ಭಾರತದ ಪೊಲೀಸರಿಗೆ ಈಗ ಒದಗಿಬಂದಿರುವ ಸವಾಲು ಭಿನ್ನವಾದದ್ದು. ಕೋಮುಗಲಭೆ, ರಾಜಕೀಯ ಗಲಭೆ, ಸಮುದಾಯ ಕೇಂದ್ರಿತ ದಾಳಿಗಳು, ಗ್ಯಾಂಗ್ ವಾರ್, ಎಲ್ಲಾ ಬಗೆಯ ಭಯೊತ್ಪಾದಕರ ದಾಳಿ, ದೇಶದ ಆಂತರಿಕವಾಗಿ ಕಾನೂನು- ಸುವ್ಯವಸ್ಥೆ ಗೆ ಧಕ್ಕೆ ಬಂದಾಗ ಅವುಗಳನ್ನು ನಿಭಾಯಿಸುವ ಕ್ಷಮತೆ ಮತ್ತು ಸಾಮರ್ಥ್ಯ ಪೊಲೀಸರಲ್ಲಿದೆ.
ಆದರೆ ಹೀಗಿನ ಪರಿಸ್ಥಿತಿ ತುಂಬಾ ಭಿನ್ನವಾದದ್ದು. ಕೊರೊನಾ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಪೊಲೀಸರು ಬೇರೆ ತರವಾದ ಮನೋಸ್ಥಿತಿಯನ್ನೆ ಹೊಂದಿರಬೇಕಾಗಿದೆ. ಆದರೆ ಅವರಿಗೆ ಇದುವರೆಗೂ ರೂಢಿಸಿರುವ ಮನೋಸ್ಥಿತಿಯಿಂದ ಹೊರಗೆಳೆಯುವುದು ಕಷ್ಡದ ಕೆಲಸ. ಹೊಡಿ. ಬಡಿ, ಶೂಟ್ ಮಾಡು ಇವೇ ಅವರ ಕಾರ್ಯಕ್ಷಮತೆಯ ಪಾಠಗಳಾಗಿರುವಾಗ ಇದಕ್ಕಿಂತ ಭಿನ್ನವಾಗಿ ವರ್ತಿಸುವುದು ಅಷ್ಟು ಸುಲಭವಲ್ಲ. ಬಹಳಷ್ಟು ಪೊಲೀಸರು ಸಂದರ್ಭಾನುಸಾರವಾಗಿ ಮಾನವೀಯತೆಯನ್ನು ಮೆರೆದ ಉದಾಹರಣೆಗಳಿವೆ. ಆದರೆ ಪೊಲೀಸರು ಮಾನವ ಹಕ್ಕುಗಳನ್ನು ಹತ್ತಿಕ್ಕಿದ್ದೆ ಹೆಚ್ಚು ಎಂಬ ವರದಿಗಳಿವೆ.
ಲಾಕ್‌ಡೌನ್‌ನ ಈ ಹೊತ್ತಿನಲ್ಲಿ ಪೊಲೀಸರು ಸಮುದಾಯದ ಸ್ನೇಹಿತರಂತೆ ವರ್ತಿಸಬೇಕಾಗಿದೆ. ಜನರ ಹಿತದ ದೃಷ್ಟಿಯಲ್ಲಿ ಸರ್ಕಾರ ಜಾರಿಗೆ ತಂದ ನಿಯಮಗಳನ್ನು ಪಾಲಿಸುವುದು ಜನರ ಕರ್ತವ್ಯ. ಆದರೆ ಈ ಒತ್ತಡದಲ್ಲಿ ಜನರನ್ನು ಹೊಡೆದು ಬಡಿದು ನಿರ್ಬಂಧಿಸುವ ಸಂದರ್ಭ ಇದಲ್ಲ. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ಸಂಸ್ಕೃತಿ ಬ್ರಿಟೀಷರ ಪಳೆಯುಳಿಕೆಯಂತೆ ಉಳಿದಿವೆ. ಅದು ಬದಲಾಗಿಲ್ಲ. ” socioyo police ” (ಸಾಮಾಜಿಕ ಆರಕ್ಷಕ) ಕಲ್ಪನೆಯಿಂದ ದೂರವೆ ಉಳಿದಿದೆ. ಜನಸ್ನೇಹಿ ಪೊಲೀಸ್ ಎಂಬ ಘೋಷಣೆಗಳು ಜನರಲ್ಲಿ ನಂಬಿಕೆ ಹುಟ್ಟಿಸಿಲ್ಲ. ಇದಕ್ಕೆ ಕಾರಣ ಭಾರತದ ಪೊಲೀಸ್ ವ್ಯವಸ್ಥೆ ಭಾರತದ ಸಾಮಾಜಿಕ ಸಂರಚನೆಗೆ ತಕ್ಕಂತೆ ಬದಲಾಗಿಲ್ಲ.

ಈ ಕಾರಣದಿಂದಲೆ ಪೊಲೀಸರು ಪದೇ ಪದೇ ಜನರ ತಿರಸ್ಕಾರಕ್ಕೆ ಮತ್ತು ಜನರ ಶತ್ರುವಿನಂತೆ ಕಾಣತೊಡಗುತ್ತಾರೆ. ಅಸಲಿಗೆ ಪೊಲೀಸರು ನಮ್ಮಂತೆ ಮನುಷ್ಯರು. ಇಲ್ಲಿ ಪೊಲೀಸರ ವ್ಯಕ್ತಿಯ ನೆಲೆಯಲ್ಲಿನ ದೋಷಗಳಿಗಿಂತ ವ್ಯವಸ್ಥೆ ಕಟ್ಟಿಕೊಟ್ಟಿರುವ ಲೋಪಗಳಿಗೆ ಪೊಲೀಸರೂ ಬಲಿಯಾಗುತ್ತಿದ್ದಾರೆ. ಇದು ವಿಪರ್ಯಾಸ.
ಪೊಲೀಸರೆಂದರೆ ಅವರು ರಾಜಕೀಯ ನಿರ್ಣಯಗಳ ಜಾರಿಯ ಕಾಲಾಳುಗಳು ಎಂಬ ಸ್ಥಾಪಿತ ಕಟ್ಟುಪಾಡುಗಳನ್ನು ಶಿಸ್ತು ಪಾಲನೆ ನೆಪದಲ್ಲಿ ಪೊಲೀಸ್ ಸಮುದಾಯದಲ್ಲಿ ಬಿತ್ತಲಾಗಿದೆ.
ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕನ ಮೇಲೆ ಹಲ್ಲೆ ನಡೆಸಿದ ಆರೋಪ ಪೊಲೀಸರನ್ನು ಸುಲಭವಾಗಿ ಪಾರಾಗಲು ಬಿಡುವುದಿಲ್ಲ.
ಅದೇ ಶಿಕಾರಿಪುರದ ಸುಣ್ಣದಳ್ಳಿಯ ಬಡ ರೈತನೊಬ್ಬ ಪೊಲೀಸರ ಏಟಿನಿಂದ ಸತ್ತರೂ ಪೊಲೀಸರು ಸುಲಭವಾಗಿ ಪಾರಾಗಿಬಿಡುತ್ತಾರೆ.

ಈ ಎರಡೂ ಜವಾಬ್ದಾರಿಯನ್ನು ಪೊಲೀಸ್ ವ್ಯವಸ್ಥೆಯೇ ನಿರ್ವಹಿಸುತ್ತಾ ಒಂದು ‘ಸಾಮಾಜಿಕ ಅನ್ಯಾಯ’ ವನ್ನು ಪ್ರಜ್ಞಾಪೂರ್ವಕವಾಗಿಯೇ ನಡೆಸಿಬಿಡುತ್ತದೆ.
ಒಬ್ಬ ಪೊಲೀಸ್ ಪೇದೆ ಅಥವಾ ಓರ್ವ ಅಧಿಕಾರಿ ಜನಸ್ನೇಹಿ ಆಗುವುದರಿಂದ ಲಾಭವಿಲ್ಲ. ಇಡೀ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿಸುವಲ್ಲಿ ಪ್ರಯತ್ನಗಳು ಸಾಗಬೇಕಿದೆ.
ಇದನ್ನೂ ಓದಿ: ವಿಡಿಯೊ| ಮಿತಿ ಮೀರುತ್ತಿರುವ ಪೊಲೀಸರ ವರ್ತನೆ-ಕೊರೊನಾ ವಾರಿಯರ್ ಸ್ವಯಂಸೇವಕನ ಕೈ ಮುರಿದ ದಾವಣಗೆರೆ ಪೊಲೀಸ್
ಅದಾದಾಗ ಪೊಲೀಸರ ಗುಂಡಿಗೆ, ಲಾಠಿ ಏಟಿಗೆ ಜನಸಾಮಾನ್ಯ, ನಿರಪರಾಧಿ, ಅಮಾಯಕ ಬಲಿಯಾಗುವುದು ತಪ್ಪುತ್ತದೆ. ಅದೇ ಕಾಲಕ್ಕೆ ಪೊಲೀಸರು ಕಟಕಟೆಯಲ್ಲಿ ನಿಲ್ಲವುದು ತಪ್ಪುತ್ತದೆ.
-(ಎನ್. ರವಿಕುಮಾರ್ ಟೆಲೆಕ್ಸ್‌ರವರ ಫೇಸ್‌ಬುಕ್ ವಾಲ್‌ನಿಂದ)


