನೆಲಕ್ಕೆ ಇನ್ನೊಬ್ಬರ ಕಣ್ಣೀರಿನ ಕಥೆಗಳನ್ನು ತರಲು ಆಗುವುದಿಲ್ಲ ಎನ್ನುವುದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಎಂದರು.
ಕೇರಳದ ಚಲನಚಿತ್ರೋತ್ಸವದಲ್ಲೂ ಕೇಂದ್ರ ಸರ್ಕಾದವರು ಇದನ್ನೇ ಮಾಡಿದರು. ಆದರೆ, ಅಲ್ಲಿಯ ರಾಜ್ಯ ಸರ್ಕಾರ ಮುಂದೆ ನಿಂತು ಆ ಚಿತ್ರಗಳ ಪ್ರದರ್ಶನಗಳಿಗೆ ಅನುವು ಮಾಡಿಕೊಟ್ಟಿತು. ಅಂತಹ ಪ್ರತಿರೋಧವನ್ನು ಬೆಂಗಳೂರು ಚಲನಚಿತ್ರೋತ್ಸವದಲ್ಲಿ ವ್ಯಕ್ತಪಡಿಸಬೇಕು. ಸರ್ಕಾರ, ಚಲನಚಿತ್ರ ಮಂಡಳಿ ಪ್ರತಿಭಟಿಸಬೇಕು. ನಿಮ್ಮ ರಾಜಕೀಯ ಹುನ್ನಾರಗಳು ನಡೆಯಲ್ಲ ಎನ್ನುವುದನ್ನು ಹೇಳಬೇಕು ಎಂದು ಆಗ್ರಹಿಸಿದರು.
“ನಮ್ಮ ಕೆನ್ನೆಗೆ ನಮ್ಮ ನೋವುಗಳಿಗೆ ನಾವು ಸುರಿಸುವ ಕಣ್ಣೀರಿನ ಪರಿಚಯ ಮಾತ್ರ ಇದ್ದರೆ ಸಾಲದು, ಇನ್ನೊಬ್ಬರು ನೋವಿಗೂ ನಾವು ಅಳುವ ಕಣ್ಣೀರಿನ ಪರಿಚಯವನ್ನೂ ನಮ್ಮ ಕೆನ್ನೆಗೆ ಮಾಡಿದರೆ ಮಾತ್ರ ನಾವು ಮನುಷ್ಯರಾಗೋದು” ಎಂದರು.
ನೀವು ಪ್ಯಾಲೆಸ್ತೀನಿಯನ್ ಸಿನಿಮಾಗಳನ್ನು ಪ್ರದರ್ಶಿಸಲು ಬಿಡದೆ ಇದ್ದರೆ ಈ ವೇದಿಕೆಯಲ್ಲಿ ನಾನು ಅಲ್ಲಿಯ ನೋವನ್ನು ವ್ಯಕ್ತಪಡಿಸುವ ಪದ್ಯವನ್ನು ಓದುತ್ತೇನೆ. ಈ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತೇನೆ ಎಂದ ಪ್ರಕಾಶ್ ರಾಜ್, ಈ ಕೆಳಗಿನ ಪದ್ಯವನ್ನು ಓದಿದರು.
“ಯುದ್ದಗಳು ಕೊನೆಗೊಳ್ಳುತ್ತವೆ, ನಾಯಕರು ಕೈ ಕುಲುಕಿ ತೆರಳುತ್ತಾರೆ..
ಆದರೆ ಆ ವೃದ್ದೆ ತನ್ನ ಮಗನಿಗಾಗಿ ಕಾಯುತ್ತಿರುತ್ತಾಳೆ,
ಆ ಹೆಣ್ಣು ಮಗಳು ತನ್ನ ಗಂಡನಿಗಾಗಿ ಕಾಯುತ್ತಿರುತ್ತಾಳೆ,
ಆ ಮಕ್ಕಳು ತಮ್ಮ ವೀರನಾದ ಅಪ್ಪನಿಗೋಸ್ಕರ ಕಾಯುತ್ತಿವೆ,
ನನ್ನ ಮಣ್ಣನ್ನು, ನನ್ನ ಮಾತೃ ಭೂಮಿಯನ್ನು ಮಾರಿದವರು ಯಾರೆಂದು ನನಗೆ ಗೊತ್ತಿಲ್ಲ,
ಆದರೆ, ಅದಕ್ಕೆ ಬೆಲೆ ತೆತ್ತವರು ಯಾರು ಎಂದು ನಮಗೆ ಗೊತ್ತು”
ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತೇವೆ. ವಿಜಯನಗರ ಜಿಲ್ಲೆಯಲ್ಲಿ ಅಂಕ ಸಮುದ್ರ ಎಂಬ ಒಂದು ಕೆರೆಯಿದೆ. ಅಲ್ಲಿಗೆ ಬೇರೆ ಬೇರೆ ದೇಶಗಳ ಹಕ್ಕಿಗಳು ಬರುತ್ತವೆ. ಅಲ್ಲಿ ರೈತರು ಬೆಳೆದ ಬೆಳೆಗಳನ್ನು ತಿನ್ನುತ್ತವೆ. ಈ ಬಗ್ಗೆ ಕೃಪಾಕರ ಸೇನಾನಿ ಅವರು ಒಬ್ಬರು ರೈತನಲ್ಲಿ ಪ್ರಶ್ನಿಸಿದಾಗ, ಆ ರೈತ “ಗುಬ್ಬಿಗಳು ಸರ್ ಎಷ್ಟು ತಿನ್ನುತ್ತವೆ” ಉತ್ತರಿಸಿದರು. ಇದು ಈ ಮಣ್ಣಿನ ಗುಣ, ಈ ಗುಣ ನಮ್ಮ ಉತ್ಸವಕ್ಕೂ ಬರಬೇಕು ಎಂದು ಪ್ರಕಾಶ್ ಹೇಳಿದರು.
ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ರಾಯಬಾರಿ ಒತ್ತಾಯಿಸುತ್ತೇನೆ ಎಂದು ಪುನರುಚ್ಚರಿಸಿದರು.


