21 ದಿನಗಳ ಲಾಕ್‌ಡೌನ್ ಅಂತೂ ಇಂತೂ ಒಂದು ವಾರ ಪೂರೈಸಿದೆ. ಆದರೆ ಸಮರ್ಪಕ ಯೋಜನೆಯಿಲ್ಲದ ಕಾರಣ ಅಸ್ತವ್ಯಸ್ತತೆ ಮನೆ ಮಾಡಿದೆ. ಒಂದು ಕಡೆ ವಲಸೆ ಕಾರ್ಮಿಕರು, ನಿರಾಶ್ರಿತರು ಆಹಾರ ವಸತಿಗಳಿಲ್ಲದೆ ತೊಂದರೆಗೊಳಗಾದರೆ, ಅಗತ್ಯ ವಸ್ತುಗಳ ಖರೀದಿಗೆ ಹೊರಬಂದವರ ಮೇಲೆ ಪೊಲೀಸರು ಲಾಠಿ ಬೀಸಿದಾಯ್ತು. ಪೊಲೀಸರ ಅಮಾನವೀಯ ಕೃತ್ಯಗಳ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಲಾಠಿ ಮನೆಯಲ್ಲಿಟ್ಟು ಬರುವಂತೆ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್ ಸೂಚನೆ ನೀಡಬೇಕಾದ ಪರಿಸ್ಥಿತಿ ಬಂತು.
ಈಗ ಪೊಲಿಸ್ ಇಲಾಖೆ ಜನ ಬೀದಿಗೆ ಬರದಂತೆ ತಡೆಯಲು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಅದೆಂದರೆ ಬೈಕ್, ಕಾರುಗಳಲ್ಲಿ ಜನ ಬಂದಲ್ಲಿ ಅವರ ವಾಹವನ್ನು ಜಪ್ತಿ ಮಾಡಿ ಒಂದು ತಿಂಗಳ ನಂತರ ದಂಡ ಕಟ್ಟಿಸಿಕೊಂಡು ಬಿಡುವುದಾಗಿದೆ. ಅಂದರೆ ಲಾಕ್‌ಡೌನ್ ಅವಧಿ ಮುಗಿದರೂ ನಿಮ್ಮ ವಾಹನ ಮಾತ್ರಿ ನಿಮ್ಮ ಕೈಸೇರದ ಪರಿಸ್ಥಿತಿ ನಿರ್ಮಿಸಲು ಮುಂದಾಗಿದೆ ಪೊಲೀಸ್ ಇಲಾಖೆ.
ಇಂದು ಬೆಳಿಗ್ಗೆಯಿಂದಲೇ ಬೆಂಗಳೂರಿನ ಹಲವು ನಗರಗಳಲ್ಲಿ ಈ ಕುರಿತು ಪ್ರಚಾರ, ಜಾಗೃತಿ, ಎಚ್ಚರಿಕೆ ನೀಡಲಾಗಿದೆ. ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಪೊಲೀಸರು ಹೊಡೆಯುವುದಿಲ್ಲ ಬದಲಾಗಿ ನಿಮ್ಮ ಗಾಡಿ ಜಪ್ತಿ ಮಾಡುತ್ತಾರೆ. ಒಂದು ತಿಂಗಳವರೆಗೂ ಯಾವುದೇ ಕಾರಣಕ್ಕೂ ವಾಪಸ್ ಮಾಡುವುದಿಲ್ಲ ಎಂದು ಸಾರಲಾಗಿದೆ.
ಇದನ್ನೂ ಓದಿ: ಕೊರೋನಾ ಕಾಲವೆಂಬುದು “ಮನುಷ್ಯನ ಮೇಲಿನ ಗೂಢಚಾರಿಕೆ”ಯ ಯುಗದ ಬಹುಮುಖ್ಯ ಸಂಧ್ಯಕಾಲ..
ಆದರೆ ಮನೆಬಳಕೆಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದೂ ಸಹ ಸ್ಪಷ್ಟನೆ ನೀಡಿಲ್ಲ. ಬದಲಿಗೆ ಬೆದರಿಕೆ ಮಾತ್ರ ಬಂದಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸರಿಯಾದ ಯೋಜನೆಯಿಲ್ಲದೆ ಪ್ರಕಟಿಸಿದ ಲಾಕ್‌ಡೌನ್‌ನಿಂದಾಗಿ ಮುಂದೆ ಇನ್ನು ಏನೇನು ಅನಾಹುತಗಳಾಗುತ್ತವೊ ಕಾದು ನೋಡಬೇಕಿದೆ.


