ತುಮಕೂರು ನಗರದಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಹರಡಿದೆ ಎಂದು ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂಗೆ ದೂರು ನೀಡಲಾಗಿದೆ.
ನಗರದ ಚಿಕ್ಕಪೇಟೆಯ ಇಬ್ಬರಿಗೆ ಕೊರೊನಾ ವೈರಸ್ ಹರಡಿದೆ ಎಂಬುದು ಸುದ್ದಿ ಸುಳ್ಳು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಸ್ಪಷ್ಟಪಡಿಸಿದ್ದಾರೆ.
ವದಂತಿ ಹರಡಿ ಜನರಲ್ಲಿ ಭಯ ಉಂಟು ಮಾಡುತ್ತಿದ್ದು ಯಾರು ಇಂತಹ ಸುದ್ದಿಯನ್ನು ಹರಡಿದ್ದಾರೆ ಎಂಬುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂಗೆ ದೂರು ದಾಖಲಿಸಲಾಗಿದೆ. ತುಮಕೂರಿನಲ್ಲಿ ಇದುವರೆಗು ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ವೀರಭದ್ರಯ್ಯ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸುಳ್ಳು ಸುದ್ದಿ ಪ್ರಸಾರ ಹಿನ್ನೆಲೆ ಡೈಲಿ ಹಂಟ್ ಉರ್ದು ನ್ಯೂಸ್ ಸಾಮಾಜಿಕ ಜಾಲತಾಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರು ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೊರೋನಾ ಸೊಂಕಿನಿಂದ ಮೃತಪಟ್ಟ ಕಲಬುರಗಿಯ ವಯೋವೃದ್ಧನಿಗೆ ಕುಟುಂಬದ ವೈದ್ಯ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ವೈದ್ಯನಿಗೂ ಸೋಂಕು ತಗುಲಿದ್ದು ಆ ವ್ಯಕ್ತಿಯು ಸಹ ಇಂದು ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿ ಜಿಲ್ಲೆಯ ಜನರಲ್ಲಿ ಭಯ, ಅಶಾಂತತೆ ಮತ್ತು ಆತಂಕದ ವಾತಾವರಣ ಸೃಷ್ಟಿಗೆ ಕಾರಣರಾದ ಡೇಲಿ ಹಂಟ್ ಉರ್ದು ನ್ಯೂಸ್ ಸಾಮಾಜಿಕ ಜಾಲತಾಣದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


