ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರಿನಲ್ಲಿ ತೆಂಗು-ಅಡಿಕೆ ಮರಗಳ ಕಡಿಸಿದ ವಿರುದ್ದ ಜನರ ಪ್ರತಿಭಟನೆ ತೀವ್ರಗೊಂಡಿರುವ ನಡುವೆಯೇ ಹೊಸದೊಂದು ವಿಷಯ ಚರ್ಚೆಗೆ ಗ್ರಾಸವಾಗಿದೆ. ತಹಶೀಲ್ದಾರ್ ಹೊದಲೂರು ಕೆರೆ ಒತ್ತುವರಿ ತೆರವಿಗೆ ಮುಂದಾಗಿದ್ದರು ಎಂಬುದು ಸದ್ಯಕ್ಕಿರುವ ಮಾಹಿತಿ. ಕೆರೆ ಒತ್ತುವರಿ ಮಾಡಿ ತೋಟಗಳನ್ನು ಮಾಡಿಕೊಂಡಿರುವವರನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಗೆ ಸಿದ್ದತೆ ಮಾಡಿಕೊಂಡಿದ್ದರು. ಹೀಗಾಗಿ ತಹಶೀಲ್ದಾರ್ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿದರೆ ಒಂದೇ ಕಲ್ಲಿಗೆ ಹಲವು ಹಕ್ಕಿ ಹೊಡೆದು ತೋಟಗಳು ತೆರವುಗೊಳ್ಳದಂತೆ ತಡೆಯುವ ಹುನ್ನಾರ ಇಲ್ಲಿ ಅಡಗಿದೆ ಎಂದು ತಿಳಿದುಬಂದಿದೆ.
ಹೊದಲೂರು ಕೆರೆ ಸುಮಾರು 250 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಹೇಮಾವತಿ ನಾಲೆಯಿಂದ ನೀರು ಹರಿಯುತ್ತದೆ. ಈ ಭಾಗ ಫಲವತ್ತಾದ ಭೂಪ್ರದೇಶವಾಗಿದೆ. ಹೊದಲೂರು ಕೆರೆಗೆ ಹೊಂದಿಕೊಂಡಂತೆ ಹಲವು ತೋಟಗಳು ಇವೆ. ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ 7 ಎಕರೆ ತೋಟವೂ ಇದೆ. ಈ ಕೆರೆಯ ಬಹುಭಾಗ ಒತ್ತುವರಿ ಮಾಡಿಕೊಂಡು ತೋಟ ಮಾಡಿದ್ದಾರೆ. ಪ್ರಭಾವಿ ರಾಜಕಾರಣಿಯೂ ಈ ಕೆರೆ ಒತ್ತುವರಿ ಫಲಾನುಭವಿ ಮತ್ತು ತೋಟದ ಮಾಲಿಕ. ಹಾಗಾಗಿ ಸುಪ್ರೀಂಕೋರ್ಟ್ ಆದೇಶದಂತೆ ಕೆರೆ ಒತ್ತುವರಿ ತೆರೆವುಗೊಳಿಸುವ ಯೋಜನೆಯನ್ನು ಗುಬ್ಬಿಯ ತಹಶೀಲ್ದಾರ್ ಸಿದ್ದತೆ ಮಾಡಿಕೊಂಡಿದ್ದರು. ಇದೇ ಇಷ್ಟೆಲ್ಲಾ ಅನಾಹುತಕ್ಕೆ ಮೂಲ.

ಕಾನೂನು ರೀತ್ಯ ಕ್ರಮ ಜರುಗಿಸಲು ಈ ಪ್ರಭಾವಿ ರಾಜಕಾರಣಿ ಬಿಡುವುದಿಲ್ಲ. ಅಧಿಕಾರಿ ತನ್ನ ಮಾತು ಕೇಳದಿದ್ದರೆ ಅವರಿಗೆ ವರ್ಗಾವಣೆಯಂತು ಗ್ಯಾರೆಂಟಿ. ಇದೇ ಉದ್ದೇಶದಿಂದ ತಿಪ್ಪೂರು ಕೋಡಿಕೆಂಪಮ್ಮ ದೇವಿ ಪೂಜಾರಿಯ ಅಣ್ಣತಮ್ಮಂದಿರ ನಡುವೆ ಒಡಕು ಮೂಡಿಸಿದರು. ಅಧಿಕಾರಿಗಳ ಮೇಲೆ ಒತ್ತಡ ತಂದರು. ಪ್ರಭಾವಿ ರಾಜಕಾರಣಿಯ ಮಾತುಗಳನ್ನು ಶಿರಸವಹಿಸಿ ಪಾಲಿಸುವ ಗ್ರಾಮ ಲೆಕ್ಕಿಗ ಮತ್ತು ಕಂದಾಯ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ತೆಂಗು, ಅಡಿಕೆ ಮರಗಳನ್ನು ಕತ್ತರಿಸುವಂತಹ ಕೃತ್ಯಕ್ಕೆ ಕೈಹಾಕಿದರು. ಯಶಸ್ವಿಯೂ ಆದರು ಎಂಬ ಚರ್ಚೆಗಳು ಸಾರ್ವಜನಿಕರ ನಡುವೆ ನಡೆಯುತ್ತಿವೆ.
ಕೋಡಿಕೆಂಪಮ್ಮ ದೇವಿ ಪೂಜಾರಿಗಳು ತೋಟಗಳನ್ನು ತೆರವು ಮಾಡಲು ಜನರಿಂದೇನು ಒತ್ತಡ ಇರಲಿಲ್ಲ. ಆದರೂ ಅಧಿಕಾರಿಗಳು ಮಾಡಿದ ತಪ್ಪಿಗೆ ಸಿದ್ದಮ್ಮ ಸಂಕಟ ಅನುಭವಿಸಬೇಕಾಗಿದೆ. ಜನರು ತೋಟವನ್ನು ತೆರವುಗೊಳಿಸುವಂತಹ ಕೆಲಸಕ್ಕೆ ಖಂಡಿತ ಒಪ್ಪುವುದಿಲ್ಲ. ಅದರ ಬದಲಿಗೆ ಹೊದಲೂರು ಕೆರೆ ಒತ್ತುವರಿ ಮಾಡಿಕೊಂಡಿರುವುದನ್ನು ಮೊದಲು ಕಾರ್ಯಾಚರಣೆ ನಡೆಸಿ ತೆರವುಗೊಳಿಸಬೇಕು ಎಂಬ ಒತ್ತಾಯ ಕೇಳಿ ಬರತೊಡಗಿದೆ.
ಗುಬ್ಬಿ ತಾಲೂಕು ಹೊತ್ತಿ ಉರಿಯುತ್ತಿದೆ. ಯಾವುದನ್ನೂ ಕೇಳಬೇಡಿ. ಹೊದಲೂರು ಕೆರೆ ಒತ್ತುವರಿ ವಿಷಯ ಪ್ರಸ್ತಾಪಿಸಬೇಡಿ. ಅದು ತುಂಬ ಸೂಕ್ಷ್ಮವಾದುದು. ತೋಟ ಕಡಿದುಹಾಕಿರುವುದೇ ದೊಡ್ಡ ಚರ್ಚೆ ಆಗುತ್ತಿದೆ. ಇನ್ನು ಆ ವಿಷಯಕ್ಕೆ ಕೈಹಾಕಿದರೆ ನೆಮ್ಮದಿ ಇರುವುದಿಲ್ಲ. ಈಗ ಬಿಜೆಪಿ ಮತ್ತು ಜೆಡಿಎಸ್ ವಿರುದ್ದದ ಜಗಳವಾಗಿ ಪರಿಣಮಿಸಿದೆ. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿದ್ದಾರೆ. ತಿಪ್ಪೂರು ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ಜೋರಾಗಿ ನಡೆಯುತ್ತಿದೆ. ಸಾಕು ಸಹವಾಸ ಎನ್ನುತ್ತಿದ್ದಾರೆ ಸ್ಥಳೀಯ ಪತ್ರಕರ್ತರು.
ತಹಶೀಲ್ದಾರ್ ಪರ-ವಿರುದ್ದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಕೆರೆ ಒತ್ತುವರಿ ಮಾಡಿಸಿದರೆ ಪ್ರಭಾವಿ ರಾಜಕಾರಣಿಗೆ ತೊಂದರೆಯಾಗಲಿದೆ. ಅದೇ ಕಾರಣಕ್ಕೆ ಕೆಲವು ಮಾಧ್ಯಮಗಳು ಕೂಡ ಪ್ರಭಾವಿ ರಾಜಕಾರಣಿ ಬೆಂಬಲಕ್ಕೆ ನಿಂತು, ತಹಶೀಲ್ದಾರ್ ವಿರುದ್ದ ಕತ್ತಿ ಮಸೆಯುತ್ತಿವೆ. ನಿಜವಾಗಿ ಮರಗಳನ್ನು ಕಳೆದುಕೊಂಡಿರುವ ಸಿದ್ದಮ್ಮ ಅವರಿಗೆ ಪರಿಹಾರ ಸಿಗಬೇಕು. ಹಿಂದೆ ನಿಂತು ಕಲ್ಲು ಹೊಡೆಯುತ್ತಿರುವುದು ಯಾರು ಎಂಬುದು ಬಹಿರಂಗಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.


