ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ ಕೇಂದ್ರ ಕಾರಾಗೃಹದಿಂದ ಶನಿವಾರ (ಜನವರಿ 31) ಬೆಳಿಗ್ಗೆ 6.30 ರ ಸುಮಾರಿಗೆ ಏಮ್ಸ್‌ನ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದಿದ್ದರು. ಅಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಿಗಾದಲ್ಲಿರಿಸಲಾಗಿತ್ತು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಅವರನ್ನು ಪರೀಕ್ಷಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಏಮ್ಸ್ ಮೂಲಗಳ ಪ್ರಕಾರ, ವಾಂಗ್‌ಚುಕ್ ಅವರು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ದೇಹದ ಹಲವಾರು ಭಾಗಗಳಲ್ಲಿ ನೋವಿನ ಬಗ್ಗೆಯೂ ಹೇಳಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ, ಅವರನ್ನು ಬಿಗಿ ಭದ್ರತೆಯಲ್ಲಿ ಜೋಧ್‌ಪುರ ಕೇಂದ್ರ ಕಾರಾಗೃಹಕ್ಕೆ ವಾಪಸ್ ಕರೆದೊಯ್ಯಲಾಗಿದೆ.
ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಅವರ ಪತ್ನಿ ಕಳವಳ ವ್ಯಕ್ತಪಡಿಸಿದ್ದು, ಅವರ ಆರೋಗ್ಯ ಸ್ಥಿತಿ ನಿರಂತರವಾಗಿ ಹದಗೆಡುತ್ತಿರುವುದನ್ನು ಉಲ್ಲೇಖಿಸಿ ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಗುರುವಾರ (ಜನವರಿ 29) ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠವು, ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರಿಂದ ವಾಂಗ್‌ಚುಕ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಜೈಲು ಆಡಳಿತಕ್ಕೆ ನಿರ್ದೇಶನ ನೀಡಿತ್ತು.
ಜೈಲಿನಲ್ಲಿ ನೀಡಲಾಗುವ ಕುಡಿಯುವ ನೀರಿನ ಗುಣಮಟ್ಟದಿಂದಾಗಿ ವಾಂಗ್‌ಚುಕ್ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಕೀಲ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪದೇ ಪದೇ ದೂರು ನೀಡಿದ್ದರೂ, ಅವರ ಚಿಕಿತ್ಸೆಗೆ ಯಾವುದೇ ತಜ್ಞರು ಅಲ್ಲಿ ಲಭ್ಯವಿಲ್ಲ ಎಂದಿದ್ದರು.
ವಾಂಗ್‌ಚುಕ್ ಅವರಿಗೆ ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ ನಡೆಸಬೇಕು ಮತ್ತು ಅವರ ಕುಟುಂಬವು ಪೂರೈಸುವ ಶುದ್ಧ ಕುಡಿಯುವ ನೀರನ್ನು ಅನುಮತಿಸಬೇಕು ಎಂದು ಸಿಬಲ್ ನ್ಯಾಯಾಲಯವನ್ನು ಕೋರಿದ್ದರು.
ಫೆಬ್ರವರಿ 2 ರೊಳಗೆ ವಾಂಗ್‌ಚುಕ್ ಅವರ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ವಾಂಗ್‌ಚುಕ್ ಪತ್ನಿಯ ಅರ್ಜಿ ವಿಚಾರಣೆ ವೇಳೆ ರಾಜಸ್ಥಾನ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ವಾಂಗ್‌ಚುಕ್ ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಜೈಲು ವೈದ್ಯರು 21 ಬಾರಿ ತಪಾಸಣೆ ನಡೆಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿ ಲೇಹ್‌ನಲ್ಲಿ ಪ್ರತಿಭಟನೆಗಳು ನಡೆದ ನಂತರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶಿಕ್ಷಣ ತಜ್ಞ, ವಿಜ್ಞಾನಿ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿದೆ.
ಲೇಹ್‌ನ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ನಾಲ್ವರು ಸಾವನ್ನಪ್ಪಿದ್ದರು. ಕಠಿಣ ಕಾನೂನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿತರಾಗಿರುವ ವಾಂಗ್‌ಚುಕ್ 100 ದಿನಗಳಿಗೂ ಹೆಚ್ಚು ಸಮಯವನ್ನು ಜೈಲಿನಲ್ಲಿ ಕಳೆದಿದ್ದಾರೆ.


