ದೀಪ ಹಚ್ಚಿದರೆ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತದೆ ಎಂದು ಮೈಸೂರಿನ ಬಿಜೆಪಿ ಶಾಸಕ ರಾಮದಾಸ್ ಹೇಳಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ, ಬ್ಯಾಟರಿ, ಮೊಬೈಲ್ ಟಾರ್ಚ್ ಹೊತ್ತಿಸಿ ಕೊರೊನ ವಿರುದ್ದ ದೇಶದ ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದ್ದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ರಾಮದಾಸ್ ಜನರಿಗೆ ದೀಪ, ಕ್ಯಾಂಡಲ್ ಹಂಚಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ “ಕೊರೊನಾ ವಿರುದ್ದ ಕಳೆದ ಬಾರಿ ಜನರು ಚಪ್ಪಾಳೆ ತಟ್ಟಿ, ಶಂಖ-ಜಾಗಟೆ ಊದುವ ಮೂಲಕ ಇಡೀ ದೇಶ ಕೊರೊನಾ ವಿರುದ್ದ ಯುದ್ದ ಮಾಡಿದೆ. ಚಪ್ಪಾಳೆ ಹೊಡಿದ ಶಬ್ದ ತರಂಗದ ಮುಖಾಂತರ ವೈರಸ್ ಸಾಯುತ್ತದೆ ಎಂದು ವೈಜ್ಞಾನಿಕವಾಗಿ ಸಾಬಿತಾಗಿದೆ” ಎಂದು ಹೇಳಿದರು.
“ಕಳೆದ ಭಾರಿಯಂತೆ ಈ ಭಾರಿಯೂ ಪ್ರಧಾನ ಮಂತ್ರಿಯ ಮನವಿಯಂತೆ ಭಾನುವಾರ ರಾತ್ರಿ ವಿದ್ಯುತ್ ಆಫ್ ಮಾಡಿ ಕತ್ತಲಲ್ಲಿದ್ದು 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ದೀಪ, ಕ್ಯಾಂಡಲ್ ಅಥವಾ ಮೊಬೈಲ್ ಟಾರ್ಚ್ ಬೆಳಕನ್ನು ಹಾಕಬೇಕು. ಇದು ಕೊರೊನ ವಿರುದ್ದ ದೇಶ ಇದೆ ಎನ್ನುವ ಜಾಗೃತಿ ಮಾಡುವ ಕೆಲಸವಾಗಿದೆ. ಜಾಗೃತಿ ಮಾಡುದಲ್ಲದೆ ದೀಪದ ಬೆಳಕಿಗೆ ಕ್ರಿಮಿ-ಕೀಟಗಳು ಆಕರ್ಷಣೆಯಾಗುವಂತೆ ಕ್ರಿಮಿಯೂ ಅದರ ಬಳಿ ಬಂದು ಸಾಯುತ್ತದೆ. ದೀಪವೂ ಕತ್ತಲಲ್ಲಿ ಕೇವಲ ಬೆಳಕಾಗಿ ಇರದೆ ಅದು ಒಂದು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ” ಎಂದು ಹೇಳಿದರಲ್ಲದೆ, “ಮನೆಯೊಳಗಡೆ ಇರುವ ಕ್ರಿಮಿಯನ್ನು ಕೂಡಾ ಸಾಯಿಸುವುದಕ್ಕಾಗಿ ನಾವು ನಮ್ಮದೇ ಜಾಲಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಶಾಸಕರ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಒಳಗಾಗಿದೆ. ವೈದ್ಯರು ಕೊರೊನ ಶಾಖಕ್ಕೆ ಸಾಯುವುದಿಲ್ಲ ಎಂದು ಹೇಳುತ್ತಾ ಬರುತ್ತಿದ್ದಾರೆ, ಅದಲ್ಲದೆ ಸಾಮಾಜಿಕ ಅಂತರದ ಬಗ್ಗೆ ಹೇಳುತ್ತಾರೆ ಆದರೆ ಶಾಸಕರು ಜನಸಂದಣಿಯ ನಡುವೆ ಓಡಾಡಿ ದೀಪ ಹಂಚುತ್ತಿದ್ದಾರೆ ಇದು ಕೊರೊನ ವಿರುದ್ದದ ಹೋರಾಟಕ್ಕೆ ದೊಡ್ಡ ಹೊಡೆತ ನೀಡುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ರೇಖಾ ಶ್ರೀನಿವಾಸ್ ಎಂಬವರು “ಡಿ ಗ್ರೂಪ್ ಹುದ್ದೆಗೂ ಕೂಡ ಸಾಮಾನ್ಯ ಜ್ಞಾನ, ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ ಎಲ್ಲದರಲ್ಲೂ ಪರಿಣಿತರಾಗಿರಬೇಕು. ಸ್ಪಧಾ೯ತ್ಮಕ ಪರೀಕ್ಷೆ, ಸಂದಶ೯ನಗಳ ಮೂಲಕ ನೇಮಕಾತಿ ನಡೆಯುತ್ತದೆ. ಆದರೆ ನಮ್ಮ ಜನಪ್ರತಿನಿಧಿಗಳಿಗೆ ಯಾಕೆ ಇವೆಲ್ಲ ಪರೀಕ್ಷೆಗಳಿಲ್ಲ” ಎಂದು ಪ್ರಶ್ನಿಸುತ್ತಾ “ಸರಿಯಾದ ಮಾಹಿತಿ ಗೊತ್ತಿದ್ದರೆ ಮಾತಾಡಿ, ಇಲ್ಲವೇ ಸುಮ್ಮನಿರಿ ಅದು ಬಿಟ್ಟು ಮೂಖ೯ತನದ ಪ್ರದಶ೯ನ ಮಾಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾರ್ಟೆಡ್ ಅಕೌಂಟೆಂಟ್ ಆಗಿರುವ ಮುಧೋಳದ ಶುಭಾಶ್ ಸಂಗಣ್ಣನವರ್ ಅವರು “ರಾಮದಾಸ್ ಅವರ ಸಮರ್ಥನೆ ಸರಿಯಾಗಿಲ್ಲ, ಸುಮ್ಮನೆ ಏನೇನೋ ಹೇಳುತ್ತಾರೆ. ನಮ್ಮ ಹಳ್ಳಿ ಜನಾ ವಿದ್ಯುತ್ ಕಡಿತದಿಂದ ಪ್ರತಿ ದಿನ ಕ್ಯಾಂಡಲ್ ಹಚ್ಚುತ್ತಾರೆ. ಪ್ರತಾಪಸಿಂಹ ಅವರು ಕೂಡಾ ಸಾರ್ವಜನಿಕರಿಗೆ ಕ್ಯಾಂಡಲ್ ವಿತರಿಸುವ ಬಗ್ಗೆ ಹೇಳುತ್ತಾರೆ ಆದರೆ ಅದರ ಬದಲಿಗೆ ಮಾಸ್ಕ್, ಸ್ಯಾನಿಟೇಷನ್ ಹಂಚಿಲಿ” ಎಂದು ಹೇಳಿದ್ದಾರೆ.
ರಾಮ್‌ದಾಸ್‌ರವರ ಹೇಳಿಕೆಯನ್ನು ಕೊರೊನಾ ಏನಾದರೂ ಓದಿದರೆ ಕರೋನಾ ಜೀವನದಲ್ಲಿ ಜಿಗುಪ್ಸೆ ಬಂದು ನೇಣು ಹಾಕಿಕೊಂಡು ಅಥವಾ ರೈಲಿಗೆ ತಲೆ ಕೊಟ್ಟು ಸೂಸೈಡ್ ಮಾಡಿಕೊಳ್ಳುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಮಾರ್ ದಿನೂ ಟ್ರೋಲ್ ಮಾಡಿದ್ದಾರೆ.
ಬಿಜೆಪಿ ಶಾಸಕ ರಾಮದಾಸ್ (ಈತ ಡಾಕ್ಟರ್ ಬೇರೆ) ಪ್ರಕಾರ, ದೀಪದ ಶಾಖಕ್ಕೆ ವೈರಸ್ ಢಮಾರ್!
ಹಂಗಿದ್ರೆ ಮೊದ್ಲೇ ಇದನ್ನ ಹೇಳೋಕೆ ಏನಾಗಿತ್ತೋ ಬೇಕೂಫ? ಡಾಕ್ಟರ್ ಸಮುದಾಯಕ್ಕೆ ಕಳಂಕ ಇಂತಹ ಶಾಖಾ ಪೀಡೆಗಳು ಎಂದು ಪತ್ರಕರ್ತರಾದ ಪಿ.ಕೆ ಮಲ್ಲನಗೌಡರ್‌ರವರು ಕಿಡಿಕಾರಿದ್ದಾರೆ.


