ದೆಹಲಿ ಚುನಾವಣೆಯಲ್ಲಿ ಸೋತಿದ್ದು ಪ್ರಧಾನಿ ನರೇಂದ್ರ ಮೋದಿಯವರಲ್ಲ, ಬದಲಿಗೆ ಗೃಹ ಸಚಿವ ಅಮಿತ್ ಷಾ ಎಂದು ಶಿವಸೇನೆ ಹೇಳಿದೆ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದ ಎಎಪಿ ಅದ್ಭುತ ಪುನರಾಗಮನ ಮಾಡಿದೆ. ಆದರೆ ಬಿಜೆಪಿಗೆ ಕೇವಲ ಎಂಟು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಮುಗ್ಗರಿಸಿದೆ.
ಬಿಜೆಪಿ ಹೀನಾಯ ಸೋಲನ್ನು ಎದುರಿಸಿದ ಒಂದು ದಿನದ ನಂತರ, ಅದರ ಮಾಜಿ ಮಿತ್ರಪಕ್ಷ ಶಿವಸೇನೆ, ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಸೋಲಲ್ಲ. ಬದಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ವೈಫಲ್ಯವಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
ಲೋಕಸಭಾ ಚುನಾವಣೆಗಳಲ್ಲಿ ಮೋದಿಯೊಬ್ಬರ ನಾಯಕತ್ವ ಮತ್ತು ವರ್ಚಸ್ಸು ಅವರಿಗೆ ಅಧಿಕಾರವನ್ನು ತಂದುಕೊಟ್ಟಿದೆ. ಆದರೆ ರಾಜ್ಯ ಚುನಾಣೆಗಳಿಗೆ ಬಂದರೆ ಬಿಜೆಪಿ ಸ್ಥಳೀಯ ಪಕ್ಷ ಅಥವಾ ನಾಯಕರಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿರುವ ಕಾರಣ ನಿರಂತರವಾಗಿ ರಾಜ್ಯ ಚುನಾವಣೆಗಳಲ್ಲಿ ಸೋತಿದೆ ಎಂದು ಶಿವಸೇನೆ ಹೇಳಿದೆ.
ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಗೆಲುವು ಆಶ್ಚರ್ಯಕರವಲ್ಲ ಎಂದು ಹೇಳಿದ ಸಾಮ್ನಾ, ಕಳೆದ ಐದು ವರ್ಷಗಳಲ್ಲಿ ಅವರು ರಾಷ್ಟ್ರ ರಾಜಧಾನಿಯಲ್ಲಿ ಕೈಗೊಂಡ ಮಾದರಿ ಕಾರ್ಯಗಳಿಗಾಗಿ ಜನತೆ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದೆ ಎಂದಿದೆ.
“ಗೃಹ ಸಚಿವ ಅಮಿತ್ ಶಾ ದೆಹಲಿ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿದ್ದರು, ಪ್ರಧಾನಿ ನರೇಂದ್ರ ಮೋದಿಯವರಲ್ಲ. ಜೆ.ಪಿ.ನಡ್ಡಾ ಅವರು ಇತ್ತೀಚೆಗೆ ಪಕ್ಷದ ಆಡಳಿತವನ್ನು ವಹಿಸಿಕೊಂಡರು, ಆದರೆ ನಿಜವಾದ ಉಸ್ತುವಾರಿ ಅಮಿತ್ ಶಾ. ಪಕ್ಷದ ಅಧ್ಯಕ್ಷರಾಗಿ ಅಧಿಕಾರವಧಿ ಮುಗಿಯುವ ಮುನ್ನ ಚುನಾವಣೆಯಲ್ಲಿ ಗೆಲ್ಲಲು ಅವರು ಬಯಸಿದ್ದರು. ಅವರು ಜಾರ್ಖಂಡ್ ಮತ್ತು ಮಹಾರಾಷ್ಟ್ರವನ್ನು ಕಳೆದುಕೊಂಡರು. ರಾಷ್ಟ್ರ ರಾಜಧಾನಿಯಲ್ಲಿ ಎಎಪಿಯ ಧ್ವಜ ಹಾರಿಸುತ್ತಿದ್ದರೆ, ಶಿವಸೇನೆಯ ಮುಖ್ಯಮಂತ್ರಿಯನ್ನು ಆರ್ಥಿಕ ರಾಜಧಾನಿಯಲ್ಲಿ ಸ್ಥಾಪಿಸಲಾಗಿದೆ” ಎಂದು ಸಂಪಾದಕೀಯ ಬುಧವಾರ ತಿಳಿಸಿದೆ.


