ಲಾಕ್ ಡೌನ್ ನಿಂದ ಕೆಲಸವಿಲ್ಲ, ಕೂಲಿ ಇಲ್ಲ, ಹಣವಿಲ್ಲ ಏನ್ ಮಾಡೋದು? ಕೇವಲ ಪಡಿತರ ದಾನ್ಯಗಳನ್ನು ನೀಡಿದರೆ ಸಾಕೇ? ಹಾಲು, ತರಕಾರಿಗೆ ಹಣ ಬೇಡವೇ, ನಮ್ಮ ಏರಿಯಾದ ಸೀಲ್‌ಡೌನ್ ತೆರವುಗೊಳಿಸಿ ಎಂದು ಪ್ರಶ್ನಿಸಿದ ನೂರಾರು ಮಹಿಳೆಯರು ಮನೆಗಳಿಂದ ಹೊರಬಂದು ಮೊದಲ ಬಾರಿಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.
ನಗರದ ಪೂರ್ ಹೌಸ್ ಕಾಲೋನಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಪಿಎಚ್ ಕಾಲೋನಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿ ಇದೀಗ ಗುಣಮುಖನಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದು ಕಾಲೋನಿಯಲ್ಲಿ ಕ್ವಾರಂಟೈನ್ ನಲ್ಲಿಟ್ಟಿದ್ದ ಎಲ್ಲರಿಗೂ ನೆಗೆಟೀವ್ ಬಂದಿದೆ. ಹೀಗಾಗಿ ಲಾಕ್ ಡೌನ್ ತೆರವುಗೊಳಿಸಿ ಕೆಲಸ ಮಾಡಲು ಅವಕಾಶ ಕೊಡುವಂತೆ ಮಹಿಳೆಯರು ಪ್ರತಿಭಟನೆ ನಡೆಸಿದರು.
10ನೇ ವಾರ್ಡ್ ಸೇರಿದಂತೆ ಎಲ್ಲೆಡೆಯೂ ಮೇ 1 ರಿಂದ ಹಾಲು ನಿಲ್ಲಿಸಲಾಗಿದೆ. ಕಾರ್ಪೋರೇಟರ್ ತಮ್ಮ ಸ್ವಂತ ಹಣದಲ್ಲೂ ಕೆಲ ದಿನಗಳು ಹಾಲು ವಿತರಣೆ ಮಾಡಿದರು. ಮನೆಯಲ್ಲಿ ಮಕ್ಕಳಿದ್ದಾರೆ. ಅವರಿಗೆ ಹಾಲು ಇಲ್ಲದೆ ಸುಮ್ಮನಿರಿಸಲು ಆಗುತ್ತಿಲ್ಲ. ಮೊದಲು ಗಂಡಸರಿಗೆ ಕೆಲಸ ಕೊಡಿ. ಅವರು ದುಡಿದು ತಂದು ನಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ. ಮನೆಯಲ್ಲಿ ತರಕಾರಿ, ಹಾಲಿಗೂ ದುಡ್ಡಿಲ್ಲ ಎಂದು ನೊಂದ ಮಹಿಳೆಯರು ದೂರಿದರು.
ಇದರಿಂದ ಕೆರಳಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನವೀನ್ ಪ್ರತಿಭಟನಾಕಾರರ ಮೇಲೆ ಹರಿಹಾಯ್ದಿದ್ದಾರೆ. ನೀವು ಗುಂಪುಗೂಡಲು ಅವಕಾಶ ಕೊಟ್ಟಿದ್ಯಾರು? ಒಬ್ಬರಿಗೆ ಪಾಸಿಟಿವ್ ಬಂದರೂ ನೀವೆಲ್ಲರೂ ಜವಾಬ್ದಾರರಾಗುತ್ತೀರಿ. ನಿಮಗೇನು ಬೇಕು ನನಗೆ ಹೇಳಿ ಕೊಡಿಸುತ್ತೇನೆ ಎಂದು ಧಮಕಿ ಹಾಕಿದ್ದಾರೆ. ಆದರೆ ಮಹಿಳೆಯರು ಕೇಳುವ ಪ್ರಶ್ನೆಗಳಿಗೆ ಪೊಲೀಸರಲ್ಲಿ ಉತ್ತರ ಇರಲಿಲ್ಲ. ಆಗ ಪೊಲೀಸರು ನೀವು ದಿಢೀರ್ ಪ್ರತಿಭಟನೆ ಮಾಡುತ್ತಿದ್ದೀರಿ. ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಬೆದಿರಿಸುವ ತಂತ್ರ ಮಾಡಿದರು. ಆದರೂ ಮಹಿಳೆಯರು ತಮ್ಮ ನೋವನ್ನು ತೋಡಿಕೊಂಡರು. ಸಮಸ್ಯೆಗಳನ್ನು ಪರಿಹರಿಸುವಂತೆ ಕೇಳಿಕೊಂಡರು. ಹಾಗಾಗಿ ಪೊಲೀಸರು ಕೂಡ ಮೌನಕ್ಕೆ ಶರಣಾದರು.
ಈ ಕುರಿತು ನಾನುಗೌರಿ.ಕಾಂ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಷರೀಪ್, “ತುಮಕೂರು ನಗರದೆಲ್ಲಡೆ ಲಾಕ್ ಡೌನ್ ಸಡಿಲಗೊಳಿಸಲಾಗಿದೆ. ಎಂ.ಜಿ.ರಸ್ತೆಯಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೂ ಪಿ.ಎಚ್.ಕಾಲೋನಿಯನ್ನು ಸೀಲ್ ಡೌನ್ ಮಾಡಿ ತಾರತಮ್ಯ ಮಾಡಲಾಗುತ್ತಿದೆ. ಹಾಗಾಗಿ ಮಹಿಳೆಯರು ಪ್ರತಿಭಟಿಸುವ ಅನಿವಾರ್ಯತೆ ಎದುರಾಗಿದೆ” ಎಂದಿದ್ದಾರೆ.
ಜಿಲ್ಲಾಧಿಕಾರಿಗಳು ಪಿ ಎಚ್ ಕಾಲೋನಿಯಲ್ಲಿ ವಾಸಿಸುವ ಕುಟುಂಬಗಳಿಗೆ ರೆಡ್ ಕ್ರಾಸ್ ನಿಂದ ಬಂದಿರುವ ಬೇಳೆ ಮತ್ತು ಆಹಾರದ ಕಿಟ್ ಗಳನ್ನು ಕೊಡುತ್ತೇನೆಂದು ಖಚಿತ ಭರವಸೆ ನೀಡಿದ್ದರು. ಆದರೆ ಈಗ ಮೌನ ವಹಿಸಿದ್ದಾರೆ. ಬೇರೆಯವರು ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ, ಇಲ್ಲಿನ ಜನರನ್ನು ಕತ್ತಲೆಯಲ್ಲಿಡಲಾಗಿದೆ. ಈಗ ಪಿ.ಎಚ್. ಕಾಲೋನಿಯಲ್ಲಿ ಸೋಂಕಿತರು ಇಲ್ಲ. ಹೀಗಾಗಿ ಅವರಿಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ಅವರು ಮನವಿ ಮಾಡಿದರು.
ಕಳೆದ 14 ದಿನಗಳಿಂದ ತುಮಕೂರು ನಗರದಲ್ಲಿ ಒಂದೂ ಕೊರೊನ ಸೋಂಕಿತ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ದೈಹಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ವ್ಯಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಇದನ್ನೂ ಓದಿ: ಉಚಿತ ಟ್ರೈನ್ ಎಂಬುದು ದೊಡ್ಡ ಸುಳ್ಳು: ಕಾರ್ಮಿಕರಿಂದ ಹಣ ವಸೂಲಿಗಿಳಿದ ಕೇಂದ್ರ ಸರ್ಕಾರ


