ಕೊರೊನಾ ವೈರಸ್ ಟ್ರ್ಯಾಕಿಂಗ್ ಆ್ಯಪ್ ’ಆರೋಗ್ಯ ಸೇತು’ “ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ”ಯಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಏಪ್ರಿಲ್ ಆರಂಭದಲ್ಲಿ ಸ್ವಯಂಪ್ರೇರಿತ ಬಳಕೆಗಾಗಿ ಉದ್ದೇಶಿಸಲಾದ ಈ ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರವು ಎಲ್ಲಾ ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ಕಡ್ಡಾಯಗೊಳಿಸಿದೆ. ಖಾಸಗಿ ಸಂಸ್ಥೆಯ ಉದ್ಯೋಗಿಗಳಲ್ಲಿ ತಮ್ಮ ಫೋನ್‌ನಲ್ಲಿ ಆ್ಯಪ್ ಇಲ್ಲದಿರುವುದು ಕಂಡುಬಂದಲ್ಲಿ, ಕಂಪನಿಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.
ಈ ಹಿನ್ನೆಲೆಯಲ್ಲಿ “ಆರೋಗ್ಯ ಸೇತು ಅಪ್ಲಿಕೇಶನ್, ಒಂದು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯಾಗಿದ್ದು, ಖಾಸಗಿ ಕಂಪನಿಗೆ ಇದರ ನಿಯಂತ್ರಣ ಜವಾಬ್ದಾರಿ ನೀಡಲಾಗಿದೆ. ಯಾವುದೇ ಸಾಂಸ್ಥಿಕ ಮೇಲ್ವಿಚಾರಣೆಯಿಲ್ಲದಿರುವುದರಿಂದ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆಯ ಕುರಿತು ಇದು ಗಂಭೀರವಾದ ಪ್ರಶ್ನೆಗಳನ್ನು ಎತ್ತುತ್ತದೆ. ತಂತ್ರಜ್ಞಾನವು ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ; ಆದರೆ ನಾಗರಿಕರನ್ನು ಅವರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ವಿಷಯಗಳನ್ನು ಪತ್ತೆಹಚ್ಚಲು ಬಳಕೆಯಾಗುವ ವಸ್ತುವಾಗಬಾರದು” ಎಂದು ರಾಹುಲ್ ಗಾಂಧಿ ಶನಿವಾರ ಟ್ವೀಟ್ ಮಾಡಿದ್ದಾರೆ.
The Arogya Setu app, is a sophisticated surveillance system, outsourced to a pvt operator, with no institutional oversight – raising serious data security & privacy concerns. Technology can help keep us safe; but fear must not be leveraged to track citizens without their consent.
— Rahul Gandhi (@RahulGandhi) May 2, 2020
ಅಪ್ಲಿಕೇಶನ್‌ನಲ್ಲಿ ಗೌಪ್ಯತೆ ಕಾಳಜಿಗಳ ಬಗ್ಗೆ ಕೆಲವು ತಜ್ಞರು ಹೇಳಿದ್ದನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಜಿಪಿಎಸ್ ಆಧಾರಿತ ಸ್ಥಳ ದತ್ತಾಂಶವನ್ನು ಬಳಸುವುದು ಒಂದು ಪ್ರಮುಖ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಪರವಾಗಿ ನೀತಿ ಆಯೋಗವು ಆ್ಯಪ್ ಬಳಕೆಯನ್ನು ಸಮರ್ಥಿಸಿಕೊಂಡಿದೆ. ಜಿಪಿಎಸ್ ಡೇಟಾ ಹೊಸ ಹಾಟ್‌ಸ್ಪಾಟ್‌ಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಸ್ಥಳದ ಡೇಟಾವನ್ನು ಅಪ್ಲಿಕೇಶನ್‌ನಿಂದ ವೈಯಕ್ತಿಕ ಆಧಾರದ ಮೇಲೆ ಬಳಸುವ ಬದಲಾಗಿ, ಒಟ್ಟು ಆಧಾರದ ಮೇಲೆ ಬಳಸಲಾಗುತ್ತದೆ ಎಂದು ಅದು ಹೇಳಿದೆ.
ವಿಸ್ತೃತ ಲಾಕ್‌ಡೌನ್ ಆರಂಭವಾಗುವ ಮೇ 04 ರಿಂದ ಪ್ರತಿಯೊಬ್ಬ ಖಾಸಗಿ ಕಂಪನಿಯ ಉದ್ಯೋಗಿಯು ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಹೊಂದಿರಬೇಕು ಎಂದು ಸರ್ಕಾರ ಹೇಳಿದೆ. ಮನೆಯಿಂದ ಕೆಲಸ ಮಾಡುವವರು ಆ್ಯಪ್ ಬಳಸಬೇಕಾಗಿಲ್ಲ. ಮುಂದಿನ ಕೆಲವು ವಾರಗಳಲ್ಲಿ 30 ಕೋಟಿ ಆ್ಯಪ್ ಡೌನ್‌ಲೋಡ್‌ಗಳನ್ನು ಸಾಧಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಕಂಟೈನ್‌ಮೆಂಟ್ ವಲಯದಲ್ಲಿರುವವರು ಪ್ರತಿಯೊಬ್ಬರು ಇದನ್ನು ಹೊಂದಿರಲೇಬೇಕಾಗುತ್ತದೆ.
ರಾಹುಲ್ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಈ ಅಪ್ಲಿಕೇಶನ್ “ಜನರನ್ನು ರಕ್ಷಿಸುವ ಪ್ರಬಲ ಒಡನಾಡಿ” ಎಂದು ಹೇಳಿದ್ದಾರೆ.
Daily a new lie.
Aarogya Setu is a powerful companion which protects people. It has a robust data security architecture.
Those who indulged in surveillance all their lives, won’t know how tech can be leveraged for good! https://t.co/t8ThXmddcS— Ravi Shankar Prasad (@rsprasad) May 2, 2020
ಅಲ್ಲದೇ “ದೈನಂದಿನ ಹೊಸ ಸುಳ್ಳು. ಆರೋಗ್ಯ ಸೇತು ಜನರನ್ನು ರಕ್ಷಿಸುವ ಪ್ರಬಲ ಒಡನಾಡಿ. ಇದು ದೃಢವಾದ ದತ್ತಾಂಶ ಭದ್ರತಾ ಸಾಮರ್ಥ್ಯ ಹೊಂದಿದೆ. ತಮ್ಮ ಜೀವನದುದ್ದಕ್ಕೂ ಕಣ್ಗಾವಲಿನಲ್ಲಿ ತೊಡಗಿರುವವರಿಗೆ, ತಂತ್ರಜ್ಞಾನವನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂದು ತಿಳಿದಿರುವುದಿಲ್ಲ!” ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಈ ಅಪ್ಲಿಕೇಶನ್‌ನ ಬಳಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಶಿಕ್ಷಣ ಸಂಸ್ಥೆಗಳು ಸಹ ಪ್ರೋತ್ಸಾಹಿಸಿವೆ.
ಭಾರತವು ಶನಿವಾರ 2,411 ಪ್ರಕರಣಗಳನ್ನು ಹೊಂದಿದ್ದು ಒಟ್ಟು 37,776 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 1,223 ಸಾವುಗಳು ಈವರೆಗೆ ವರದಿಯಾಗಿವೆ ಎಂದು ಅದು ಹೇಳಿದೆ. ಕಳೆದ 24 ಗಂಟೆಗಳಲ್ಲಿ ಎಪ್ಪತ್ತೊಂದು ಸಾವುಗಳು ವರದಿಯಾಗಿವೆ.
ಇದನ್ನೂ ಓದಿ: ಲಾಕ್ ಡೌನ್ ನಂತರದ ಪ್ರಥಮ ಆದ್ಯತೆ – ಕೃಷಿ ಮತ್ತು ಗ್ರಾಮೀಣ ವಲಯಗಳ ಪುನಶ್ಚೇತನ


