ವಲಸೆ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತಲುಪಲು ಇನ್ನು ಹರಸಾಹಸ ಪಡುತ್ತಿದ್ದಾರೆ. ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕಾಂಗ್ರೆಸ್ ಒಂದು ಕೋಟಿ ರೂ ನೆರವು ನೀಡಿದೆ. ಅದರ ಬೆನ್ನಿಗೆ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಉಚಿತ ಪ್ರಯಾಣ ಎಂದು ಘೋಷಿಸಿದೆ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಕಾರ್ಮಿಕರ ಕಷ್ಟ ಕೇಳಲು ಇಂದು ಕಾಂಗ್ರೆಸ್ ಪಕ್ಷದ ನಾಯಕರ ದಂಡೇ ಬೆಂಗಳೂರಿನ ಮೆಜೆಸ್ಟಿಕ್‌ಗೆ ಆಗಮಿಸಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ಮುಖಂಡ ಹೆಚ್.ಕೆ ಪಾಟೀಲ್, ವಿ.ಎಸ್ ಉಗ್ರಪ್ಪ ಉಪಸ್ಥಿತರಿದ್ದು ಕಾರ್ಮಿಕರನ್ನು ಮಾತನಾಡಿಸಿದರು.
ಸಿದ್ದರಾಮಯ್ಯನವರು ಕೆಲ ಕಾರ್ಮಿಕರನ್ನು ಮಾತನಾಡಿಸಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಜೊತೆಗೆ ಕೊರೊನಾ ಮುಗಿದ ನಂತರ ಕೆಲಸಕ್ಕೆ ವಾಪಸ್ ಬೆಂಗಳೂರಿಗೆ ಬರುತ್ತೀರಾ ಎಂದು ಕೇಳಿದರು.
“ವಲಸೆ ಕಾರ್ಮಿಕರು ಬಹಳ ವರ್ಷದಿಂದ ಇಲ್ಲಿ ಕೆಲಸ ಮಾಡಿದ್ದು ಅವರಿಗೆ ಊಟು ವಸತಿಯ ಕೊರತೆಯುಂಟಾಗಿದೆ. ನಾವು ಅವರಿಗೆ ಊಟದ ಕಿಟ್‌ಗಳನ್ನು ನೀಡಿ, ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಅವರ ಊರುಗಳಿಗೆ ಕಳಿಸಿಕೊಡಬೇಕೆಂದು ಒತ್ತಾಯಿಸಿದ್ದೇವು. ಆದರೆ ಸರ್ಕಾರ ಎರಡುಪಟ್ಟು ಬಸ್ ದರ ತೆಗೆದುಕೊಳ್ಳುತ್ತಿತ್ತು. ಇದಕ್ಕೆ ಹಣದ ಕೊರತೆಯಿದೆ ಎಂದು ಸರ್ಕಾರ ಹೇಳಿತ್ತು. ಅದಕ್ಕೆ ನಾವು ನಮ್ಮ ಪಕ್ಷದಿಂದ ಕಾರ್ಮಿಕರ ಬಸ್ ಚಾರ್ಜ್ ನಾವೇ ಕೊಡಲು ತೀರ್ಮಾನಿಸಿದೆವು. ಅದಕ್ಕಾಗಿ ಒಂದು ಕೋಟಿ ರೂ ನೆರವು ಕೊಟ್ಟಿದ್ದೇವೆ. ನಂತರ ಸರ್ಕಾರಕ್ಕೆ ಜ್ಞಾನೋದಯವಾಗಿ ಉಚಿತ ಎಂದಿದ್ದಾರೆ. ಆದರೂ ಬಹಳಷ್ಟು ಊರುಗಳಿಗೆ ಇನ್ನು ಬಸ್ ಬಿಟ್ಟಿಲ್ಲ. ಬೆಳಗಾಂ, ಹಾವೇರಿ ಜನ ಕಾಯುತ್ತಿದ್ದಾರೆ. ಖಾಸಗಿ ಬಸ್ ವ್ಯವಸ್ಥೆ ಮಾಡಿಯಾದರೂ ಸರಿ ಅವರನ್ನು ಊರಿಗೆ ಕಳಿಸಬೇಕಿದೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ಡಿ.ಕೆ ಶಿವಕುಮಾರ್ ಮಾತನಾಡಿ, ಈ ಸರ್ಕಾರಕ್ಕೆ ಕಣ್ಣು ಕಿವಿ ಏನೂ ಇಲ್ಲ. ನಾನು ನಿನ್ನೆಯೇ ಹೇಳಿದಂತೆ ಭಿಕ್ಷೆ ಬೇಡಿದರೂ ಸರಿಯೇ ಕಾರ್ಮಿಕರ ಬಸ್ ಹಣ ನಾವು ಕೊಡುತ್ತೇವೆ ಎಂದಿದ್ದೆ. ಅದೇ ರೀತಿ ಇಂದು ಒಂದು ಕೋಟಿ ಕೊಡಲು ಬಂದಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ಉಚಿತವಾಗಿ ಕಾರ್ಮಿಕರನ್ನು ಕಳಿಸಿಕೊಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದ 25 ಎಂಪಿಗಳು ಮನೆಯಲ್ಲಿ ಕೂತಿದ್ದಾರೆ ಎಂದರು.
ನಾವು ಒಂದಷ್ಟು ಊಟದ ಪ್ಯಾಕೆಟ್‌ಗಳನ್ನು ಕಾರ್ಮಿಕರಿಗೆ ಒದಗಿಸಿದ್ದೇವೆ. ಇಲ್ಲಿನ ಪರಿಸ್ಥಿತಿ ಮತ್ತು ವ್ಯವಸ್ಥೆ ಹೇಗಿದೆ ಎಂದು ಪರೀಶಿಲಿಸಲು ಬಂದಿದ್ದೇವೆ. ಆದರೆ ಸರ್ಕಾರ ಇನ್ನೂ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಜೊತೆ ಮಾತನಾಡುತ್ತೇವೆ ಎಂದರು. ಅಲ್ಲದೇ ಕಾರ್ಮಿಕರು ಕೊರೊನಾ ಮುಗಿದ ನಂತರ ಬೆಂಗಳೂರಿಗೆ ವಾಪಸ್ ಬರಬೇಕೆಂದು ಮನವಿ ಮಾಡಿದರು. ಬಸ್ ಗಳು ಸಾಲುತ್ತಿಲ್ಲ ಎಂಬ ಪ್ರಶ್ನೆಗೆ ಖಾಸಗಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ನಾವು ಕೂಡ ಹಣ ಕೊಡುತ್ತೇವೆ ಎಂದರು.
ಇದನ್ನೂ ಓದಿ: ಕಾರ್ಮಿಕರ ಪ್ರಯಾಣ: ಕಾಂಗ್ರೆಸ್‌ನಿಂದ 1 ಕೋಟಿ ರೂ ನೆರವು ಘೋಷಿಸಿದ ಬೆನ್ನಲ್ಲೇ ಉಚಿತ ಪ್ರಯಾಣ ಘೋಷಿಸಿದ ಸಿಎಂ!


