ಒಬ್ಬರು ಉಸಿರನ್ನು ಮೂವತ್ತು ಸೆಕೆಂಡ್‌ಗಳಿಂದ ಒಂದು ನಿಮಿಷದವರೆಗೆ ಹಿಡಿದಿಟ್ಟುಕೊಳ್ಳುವುದು COVID-19 ಗೆ ಸ್ವಯಂ ರೋಗನಿರ್ಣಯ ಪರೀಕ್ಷೆಯಾಗಬಹುದು. ಹಾಗೆಯೇ ಮೂಗಿನ ಹೊಳ್ಳೆಗೆ ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ವ್ಯಕ್ತಿಯ ಹೊಟ್ಟೆಯಲ್ಲಿ ವೈರಸ್‌ನ್ನು ಕೊಲ್ಲಬಹುದು ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ಏಪ್ರಿಲ್ 25, 2020 ರಂದು ಆಜ್ ತಕ್ ಚಾನೆಲ್‌ನೊಂದಿಗೆ ಇ-ಅಜೆಂಡಾ ಎಂಬ 24 ನಿಮಿಷಗಳ ವೀಡಿಯೊ ಸಂಭಾಷಣೆಯಲ್ಲಿ ರಾಮದೇವ್ ಈ ಮೆಲಿನ ರೀತಿಯಾಗಿ ಹೇಳಿದ್ದಾರೆ. ಸಂದರ್ಶನದ ವೀಡಿಯೊ ನೋಡಿ.
ಯಾವುದೇ ಕಾಯಿಲೆ ಇರುವ ಅಥವಾ ಇಲ್ಲದ ವ್ಯಕ್ತಿಯು ಉಸಿರಾಡದೆ 30 ಸೆಕೆಂಡುಗಳು ಅಥವಾ ಒಂದು ನಿಮಿಷದವರೆಗೆ ತಮ್ಮ ಉಸಿರನ್ನು ಹಿಡಿದಿಡಲು ಸಾಧ್ಯವಾದರೆ, ಅವರಿಗೆ COVID-19 ತಗುಲಿಲ್ಲ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಕೊರೊನಾ ಬಂದಿರುವವರು ಇದ್ದರೆ, ಸಾಸಿವೆ ಎಣ್ಣೆಯ ಹನಿಗಳನ್ನು ಮೂಗಿಗೆ ಹಾಕಿದರೆ ಅದು ಹೊಟ್ಟೆಗೆ ಹೋಗಿ ಅಲ್ಲಿನ ಕೊರೊನಾ ವೈರಸ್ ಅನ್ನು ಕೊಲ್ಲುತ್ತದೆ ಎಂದು ಶಿಫಾರಸು ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್
ರಾಮ್‌ದೇವ್‌ರವರು ಹೇಳಿರುವ ಮೇಲಿನ ಎರಡೂ ಹೇಳಿಕೆಗಳು ಯಾವುದೇ ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿಲ್ಲ.
ಮೊದಲನೇಯದಾಗಿ ಮುಂಬೈನ ವೋಕ್ಹಾರ್ಡ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ. ಜೀನಮ್ ಷಾರವರು ಹೇಳುವ ಹಾಗೆ “ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಅಧ್ಯಯನಗಳು ನಡೆದಿಲ್ಲ. ಕರೋನವೈರಸ್ ಅನ್ನು ಪರೀಕ್ಷಿಸುವ ಏಕೈಕ ಮಾರ್ಗವೆಂದರೆ RT-PCR ಪರೀಕ್ಷೆಯ ಮೂಲಕ” ಎಂದಿದ್ದಾರೆ.
COVID-19 ನ ಸಾಮಾನ್ಯ ಲಕ್ಷಣಗಳು ಜ್ವರ, ಒಣ ಕೆಮ್ಮು ಮತ್ತು ದಣಿವು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೆಲವು ರೋಗಿಗಳಿಗೆ ನೋವು, ನೆಗಡಿ ಮತ್ತು ಗಂಟಲು ನೋವು ಅಥವಾ ಅತಿಸಾರ ಇರಬಹುದು. ಹಾಗೆಯೇ ಐದರಲ್ಲಿ ಒಬ್ಬರಿಗೆ ಮಾತ್ರ ಉಸಿರಾಟದ ತೊಂದರೆ ಇರುತ್ತದೆ ಎಂದು ತಿಳಿಸಿದ್ದಾರೆ.
ಎರಡನೇಯದಾಗಿ ಸಾಸಿವೆ ಎಣ್ಣೆಯಿಂದ ಕರೋನವೈರಸ್ ಕೊಲ್ಲುತ್ತದೆ ಎನ್ನುವುದು. ಹೊಟ್ಟೆಯು ಗ್ಯಾಸ್ಟ್ರಿಕ್ ಜ್ಯೂಸ್ ರೂಪದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊಂದಿರುತ್ತದೆ ಆದರೆ ಈ ರಸಗಳು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತವೆ ಎಂಬುದನ್ನು ಯಾವುದೇ ವೈಜ್ಞಾನಿಕ ಪುರಾವೆಗಳು ತೋರಿಸಿಲ್ಲ. ಈ ಕುರಿತು ಅಧ್ಯಯನಗಳು ನಡೆದಿಲ್ಲ. ಸಾಸಿವೆ ಎಣ್ಣೆ ಕೊರೊನಾ ವೈರಸ್ ಮೇಲೆ ಪರಿಣಾಮ ಬೀರುವ ಕುರಿತು ಯಾವುದೇ ಅಧ್ಯಯನ ಅಥವಾ ಸಿದ್ಧಾಂತವಿಲ್ಲ ಎಂದು ಡಾ. ಜೀನಮ್ ಷಾ ಹೇಳಿದ್ದಾರೆ.
ಸಾಸಿವೆ ಎಣ್ಣೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ, ದೇಹದ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳುತ್ತದೆ, ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ, ಕೆಂಪು ರಕ್ತ ಕಣಗಳನ್ನು ಬಲಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುತ್ತದೆ ಮತ್ತು ಮಧುಮೇಹವನ್ನು ಕಡಿಮೆ ಮಾಡುತ್ತದೆ. ಆದರೆ ಕೊರೊನಾ ಕಡಿಮೆ ಮಾಡುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.
ಇದನ್ನೂ ಓದಿ: ನಟ ರಿಷಿ ಕಪೂರ್ ವೈರಲ್ ವಿಡಿಯೋ ಸಾವಿನ ಹಿಂದಿನ ರಾತ್ರಿ ಚಿತ್ರೀಕರಿಸಿದ್ದಲ್ಲ; ನಾವೆಲ್ಲರೂ ಮೂರ್ಖರಾಗಿದ್ದು ಹೀಗೆ…


