ದೇಶದಾದ್ಯಂತ ಕೊರೊನ ಪ್ರಕರಣಗಳು ಹೆಚ್ಚುತ್ತಿದ್ದು ಇದುವರೆಗೆ 3374 ಮಂದಿಗೆ ಸೊಂಕು ಇರುವುದು ದೃಢಪಟ್ಟಿದೆ ಹಾಗು 77 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಿಂದ ಶೇಕಡ 33ರಷ್ಟು ಸೋಂಕು ಹರಡಿದೆಯಲ್ಲದೆ ಇದರ ಪರಿಣಾಮ ದೇಶದ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೊರೊನ ಸೋಂಕು ಹರಡಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಕೊರೊನ ಸೋಂಕಿಗೆ ಕೋಮು ಬಣ್ಣ ನೀಡಬಾರದು ಎಂದು ಹೇಳಿರುವ ನಡುವೆಯೇ ಆರೋಗ್ಯ ಸಚಿವಾಲಯ ಭಿನ್ನ ನಿಲುವನ್ನು ವ್ಯಕ್ತಪಡಿಸಿದೆ.
ಗುಜರಾತ್ ನಲ್ಲಿ ಇದುವರೆಗೆ ಕೊರೊನ ಸೊಂಕಿಗೆ 11 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ 8 ಮಂದಿಯಲ್ಲಿ ಕೊರೊನ ಸೋಂಕು ಇರುವುದು ಪತ್ತೆಯಾಗಿದೆ. ಭಾವನಗರದಲ್ಲಿ 35 ವರ್ಷದ ಮಹಿಳೆ ಕೊರೊನಕ್ಕೆ ಬಲಿಯಾಗಿದ್ದಾರೆ. 26 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರು ಮಾರ್ಚ್ 26ರಂದು ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಎಂದು ತಿಳಿದುಬಂದಿದೆ.
ಸೂರತ್ ನಗರದಲ್ಲಿ ಭಾನುವಾರ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು ಇಬ್ಬರಲ್ಲೂ ಪಾಸಿಟೀವ್ ವರದಿ ಬಂದಿದೆ. ಲಾಕ್ ಡೌನ್ ನಡುವೆಯೂ ದೇಶಾದ್ಯಂತ ಕೊರೊನ ವ್ಯಾಪಕವಾಗಿ ಹರಡುತ್ತಿದೆ. ಆದರೆ ಕೇಂದ್ರ ಸರ್ಕಾರ ಚಪ್ಪಾಳೆ ಹೊಡೆದು, ಗಂಟೆ ಹೊಡೆದು, ದೀಪ, ಮೇಣದಬತ್ತಿ ಹಚ್ಚಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿವಂತೆ ಹೇಳಿ ಜನರಲ್ಲಿ ಮೂಢನಂಬಿಕೆ ಬಿತ್ತುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ.


