“ಭಾರತ್ ಮಾತಾ ಕಿ ಜೈ ಘೋಷಣೆಯು ಕೆಲವರಿಗೆ ಕಿರಿಕಿರಿಯೆನಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಇಂದು ನಡೆದ ಬಿಜೆಪಿ ಸಂಸತ್ ಸದಸ್ಯರ ಸಭೆಯಲ್ಲಿ ಮನಮೋಹನ್ ಸಿಂಗ್‌ರವರ ಹೆಸರು ಹೇಳದೆ ಟೀಕಾಪ್ರಹಾರ ನಡೆಸಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕರು ರಾಷ್ಟ್ರೀಯತಾವಾದಿ ಘೋಷಣೆಗೆ “ನಾಚಿಕೆಪಡುತ್ತಾರೆ” ಎಂಬ ಬಿಜೆಪಿಯ ಆರೋಪವನ್ನು ಪ್ರಧಾನಿ ಪುನರ್ ಪ್ರತಿಪಾದಿಸಿದ್ದಾರೆ.
ಜವಾಹರಲಾಲ್ ನೆಹರೂ ಅವರ ಮೇಲೆಯೂ ಮುಗಿಬಿದ್ದ ಮೋದಿ “ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿಯೂ ಸಹ, ಭಾರತ್ ಮಾತಾ ಘೋಷಣೆಯ ಬಗ್ಗೆ ಕೆಲವರು ಅದೇ ರೀತಿ ಭಾವಿಸಿದರು” ಎಂದು ಪ್ರಧಾನಿ ಟೀಕಿಸಿದ್ದಾರೆ.
ಕಳೆದ ವಾರ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಮನಮೋಹನ್ ಸಿಂಗ್‌ರವರು “ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಭಾರತ್ ಮಾತಾ ಕಿ ಜೈ ಘೋಷಣೆ ಇಂದು ದುರುಪಯೋಗವಾಗುತ್ತಿದೆ. ಉಗ್ರವಾದಿ ಜನರು ಸಂಪೂರ್ಣ ಭಾವನಾತ್ಮಕ ನೆಲಯಲ್ಲಿ ಇದನ್ನು ಉಪಯೋಗಿಸುತ್ತಿರುವುದರಿಂದ ಲಕ್ಷಾಂತರ ನಾಗರಿಕರು ಹೊರಗುಳಿಯುವ ಅಪಾಯವಿದೆ” ಎಂದು ಹೇಳಿದ್ದರು.
ಜವಾಹರಲಾಲ್ ನೆಹರೂ ಅವರ ಮಾತನ್ನು ಉಲ್ಲೇಖಿಸಿ, “ಈ ಭಾರತ್ ಮಾತಾ ಯಾರು? ನೀವು ಯಾರ ಗೆಲುವು ಬಯಸುತ್ತೀರಿ? ಪರ್ವತಗಳು ಮತ್ತು ನದಿಗಳು, ಕಾಡುಗಳು ಮತ್ತು ಹೊಲಗಳು ಎಲ್ಲರಿಗೂ ಪ್ರಿಯವಾದವು, ಆದರೆ ಅಂತಿಮವಾಗಿ ಎಣಿಸಲ್ಪಟ್ಟದ್ದು ಭಾರತದ ಜನರು … ವಿಶಾಲವಾದ ಭೂಮಿಯಲ್ಲಿ ಹರಡಿದ್ದಾರೆ” ಎಂದು ಮನಮೋಹನ್ ಸಿಂಗ್‌ರವರು ಜವಾಹರಲಾಲ್ ನೆಹರೂ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು.
ಭಾರತ್ ಮಾತಾ ಘೋಷಣೆ ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಿವಾದದ ವಸ್ತುವಾಗಿದೆ. ಎರಡು ವರ್ಷಗಳ ಹಿಂದೆ, ಪಕ್ಷದ ಆಗಿನ ಮುಖ್ಯಸ್ಥ ಅಮಿತ್ ಶಾ ಅವರು ಈ ಘೋಷಣೆಯನ್ನು ಕೂಗಲು ಕಾಂಗ್ರೆಸ್ “ನಾಚಿಕೆಪಡುತ್ತದೆ” ಎಂದು ಆರೋಪಿಸಿದ್ದರು.


