ಕೋಲ್ಕತ್ತಾದಲ್ಲಿಲ ಅಮಿತ್ ಷಾ ಅವರ ರ್‍ಯಾಲಿಯಲ್ಲಿ‘ ಗೋಲಿ ’ಘೋಷಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದು ದೆಹಲಿಯಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ತಮ್ಮ ಟಿಎಂಸಿ ಪಕ್ಷವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿನ ಹಿಂಸಾಚಾರವು “ಯೋಜಿತ ನರಮೇಧ”ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಪೊಲೀಸರು ಕೇಂದ್ರದ ಅಡಿಯಲ್ಲಿದ್ದಾರೆ. ದೆಹಲಿ ಪೊಲೀಸರು, ಸಿಆರ್‌ಪಿಎಫ್ ಮತ್ತು ಸಿಐಎಸ್‌ಎಫ್ ಇದ್ದರೂ ಸಹ ಗಲಭೆ ತಡೆಯಲು ಏನೂ ಮಾಡಲಿಲ್ಲ. ಎಷ್ಟು ನಾಚಿಕೆಗೇಡಿನ ಸಂಗತಿಯೆಂದರೆ ಇದಕ್ಕೆ ಬಿಜೆಪಿ ಕ್ಷಮೆ ಕೂಡ ಕೋರಿಲ್ಲ ಎಂದು ಅವರು ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.
ದೆಹಲಿ ಗಲಭೆ ಪೀಡಿತರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸುವಂತೆ ಬ್ಯಾನರ್ಜಿ ತನ್ನ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಗಲಭೆಯಲ್ಲಿ ಕೊಲ್ಲಲ್ಪಟ್ಟವರ ಆತ್ಮಕ್ಕಾಗಿ ಒಂದು ನಿಮಿಷದ ಮೌನಾಚರಣೆ ಮಾಡಿದ ಅವರು, ಬಿಜೆಪಿಯ ಕ್ರಮವನ್ನು ಖಂಡಿಸಿ ಪ್ರತಭಟನೆಗಳನ್ನು ಆಯೋಜಿಸಲು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಗೋಲಿಮಾರೋ ಘೋಷಣೆಗಳ ಕುರಿತು ಮಾತನಾಡಿದ ಅವರು ಬೆಂಕಿಯುಗುಳುವ ಪ್ರಚೋದನಕಾರಿ ಘೋಷಣೆಗಳು ಕಾನೂನುಬಾಹಿರವಾಗಿವೆ. ಅದನ್ನು ಕೂಗಿದ ಎಲ್ಲರಿಗೂ ದಂಡ ವಿಧಿಸಲಾಗುತ್ತದೆ. ಇದು ಕೋಲ್ಕತಾ, ದೆಹಲಿಯಲ್ಲ. ಇದು ಬಂಗಾಳ. ನಾವು ಒಬ್ಬ ವ್ಯಕ್ತಿಯನ್ನು ಉಳಿಸಿದರೆ, ಇತರರು ಅವರನ್ನು ಪ್ರೋತ್ಸಾಹಿಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ಬಂಗಾಳದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವವರು, ದೆಹಲಿ ಘರ್ಷಣೆಗೆ ಪ್ರಚೋದನೆ ಮತ್ತು ಕುಮ್ಮಕ್ಕು ನೀಡಿದವರನ್ನು ಏಕೆ ಬಂಧಿಸಲಾಗಿಲ್ಲ ಎಂದು ಪ್ರಶ್ನಿಸಿದ ಅವರು, ನಿನ್ನೆ ಘೋಷನೆ ಕೂಗಿದವರನ್ನು ಇಂದು ನಾವು ಬಂಧಿಸಿದ್ದೇವೆ ಎಂದಿದ್ದಾರೆ.
“ಯಾರು ದೇಶದ್ರೋಹಿಗಳು ಎಂಬುದನ್ನು ಜನರು ನಿರ್ಧರಿಸುತ್ತಾರೆ. ಅದನ್ನು ನಿರ್ಧರಿಸಲು ನೀವು ಯಾರು? ” ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಈಗಾಗಲೇ ಕೆಲವು ಜನರನ್ನು ಬಂಧಿಸಲಾಗಿದೆ ಮತ್ತು ಇತರರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದ ಅವರು, ಘೋಷಣೆ ಕೂಗಿದವರನ್ನು ಗುರುತಿಸಲು ಸಹಾಯ ಮಾಡುವಂತೆ ಅವರು ಪಕ್ಷದ ಕಾರ್ಯಕರ್ತರನ್ನು ಕೇಳಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ಆದರೆ ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಗೋಲಿ ಮಾರೊ ಘೋಷಣೆಗಳನ್ನು ಕೂಗಿದ ಘಟನೆಗೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸರು ಸೋಮವಾರ ಬೆಳಿಗ್ಗೆ ಮೂವರು ಬಿಜೆಪಿ ಬೆಂಬಲಿಗರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅವುಗಳಲ್ಲಿ ಜಾಮೀನು ರಹಿತ ವಿಭಾಗಗಳಿವೆ.
ಅಮಿತ್ ಶಾ ಭಾನುವಾರದ ರ್‍ಯಾಲಿಯಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ನಂತರ “ಅಮಿತ್ ಶಾರವರೆ, ಬಂಗಾಳಕ್ಕೆ ಬಂದು ಉಪದೇಶಿಸುವ ಬದಲು ನಿಮ್ಮ ಮೂಗಿನ ಕೆಳಗಿರುವ ಡೆಲ್ಹಿ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಮುಗ್ಧ ಜೀವಗಳನ್ನು ಉಳಿಸುವಲ್ಲಿ ವಿಫಲರಾದದ್ದಕ್ಕೆ ಕಾರಣ ನೀಡಬೇಕು ಮತ್ತು ಕ್ಷಮೆಯಾಚಿಸಬೇಕು. ಬಿಜೆಪಿ ಹರಡಲು ಪ್ರಯತ್ನಿಸುತ್ತಿರುವ ಧರ್ಮಾಂಧತೆ ಮತ್ತು ದ್ವೇಷವಿಲ್ಲದೆ ಬಂಗಾಳ ಉತ್ತಮವಾಗಿದೆ” ಎಂದು ಮುಖ್ಯಮಂತ್ರಿಯ ಸೋದರಳಿಯ ಮತ್ತು ಟಿಎಂಸಿ ಯುವ ವಿಭಾಗದ ಮುಖ್ಯಸ್ಥ ಅಭಿಷೇಕ್ ಬ್ಯಾನರ್ಜಿ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
ಬಂಗಾಳದಲ್ಲಿ ಟಿಎಂಸಿ ಪರ ಅಭಿಯಾನದ ಭಾಗವಾಗಿ ಒಂದು ಲಕ್ಷಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರು ರಾಜ್ಯಾದ್ಯಂತ ಸಂಚರಿಸಿ ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮತ್ತು ಅದರ ಕೋಮು ಸೌಹಾರ್ದತೆಯನ್ನು ಕಾಪಾಡಲು ಮಮತಾ ಬ್ಯಾನರ್ಜಿ ಏಕೆ ಮಹತ್ವ ಎಂಬುದನ್ನು ಜನರಿಗೆ ಅರ್ಥವಾಗುವಂತೆ ಮಾಡುತ್ತಾರೆ ಎಂದು ಪಕ್ಷ ಹೇಳಿದೆ.


