ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. “ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇನ್ಸ್ಪೆಕ್ಟರ್ ಧನಂಜಯ್ ಅವರು ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಸರಿಯಾಗಿ ನಿರ್ವಹಿಸಿದ್ದಾರೆ, ನಿಯಮ ಪಾಲನೆ ಮಾಡಿಸುವುದನ್ನು BJP ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಸರಿಯಲ್ಲ” ಎಂದು ನೆಟ್ಟಿಗರು BJP ನಾಯಕರನ್ನು ಪ್ರಶ್ನಿಸಿದ್ದಾರೆ.
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಮಸೀದಿ ಮುಂಭಾಗದಲ್ಲಿ ಪ್ರಚೋದನಕಾರಿಯಾಗಿ ಪಟಾಕಿ ಸಿಡಿಸಬಾರದು ಹಾಗೂ ಸೌಹಾರ್ದತೆ ಕಾಯ್ದುಕೊಳ್ಳಬೇಕು ಎಂದು ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ನೀಡಿದ್ದ ಎಚ್ಚರಿಕೆಯನ್ನು ವಿರೋಧಿಸಿ ಬಿಜೆಪಿ ನಾಯಕರು ಕಾನೂನು ಮೀರಿ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದು, ಟಿ. ನರಸೀಪುರ ಪಟ್ಟಣದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದೆಡೆ, ಸಮಾಜದಲ್ಲಿ ಸೌಹಾರ್ದತೆ ಕಾಯಲು ಯತ್ನಿಸಿದ ಅಧಿಕಾರಿಯ ಬೆಂಬಲಕ್ಕೆ ನಿಂತ ದಲಿತ ಸಂಘಟನೆಗಳು ಬಿಜೆಪಿಯ ಕೋಮು ಪ್ರಚೋದನೆಯ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಬಿಜೆಪಿ ನಾಯಕರ ನಡೆಗೆ ಕೌಂಟರ್ ಕೊಟ್ಟಿದ್ದಾರೆ.
ಗಣೇಶೋತ್ಸವದ ಧಾರ್ಮಿಕ ಚೌಕಟ್ಟನ್ನು ಬಳಸಿಕೊಂಡು ಪ್ರಚೋದನಾಕಾರಿ ವಾತಾವರಣ ಸೃಷ್ಟಿಸುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕದಡಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಂಡ ಕಹಿ ವಾಸ್ತವ.
2024ರಲ್ಲಿ ಗಣೇಶ ವಿಸರ್ಜನೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಭೀಕರ ಗಲಭೆ ಇಡೀ ರಾಜ್ಯಕ್ಕೇ ಪಾಠವಾಗಬೇಕಿತ್ತು. ಮಸೀದಿಯ ಮುಂಭಾಗದಲ್ಲಿ ಧ್ವನಿವರ್ಧಕಗಳ ಗದ್ದಲ, ಪ್ರಚೋದನಾಕಾರಿ ಘೋಷಣೆಗಳು ಹಾಗೂ ನಿಗದಿತ ಮಾರ್ಗವನ್ನು ಮೀರಿ ನಡೆದ ಘರ್ಷಣೆ ಕೊನೆಗೆ ಕಲ್ಲು ತೂರಾಟ, ಅಂಗಡಿ-ಮುಂಗಟ್ಟುಗಳ ದಹನ ಮತ್ತು ಬೃಹತ್ ಕೋಮು ಗಲಭೆಗೆ ದಾರಿ ಮಾಡಿಕೊಟ್ಟಿತ್ತು. ಅಂದು ಭದ್ರತಾ ಲೋಪ ಮತ್ತು ಮುನ್ನೆಚ್ಚರಿಕೆಯ ಕೊರತೆಯಿಂದ ನಾಗಮಂಗಲ ಉರಿದು ಬೂದಿಯಾಗಿದ್ದಕ್ಕೆ ಪೊಲೀಸ್ ಇಲಾಖೆ ತೀವ್ರ ಟೀಕೆಗೆ ಗುರಿಯಾಗಿತ್ತು.
ಆದರೆ, ಅದೇ ನಾಗಮಂಗಲ ದುರಂತದಿಂದ ಪಾಠ ಕಲಿತು, ಅಂತಹದ್ದೇ ಸನ್ನಿವೇಶ ಟಿ. ನರಸೀಪುರದಲ್ಲಿ ಮರುಕಳಿಸಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ ಅಧಿಕಾರಿಯ ಹೇಳಿಕೆಯನ್ನು ತಿರುಚಿ ಈಗ ವಿರೋಧ ಪಕ್ಷದ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಕೋಮು ದ್ವೇಷದ ನರೇಶನ್ ಕಟ್ಟಲು ಯತ್ನಿಸುತ್ತಿದ್ದಾರೆ.
ಘಟನೆಯ ಹಿನ್ನೆಲೆ, ಪೋಲೀಸರ ಸ್ಪಷ್ಟನೆ:
ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ, ಸೆಪ್ಟೆಂಬರ್ 7 ರಂದು ಇನ್ಸ್ಪೆಕ್ಟರ್ ಧನಂಜಯ್ ಅವರು ಸೌಹಾರ್ದ ಸಭೆ ಕರೆದಿದ್ದರು. ವಿಸರ್ಜನಾ ಮೆರವಣಿಗೆಯ ದಿನಾಂಕ ಮತ್ತು ಮಾರ್ಗವನ್ನು ಪೊಲೀಸರಿಗೆ ಮುಂಚಿತವಾಗಿ ತಿಳಿಸಿದರೆ ಸೂಕ್ತ ಭದ್ರತೆ ಒದಗಿಸಬಹುದು ಎಂಬುದು ಅವರ ಉದ್ದೇಶವಾಗಿತ್ತು. ಕಳೆದ ವರ್ಷ ಸೂಕ್ತ ಮಾಹಿತಿಯಿಲ್ಲದೆ ಮೆರವಣಿಗೆ ನಡೆಸಿದ್ದರಿಂದ ಭದ್ರತಾ ಲೋಪವಾಗಿತ್ತು. ಹೀಗಾಗಿ ಈ ಬಾರಿ ಮಸೀದಿ ಇರುವ ಲಿಂಕ್ ರಸ್ತೆಯಲ್ಲಿ ಗದ್ದಲ, ಪಟಾಕಿ ಹಾಗೂ ಪ್ರಚೋದನಕಾರಿ ಘೋಷಣೆ ಕೂಗದಂತೆ ಮುನ್ನೆಚ್ಚರಿಕೆ ನೀಡಲಾಗಿತ್ತು.
ಶಾಂತಿ ಸಭೆಯಲ್ಲಿ ಮಾತನಾಡಿರುವ ಇನ್ಸ್ಪೆಕ್ಟರ್ ಧನಂಜಯ್, ಪೊಲೀಸರು ನಿಗದಿಪಡಿಸಿರುವ ಮಾರ್ಗದಲ್ಲಿಯೇ ಗಣೇಶ ಮೂರ್ತಿಯ ಮೆರವಣಿಗೆ ಸಾಗಬೇಕು. ನಿಗದಿತ ಮಾರ್ಗದಿಂದ ಬೇರೆಡೆಗೆ ತೆರಳಿ ಅನಗತ್ಯವಾಗಿ ಮಸೀದಿ ಬಳಿ ನಿಲ್ಲುವುದು, ಪಟಾಕಿ ಸಿಡಿಸುವುದು ಅಥವಾ ಡಿಜೆ ಹಾಕಿಕೊಂಡು ಗದ್ದಲ ಸೃಷ್ಟಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರುವುದು ವರದಿಯಾಗಿದೆ. ನಿಯಮ ಉಲ್ಲಂಘನೆಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಟಿ. ನರಸೀಪುರದಲ್ಲಿ ಪ್ರತಿವರ್ಷ ಸುಮಾರು 15 ರಿಂದ 20 ಗಣಪತಿ ಪೆಂಡಾಲ್ಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಸಾಂಪ್ರದಾಯಿಕ ಮೆರವಣಿಗೆಗೆ ಯಾವುದೇ ನಿಷೇಧವಿಲ್ಲ. ಆದರೆ ಅಧಿಕಾರಿಯ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತವಾಗಿ ತಿರುಚಿ ಪ್ರಚಾರ ಮಾಡಲಾಗಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಮೆರವಣಿಗೆಯ ಮಾರ್ಗವನ್ನು ನಿಗದಿಪಡಿಸುವುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಶಬ್ದ, ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರ ಪೊಲೀಸರಿಗೆ ಇದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 34ರ ಅಡಿಯಲ್ಲಿ ಮೆರವಣಿಗೆಗಳ ಮಾರ್ಗ ಮತ್ತು ಸಮಯವನ್ನು ನಿಯಂತ್ರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಕಾಪಾಡುವುದು ಹಾಗೂ ಡಿಜೆ, ಡೋಲು ಸೇರಿದಂತೆ ಶಬ್ದಕ್ಕೆ ಸಂಬಂಧಿಸಿದ ನಿಯಮಗಳನ್ನು ಜಾರಿಗೊಳಿಸುವ ಅಧಿಕಾರ ಪೊಲೀಸರಿಗೆ ನೀಡಲಾಗಿದೆ. ಹೀಗಾಗಿ, ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಪೊಲೀಸರ ಕರ್ತವ್ಯ ಎಂಬ ಜ್ಞಾನ ಬಿಜೆಪಿ ನಾಯಕರಿಗೆ ಇರಬೇಕಿತ್ತು.
ಬಿಜೆಪಿಯಿಂದ ಹಲ್ಲೆಗೆ ಯತ್ನ, ಅಶೋಕ್ ಬಂಧನ:
ಇನ್ಸ್ಪೆಕ್ಟರ್ ನೀಡಿದ ಹೇಳಿಕೆಯನ್ನು ‘ಹಿಂದು ವಿರೋಧಿ’ ಎಂದು ಬಿಂಬಿಸಲು ಮುಂದಾದ ಮಾಜಿ ಸಂಸದ ಪ್ರತಾಪ್ ಸಿಂಹ, ವಿಪಕ್ಷ ನಾಯಕ ಆರ್. ಅಶೋಕ್, ಮೈಸೂರು ಸಂಸದ ಯದುವೀರ್ ಒಡೆಯರ್, ಶಾಸಕ ಶ್ರೀವತ್ಸ ಹಾಗೂ ಬಿಜೆಪಿ ಮುಖಂಡ ಸಚ್ಚಿದಾನಂದ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಆರ್. ಅಶೋಕ್, “ರಾಜ್ಯ ಸರ್ಕಾರ ತಾಲಿಬಾನ್ ಸರ್ಕಾರದಂತೆ ವರ್ತಿಸುತ್ತಿದೆ” ಎಂದು ಕಿಡಿಕಾರಿದರು. ಈ ವೇಳೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಪೊಲೀಸರು ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.
ಜೈ ಭೀಮ್ ಧ್ವಜ ಹಿಡಿದು ಬಿಜೆಪಿ ವಿರುದ್ಧ ದಲಿತರ ಆಕ್ರೋಶ:
ಬಿಜೆಪಿ ನಾಯಕರ ಕೋಮು ರಾಜಕೀಯವನ್ನು ಖಂಡಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು, ನೀಲಿ ಶಾಲನ್ನು ಹೊತ್ತು ‘ಜೈ ಭೀಮ್’ ಧ್ವಜಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಸೌಹಾರ್ದ ವಿರೋಧಿ ಹೇಳಿಕೆಗಳನ್ನು ಖಂಡಿಸಿ, ಶಾಂತಿ ಕಾಯಲು ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಯ ಪರವಾಗಿ ಧ್ವನಿ ಎತ್ತಿದ್ದಾರೆ. ಪ್ರಚೋದನೆ ನೀಡಲು ಯತ್ನಿಸಿದ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದ ದಲಿತ ಕಾರ್ಯಕರ್ತರನ್ನು ಪೊಲೀಸರು ಸ್ಥಳದಿಂದ ತೆರೆವುಗೊಳಿಸಿದ್ದಾರೆ ಎಂದು ವರದಿಯಾಗಿದೆ.
‘ಆರ್ಎಸ್ಎಸ್-ಬಿಜೆಪಿ ಗೂಂಡಾಗಿರಿಗೆ ಜಾಗವಿಲ್ಲ’: ಡಿಕೆಶಿ ತಿರುಗೇಟು
ಈ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಗಣೇಶೋತ್ಸವವನ್ನು ಶಾಂತಿಯುತವಾಗಿ ಮತ್ತು ಶಿಸ್ತಿನಿಂದ ಆಚರಿಸಬೇಕು. ಆದರೆ ಬಿಜೆಪಿ ಸಮಾಜಘಾತಕ ಶಕ್ತಿಗಳನ್ನು ಬಳಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರಲು ಸಂಚು ರೂಪಿಸುತ್ತಿದೆ. ಪೊಲೀಸರಿಗೆ ಸಂಪೂರ್ಣ ಜಾಗರೂಕರಾಗಿರಲು ಸೂಚಿಸಲಾಗಿದೆ” ಎಂದು ತಿರುಗೇಟು ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ರಾಜ್ಯಾದ್ಯಂತ 80,558 ಗಣೇಶ ಮೆರವಣಿಗೆಗಳಿಗೆ 1.02 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
ನೆಟ್ಟಿಗರ ಬೆಂಬಲ:
ಸಾಮಾಜಿಕ ಜಾಲತಾಣಗಳಲ್ಲಿಯೂ ಇನ್ಸ್ಪೆಕ್ಟರ್ ಧನಂಜಯ್ ಅವರ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. “ಅಧಿಕಾರಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಮಸೀದಿಗಳ ಮುಂಭಾಗ ಪ್ರಚೋದನೆ ನೀಡುವುದನ್ನು ತಡೆಯುವುದು ಹಾಗೂ 10:30ರ ಒಳಗಾಗಿ, ಡಿಜೆ ಸದ್ದಿಲ್ಲದೆ ಮೆರವಣಿಗೆ ಮುಗಿಸುವುದು ಕಾನೂನಿನ ನಿಯಮ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ” ಎಂದು ನೆಟ್ಟಿಗರು ಪ್ರತಿಪಾದಿಸಿದ್ದಾರೆ.


