ಕುವೆಂಪು ಅವರ ನಂತರದಲ್ಲಿ ದಟ್ಟ ವೈಚಾರಿಕ ತಳಹದಿಯ ಕನ್ನಡಪ್ರಜ್ಞೆಯನ್ನು ರೂಪಿಸಿದವರು ಲಂಕೇಶ್. ಕನ್ನಡಭಾಷೆಯ ಬಗ್ಗೆ ಗಾಢವಾಗಿ ಚಿಂತಿಸಿದ ಲಂಕೇಶ್ ವಚನಕಾರರ ರೀತಿಯಲ್ಲಿ ಆಳವಾದ ಚಿಂತನೆಯನ್ನು ಈ ಭಾಷೆಯೊಳಗೆ ಅಭಿವ್ಯಕ್ತಿಸುತ್ತಲೇ ಅದು ಸಾಮಾನ್ಯರಿಗೂ ತಲುಪುವಂತಹ ಶೈಲಿಯಲ್ಲಿ ಬರೆದವರು. ‘ಲಂಕೇಶರ ಗದ್ಯ ಇಪ್ಪತ್ತನೆಯ ಶತಮಾನದ ಕೊಡುಗೆಯೆಂದು’ ಎಚ್.ಎಸ್ ಶಿವಪ್ರಕಾಶ್ ಅವರ ಅಭಿಪ್ರಾಯವೂ ಈ ಮಾತುಗಳನ್ನು ಸಮರ್ಥಿಸುತ್ತದೆ. ಗೋಕಾಕ್ ಚಳವಳಿಯನ್ನು ಬೆಂಬಲಿಸಿದರೂ, ಕನ್ನಡಪರ ಹೋರಾಟಗಳ ಮೂಲಭೂತವಾದಿತನದ ಆಯಾಮಗಳನ್ನು ಲಂಕೇಶ್ ಎಚ್ಚರದಲ್ಲಿ ಗಮನಿಸುತ್ತಿದ್ದರು. ಕನ್ನಡಪರ ಹೋರಾಟಗಳು ಸ್ವಾರ್ಥಸಾಧನೆಯ ಮಾಧ್ಯಮಗಳಾದಾಗ ಕಟುವಾಗಿ ಟೀಕಿಸುತ್ತಿದ್ದರು. ಇದು ಅವರ ಮೇಲಿನ ದೈಹಿಕ ಹಲ್ಲೆಗೂ ಕಾರಣವಾದದ್ದಿದೆ.
ಲಂಕೇಶ್ ಸಾಹಿತ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದರು. ಜಾಗೃತ ಸಾಹಿತ್ಯ ಸಮಾವೇಶÀದ ಕೊನೆಯ ದಿನ ಅವರಾಡಿದ ಮಾತುಗಳಲ್ಲಿ ಈ ಗಂಭೀರತೆಯ ಸ್ವರೂಪವನ್ನು ಅರಿಯಬಹುದು. “ಒಳಜೀವವೇ ಇಲ್ಲದವರು ಸಾಹಿತಿಯಾಗುವುದಿಲ್ಲ. ಒಳಜೀವ-ಇನ್ನರ್ ಲೈಫ್-ಅಂದರೆ ಏನೆಂದರೆ, ಜನರ ಸಂಪರ್ಕಕ್ಕೆ ಮೀರಿ, ಬಾಹ್ಯ ಜಗತ್ತಿನ ಆಗುಹೋಗುಗಳನ್ನೆಲ್ಲ ಹೊಟ್ಟೆಯಲ್ಲಿ ತುಂಬಿಕೊಂಡು ನೋಯುವ, ನವೆಯುವ ಅನುಭವ; ಸೃಷ್ಟಿಕಾರ್ಯದ ಮೂಲದ್ರವ್ಯ ಅದು. ಇದನ್ನುಳ್ಳ ಸೂಕ್ಷ್ಮಜ್ಞನಾದ ಪ್ರತಿಯೊಬ್ಬ ಸಾಹಿತಿಯೂ ಸಾವಿರಾರು ಜನರೆದುರು ಮಾತಾಡುವಾಗ ಸಾರ್ವಜನಿಕ ಕ್ರಿಯೆಯಲ್ಲಿ ತೊಡಗಿದಾಗ ದಿಗ್ಭ್ರಮೆಗೊಳ್ಳುತ್ತಾನೆ. ಹತ್ತು ನಿರರ್ಥಕ ಸಭೆಗಳು ಆತನ ಹತ್ತುಹನಿ ಜೀವರಸವನ್ನು ನಾಶ ಮಾಡುತ್ತವೆ, ಇಂಗಿಸುತ್ತವೆ. ಆದರೆ ಅರ್ಥಪೂರ್ಣ ಕ್ರಿಯೆಯಲ್ಲಿ, ಅರ್ಥಪೂರ್ಣ ಸಭೆಯಲ್ಲಿ, ಆತನ ಆಂತರ್ಯಕ್ಕೆ ಹೊಸಜೀವ ಹನಿಯುತ್ತದೆ” ಇಲ್ಲಿನ ‘ಬಾಹ್ಯ ಜಗತ್ತಿನ ಆಗುಹೋಗುಗಳನ್ನೆಲ್ಲ ಹೊಟ್ಟೆಯಲ್ಲಿ ತುಂಬಿಕೊಂಡು ನೋಯುವ, ನವೆಯುವ ಅನುಭವ’ ಎನ್ನುವುದು ಸಾಹಿತ್ಯಕ್ಕೆ ಸಾಮಾಜಿಕ ನೆಲೆಯನ್ನೂ ಒದಗಿಸುತ್ತಿದೆ.
ಲಂಕೇಶರು ಸಾಹಿತ್ಯವಿಮರ್ಶೆಯನ್ನು ಅಕಡೆಮಿಕ್ ಶಿಸ್ತಿನಲ್ಲಿ ಬರೆದವರಲ್ಲ, ಅಕಡೆಮಿಕ್ ಶಿಸ್ತು ಅನೇಕ ಸುಳ್ಳುಗಳಿಗೆ ಕಾರಣವಾಗಬಹುದು ಎಂಬುದಾಗಿ ನಂಬಿದ್ದ ಲಂಕೇಶ್ ತಮ್ಮದೇ ಅನೌಪಚಾರಿಕ ವಿಮರ್ಶಾ ಭಾಷೆಯೊಂದನ್ನು ಬೆಳೆಸಿಕೊಂಡರು. ಇದು ಅವÀರ ಮಿತಿಯೂ ಹೌದು. ಶಕ್ತಿಯೂ ಹೌದು. ಅಕೆಡೆಮಿಕ್ ಶಿಸ್ತಿರದ ಕಾರಣ ವಿಮರ್ಶೆಯೊಂದು ಒಳಗೊಳ್ಳಬೇಕಾದ ಸಂಗತಿಗಳಿಂದ ಲಂಕೇಶರ ವಿಮರ್ಶೆ ಸೊರಗಿದರೆ, ಭಾರವಾದ ಅಕೆಡೆಮಿಕ್ ಶಿಸ್ತುಗಳ ಗೈರುಹಾಜರಿಯ ಕಾರಣದಿಂದಲೇ ಅದು ಎಲ್ಲ ವರ್ಗದ ಓದುಗರನ್ನು ತಲುಪಲು ಯಶಸ್ವಿಯಾಯಿತು. ಈ ಲಕ್ಷಣ ಲಂಕೇಶರ ಭಾಷೆ ಕುರಿತ ಚಿಂತನೆಯನ್ನು ಮಂಡಿಸುವ ಬರವಣಿಗೆಗಳಿಗೂ ಅನ್ವಯಿಸುತ್ತದೆ.ನಮ್ಮ ಭಾಷೆ ನಮ್ಮ ಘನತೆ, ಗಾಂಭೀರ್ಯ, ಸ್ವಾಭಿಮಾನದೊಂದಿಗೆ ಹೆಣೆದುಕೊಂಡಿರುವ ಬಗ್ಗೆ ಆಳವಾಗಿ ಚಿಂತಿಸುವ ಲಂಕೇಶರು ಕನ್ನಡದ ಬಗ್ಗೆ ಗಂಭೀರರಾಗಿಲ್ಲದ ಕನ್ನಡಿಗರ ಅಭಿಮಾನಶೂನ್ಯತೆಯ ಬಗ್ಗೆ ವ್ಯಗ್ರರಾಗುತ್ತಾರೆ. ಲಂಕೇಶರ ಈ ವ್ಯಗ್ರತೆ ಕನ್ನಡ ಸಾಹಿತಿಯೊಬ್ಬನ ಪ್ರಾಮಾಣಿಕ ಸಿಟ್ಟಿನಂತೆ ತೋರುತ್ತದೆ ಎನ್ನುವುದು ನಿಜ. ಆದರೆ ಇದಕ್ಕೆ ಸ್ವಾಭಿಮಾನದ ಭಾವನಾತ್ಮಕ ಸಂಗತಿಗಳನ್ನು ಮೀರಿದ ಆಯಾಮಗಳಿವೆ ಎಂಬುದರತ್ತ ಲಂಕೇಶರ ಚಿಂತನೆ ವಿಸ್ತರಿಸಿದಂತೆ ಕಾಣುವುದಿಲ್ಲ.
ಪಾಶ್ಚಾತ್ಯ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ವಿಪುಲವಾಗಿ ಓದುತ್ತಿದ್ದ, ಈ ಕುರಿತು ದೊಡ್ಡ ಪ್ರಮಾಣದ ಮೌಲಿಕ ವಿಮರ್ಶಾ ಸಾಹಿತ್ಯ ರಚಿಸಿರುವ ಲಂಕೇಶರು ವಸಾಹತುಭಾಷೆಯಾಗಿ ಇಂಗ್ಲಿಷಿನ ಅಪಾಯಗಳನ್ನು ಚಿಂತಿಸಿದಂತಿಲ್ಲ. ಮೂಲಭೂತವಾಗಿ ವಸಾಹತುಶಾಹಿ ಬಗೆಗಿನ ಲಂಕೇಶರ ಧೋರಣೆಯೇ ವಸಾಹತುಭಾಷೆಯಾಗಿ ಇಂಗ್ಲಿಷನ್ನು ಗ್ರಹಿಸುವಲ್ಲಿ ಅವರಿಗೆ ತೊಡಕಾದಂತೆ ಕಾಣುತ್ತದೆ. ತಮ್ಮ ಸಮಕಾಲೀನರಾಗಿದ್ದ ಅನಂತಮೂರ್ತಿ ಅವರು ಶಿಕ್ಷಣಮಾಧ್ಯಮವಾಗಿ ಇಂಗ್ಲಿಷ್ ಚಾಲ್ತಿಗೆ ಬರುತ್ತ ದೇಸಿಭಾಷೆಯಾದ ಕನ್ನಡದಂತಹ ಭಾಷೆಗಳನ್ನು ಅಳಿಸಿಹಾಕುತ್ತಿರುವ ಬಗ್ಗೆ ಗಾಢವಾಗಿ ಚಿಂತಿಸಿ ಬರೆಯುತ್ತಿದ್ದ ಸಂದರ್ಭದಲ್ಲಿ ಲಂಕೇಶರು ಆ ಬಗ್ಗೆ ಚಿಂತಿಸದಿರುವುದು ಕನ್ನಡ ಭಾಷೆ ಕುರಿತ ಅವರ ಚಿಂತನೆಯ ಒಂದು ಮಿತಿಯಾಗಿದೆ.
‘ಗುಬ್ಬಚ್ಚಿಯ ಗೂಡು’ ಲೇಖನದಲ್ಲಿ ಲಂಕೇಶರು ಸಾಹಿತ್ಯದ ಕುರಿತು ಹೀಗೆ ವ್ಯಾಖ್ಯಾನಿಸುತ್ತಾರೆ.. ‘ಎಲ್ಲ ಕವನಗಳಲ್ಲಿನ ಸಿದ್ಧಾಂತ, ಬದ್ಧತೆ ಮುಖ್ಯವಾಗಿ ಬದುಕಿಗೆ, ಪ್ರೀತಿಗೆ ಮಾತ್ರ ಬದ್ಧ. ಈ ಸಿದ್ಧಾಂತಗಳು ಒಳ್ಳೊಳ್ಳೆಯ ಯೋಚನೆಗಳೆಲ್ಲ ಕವಿಯ ಆಟದ ಸಾಮಾನುಗಳು ಮಾತ್ರ. ನೆರೂಡ, ಬ್ರೆಕ್ಟ್ ತಮ್ಮ ಸಮತಾವಾದದ ಬಗ್ಗೆ ಎಷ್ಟು ಹೇಳಿಕೊಂಡರೂ ಅವರ ಕವನಗಳು ಕೆಟ್ಟುಹೋಗಿರುವ ಭಾಷೆಯನ್ನು ಹೃದಯಸ್ಪಂದನದ ಭಾಷೆಯ ಹತ್ತಿರ ತರುವುದಕ್ಕಾಗಿ, ಅಸಮಾನತೆ, ಅನ್ಯಾಯಗಳಿಂದ ಕೊಳೆತುಹೋಗಿರುವ ಸಮಾಜಕ್ಕೆ ಗುಬ್ಬಚ್ಚಿಯ ಮುಗ್ದ ನಿಸ್ವಾರ್ಥತೆ, ಸ್ವಾಭಿಮಾನದ ನಿಲುವು ತರುವುದಕ್ಕಾಗಿ, ಸಂಕೀರ್ಣಗೊಂಡು ಮನುಷ್ಯನನ್ನು ತನ್ನ ಅರಮನೆಯಲ್ಲಿ, ಗುಡಿಸಿಲಲ್ಲಿ ತಬ್ಬಲಿಯನ್ನಾಗಿ ಮಾಡುವ ಪರಿಸರಕ್ಕೆ ಮಾತು ಮೀರಿದ ಪ್ರೀತಿ ತರುವುದಕ್ಕಾಗಿ ನಡೆಸುವ ಪ್ರಯತ್ನಗಳು’
ಇಲ್ಲಿ ಲಂಕೇಶರು ಬಳಸುವ ‘ಕೆಟ್ಟುಹೋಗಿರುವ ಭಾಷೆ’ಗೂ ‘ಅಸಮಾನತೆ’, ಅನ್ಯಾಯ’ ಮತ್ತು ‘ಕೊಳೆತುಹೋಗಿರುವ ಸಮಾಜ’ಕ್ಕೂ ಸಂಬಂಧವಿದೆ. ಸಮಾಜದಲ್ಲಿ ಅಸಮಾನತೆ, ಅನ್ಯಾಯಗಳಿದ್ದಾಗ ಇಂತಹ ಸಮಾಜದಲ್ಲಿ ಚಾಲ್ತಿಯಲ್ಲಿರುವ ಭಾಷೆ ಕೂಡ ಕೆಟ್ಟುಹೋಗುತ್ತದೆ ಎನ್ನುವ ಗ್ರಹಿಕೆ ಇಲ್ಲಿದೆ. ‘ಮುಗ್ಧ ನಿಸ್ವಾರ್ಥತೆ’, ‘ಸ್ವಾಭಿಮಾನ’, ‘ತಬ್ಬಲಿಯನ್ನಾಗಿ ಮಾಡುವ ಪರಿಸರಕ್ಕೆ ಮಾತು ಮೀರಿದ ಪ್ರೀತಿ ತರುವುದು’ ಇವು ಸಾಹಿತ್ಯದ ಕೆಲಸ. ಸಾಹಿತ್ಯದ ಈ ಕೆಲಸ ಆಕಾರ ಪಡೆಯುವುದು ಭಾಷೆಯ ಮೂಲಕ. ಲೇಖಕರನ್ನು ಕುರಿತು ಬರೆಯುವಾಗ ಅವರಲ್ಲಿ ‘ಜನಜೀವನದ ದುರಂತಮಯ ಸ್ಥಿತಿಯ ಬಗ್ಗೆ ಸಿಟ್ಟಾಗಲಿ ಕಿರಿಕಿರಿಯಾಗಲಿ ಇಲ್ಲ’ ಎನ್ನುವಂತಹ ಹೇಳಿಕೆಗಳು ಲಂಕೇಶ್ ಅಪೇಕ್ಷಿಸುವ ಬರೆಹದ ಸಾಂಸ್ಕøತಿಕ ಜವಾಬ್ದಾರಿಯ ಸ್ವರೂಪವನ್ನು ಕೂಡ ಸೂಚಿಸುತ್ತವೆ.
ಶುದ್ಧ ಸಾಹಿತ್ಯ ಎನ್ನುವುದು ಅವಾಸ್ತವಿಕ. ಕಾರಣ ಸಾಹಿತ್ಯ ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಅದು ಆಗಸದತ್ತ ಮುಖ ಮಾಡಿದ್ದರೂ ಅದು ನಿಂತಿರುವುದು ಈ ನೆಲದಲ್ಲೇ. ಅದರ ಬೇರುಗಳಿರುವುದು ಈ ನೆಲದೊಳಗೆಯೇ. ಈ ನೆಲದೊಳಗಣ ಪರಂಪರೆ, ನೆಲದ ಮೇಲಣ ಸಾಂಸ್ಕøತಿಕ, ಸಾಮಾಜಿಕ, ಅಧಿಕಾರ ರಾಜಕಾರಣದ ಒಂದಿಲ್ಲೊಂದು ಬಗೆಯ ನಿರೂಪಣೆಯೇ ಸಾಹಿತ್ಯ. ಸಾಹಿತ್ಯ ಹೀಗಿರುವಾಗ ಸಾಹಿತ್ಯ ವಿಮರ್ಶೆಯಲ್ಲಿಯೂ ಇದು ಅಪೇಕ್ಷಿತ. ಈ ಎಚ್ಚರ ಲಂಕೇಶ್ರಲ್ಲಿತ್ತು.ಲಂಕೇಶರು ನವ್ಯ ಸಾಹಿತ್ಯಮಾರ್ಗದ ಎಲ್ಲ ಮುಖ್ಯ ಲೇಖಕರಂತೆ ಪಾಶ್ಚಾತ್ಯ ಲೇಖಕರಿಂದ ಪ್ರಭಾವಕ್ಕೆ ಒಳಗಾದವರು. ಅವರಲ್ಲಿ ಲೀವಿಸ್ ಕೂಡ ಇದ್ದಾನೆ. ಸಾಹಿತ್ಯದಲ್ಲಿ ಲೇಖಕರು ಬಳಸುವ ಭಾಷೆಯ ಬಗ್ಗೆ ಗಾಢವಾಗಿ ಚಿಂತಿಸಿದ ಲೇಖಕ ಲಂಕೇಶ್. ಲಂಕೇಶರ ಪ್ರಕಾರ, ಬರಹಗಾರರಿಗೆ ಅಥವಾ ಮಾತುಗಾರರಿಗೆ ತಾವು ಬಳಸುವ ಮಾತಿನ ಶಕ್ತಿ ಮತ್ತು ಮಿತಿಗಳ ಬಗ್ಗೆ ಎಚ್ಚರವಿರಬೇಕು. ಮಾತನ್ನು ತಮ್ಮ ಅನುಭವ, ಆಲೋಚನೆ ಮತ್ತು ಭಾವನೆಗಳನ್ನು ಸಶಕ್ತವಾಗಿಯೂ ಪ್ರಾಮಾಣಿಕವಾಗಿಯೂ ಅಭಿವ್ಯಕ್ತಿ ಮಾಡಲು ತಕ್ಕ ಮಾಧ್ಯಮವಾಗಿ ಬಳಸಬೇಕೆಂದು ಗೊತ್ತಿರಬೇಕು. ಜಡ ಪರಿಭಾಷೆಗಳ ಮೇಲೆ ಲಂಕೇಶ್ ಅವರಿಗೆ ವಿಪರೀತ ಕೋಪ. ಅವರ ಪ್ರಕಾರ, ಮಾತಿನ ಶಕ್ತಿ ಮತ್ತು ಮಿತಿಗಳೆರಡರ ಬಗ್ಗೆ ಸದಾ ತಲ್ಲಣದಲ್ಲಿ ಬರೆಯುವವರೇ ನಿಜವಾದ ಲೇಖಕರು. ಬರೆಯುವವನಲ್ಲಿ ಸಾಕಷ್ಟು ಸ್ಪೂರ್ತಿ ಅಥವಾ ಉದ್ದೇಶವಿಲ್ಲದ ಭಾಷೆ ಅಶ್ಲೀಲ. ಪೊಳ್ಳು ಅನಿಸಿಕೆಗಳನ್ನು ತೀವ್ರ ಭಾವನೆಯೆನ್ನುವಂತೆ ಮಂಡಿಸುವುದೇ ಅಶ್ಲೀಲ. ಜೀವಂತ ಸಾಹಿತ್ಯದ ಹುಡುಕಾಟವು ಲಂಕೇಶರಲ್ಲಿ ಕಲಾತ್ಮಕತೆಯ ವ್ಯಸನವಾಗುವುದಿಲ್ಲ. ಕಲೆಯ ಜಗತ್ತಿಗೆ ಒಂದು ಸಾಂಸ್ಕøತಿಕ ಹೊಣೆಗಾರಿಕೆಯೂ ಇದೆ ಎಂದು ಲಂಕೇಶ್ ತಿಳಿದಿದ್ದರು. ಲಂಕೇಶರ ಬರೆಹಗಳಲ್ಲಿ ಕನ್ನಡಕ್ಕೊಂದು ಭಾಷಾತೀತವಾದ ಪರಂಪರೆಯನ್ನು ಕಟ್ಟಿಕೊಡುವ ಯತ್ನವಿದೆ. ಹಾಗೆಯೇ ಸಾಹಿತ್ಯ ವಿಮರ್ಶೆಗೊಂದು ಹೊಸ ಭಾಷೆಯನ್ನು ಕಟ್ಟಿಕೊಡುವ ಒತ್ತಾಸೆಯೂ ಇದೆ.
ಸಾಹಿತ್ಯ ಒಂದು ವ್ಯಸನವಾಗದಂತೆ ಬದ್ಧತೆಯನ್ನು ಪ್ರತಿಪಾದಿಸಿದವರು ಮತ್ತು ಅದಕ್ಕೆ ಬದ್ಧರಾದವರು ಲಂಕೇಶ್. ‘ಸಾರ್ವಜನಿಕ ಜೀವನ ಸಾಂಸ್ಕøತಿಕ ನರಮಂಡಲದಷ್ಟೇ ಸೂಕ್ಷ್ಮವಾದುದು. ಇಲ್ಲಿ ನಿಷ್ಠುರವಾಗಿ ಮಾತಾಡಿ ಅದರ ಒಳಿತು ಕೆಡುಕುಗಳನ್ನು ಹೇಳುವ ತೋರಿಸುವ ಚರ್ಚಿಸುವ ಜೀವಗಳನ್ನು ಸೃಷ್ಟಿಸುವುದಕ್ಕಾದರೂ ನಿಷ್ಠುರವಾಗಿ ಅಂತರಂಗದ ಇಂಗಿತದ ನೆರವು ಪಡೆದು ಮಾತಾಡುವವರು ಬೇಕು’ ಎಂದು ಹಂಬಲಿಸುತ್ತಿದ್ದ ಲಂಕೇಶರ ಈ ನುಡಿಗಳು ಅವರು ಮಾತು ಅಥವಾ ಬರೆಹಕ್ಕೆ ನೀಡುತ್ತಿದ್ದ ಮಹತ್ವವನ್ನೂ ಹೇಳಬಲ್ಲವಾಗಿವೆ. ಲಂಕೇಶರ ಸಾಹಿತ್ಯ ವಿಮರ್ಶೆ ಸಾರ್ವಜನಿಕ ಬದುಕಿನ ಕಥನವೂ ಆಗಿದೆ. ಲಂಕೇಶರ ಸಾಹಿತ್ಯ ಸಂವೇದನೆ ‘ನವ್ಯ’ವಾಗಿದ್ದರೂ ರಾಜಕೀಯ ಸಾಮಾಜಿಕ ನೆಲೆಗಳಲ್ಲಿ ಅದು ಶೂದ್ರ-ದಲಿತ ಸಂವೇದನೆಗಳಿಗೆ ಹತ್ತಿರವಾದುದಾಗಿತ್ತು. ನವ್ಯದ ಉಚ್ಛ್ರಾಯ ಘಟ್ಟದವರೆಗೂ ಅಡಿಗರ ಜತೆಗಿದ್ದ ಲಂಕೇಶರು ತಮ್ಮ ಕೊನೆಯ ದಶಕದಲ್ಲಿ ಕುವೆಂಪು ಅವರನ್ನು ಕುರಿತು ಗಂಭೀರವಾಗಿ ಬರೆದದ್ದು ಇದಕ್ಕೆ ನಿದರ್ಶನದಂತೆ ಪರಿಗಣಿಸಬಹುದಾಗಿದೆ. ಅಡಿಗರ ಸಾಹಿತ್ಯದ ನೆಲೆಯಿಂದ ಕುವೆಂಪು ಅವರ ಸಾಮಾಜಿಕ ನೆಲೆಗೆ ಲಂಕೇಶರ ಹೊರಳಿಕೆಯನ್ನು ಇದು ಸೂಚಿಸುತ್ತದೆ.
ಕರ್ನಾಟಕವೆಂಬ ಸಾಂಸ್ಕøತಿಕ ರಾಷ್ಟ್ರೀಯತೆಯನ್ನು ಸ್ವೀಕರಿಸುವ ಮಾದರಿಗಳಲ್ಲಿ ಕರ್ನಾಟಕ ಬಹುಮುಖೀ ವಾಸ್ತವವೆಂಬ ನಿಲುವಿನದು ಒಂದು
ಮಾದರಿ. ಲಂಕೇಶರ ವಿಚಾರಗಳಲ್ಲಿ ಇದು ಆಧುನಿಕ ಸೆಕ್ಯುಲರ್ ಸಾಮಾಜಿಕ ರಾಜಕಾರಣದ ಪರಿಕಲ್ಪನೆಗಳಲ್ಲಿ ಬೆಳೆದಿದೆ. ಸಾಂಸ್ಕøತಿಕ ರಾಷ್ಟ್ರೀಯತೆಯ ಚರ್ಚೆಗೆ ವಿಶಿಷ್ಟ ಆಯಾಮ ಬಂದಿರುವುದು ಕರ್ನಾಟಕದ ಬಗೆಗಿನ ಲಂಕೇಶರ ಆಲೋಚನೆಗಳಿಂದ. ಸಾಂಸ್ಕøತಿಕ ರಾಷ್ಟ್ರೀಯತೆಯ ಪರಿಭಾಷೆಯಲ್ಲಿ ಮಾತನಾಡದೆ, ನೆನಪುಗಳ ವಿಂಗಡಣೆಗೆ, ವಿಶ್ಲೇಷಣೆಗೆ ಹೋಗದೆ ಆಧುನಿಕ ಜಗತ್ತಿನ ಸಾಮಾಜಿಕ ರಾಜಕಾರಣದ ಚೌಕಟ್ಟಿನಲ್ಲಿ ಅವರು ಮಾತನಾಡುತ್ತಾರೆ. ಇಲ್ಲಿ ಚರ್ಚೆಗೆ ತಕ್ಷಣದ ರಾಜಕೀಯ, ಸಾಮಾಜಿಕ ಉಪಯುಕ್ತತೆ ಮತ್ತು ಮೂರ್ತತೆ ಎರಡೂ ಒಟ್ಟಿಗೇ ಒದಗಿ ಬರುತ್ತದೆ ಎಂದು ಡಿ.ಆರ್.ನಾಗರಾಜ್ ಅವರು ವಿಶ್ಲೇಷಿಸುತ್ತಾರೆ.
ಮಾದರಿ. ಲಂಕೇಶರ ವಿಚಾರಗಳಲ್ಲಿ ಇದು ಆಧುನಿಕ ಸೆಕ್ಯುಲರ್ ಸಾಮಾಜಿಕ ರಾಜಕಾರಣದ ಪರಿಕಲ್ಪನೆಗಳಲ್ಲಿ ಬೆಳೆದಿದೆ. ಸಾಂಸ್ಕøತಿಕ ರಾಷ್ಟ್ರೀಯತೆಯ ಚರ್ಚೆಗೆ ವಿಶಿಷ್ಟ ಆಯಾಮ ಬಂದಿರುವುದು ಕರ್ನಾಟಕದ ಬಗೆಗಿನ ಲಂಕೇಶರ ಆಲೋಚನೆಗಳಿಂದ. ಸಾಂಸ್ಕøತಿಕ ರಾಷ್ಟ್ರೀಯತೆಯ ಪರಿಭಾಷೆಯಲ್ಲಿ ಮಾತನಾಡದೆ, ನೆನಪುಗಳ ವಿಂಗಡಣೆಗೆ, ವಿಶ್ಲೇಷಣೆಗೆ ಹೋಗದೆ ಆಧುನಿಕ ಜಗತ್ತಿನ ಸಾಮಾಜಿಕ ರಾಜಕಾರಣದ ಚೌಕಟ್ಟಿನಲ್ಲಿ ಅವರು ಮಾತನಾಡುತ್ತಾರೆ. ಇಲ್ಲಿ ಚರ್ಚೆಗೆ ತಕ್ಷಣದ ರಾಜಕೀಯ, ಸಾಮಾಜಿಕ ಉಪಯುಕ್ತತೆ ಮತ್ತು ಮೂರ್ತತೆ ಎರಡೂ ಒಟ್ಟಿಗೇ ಒದಗಿ ಬರುತ್ತದೆ ಎಂದು ಡಿ.ಆರ್.ನಾಗರಾಜ್ ಅವರು ವಿಶ್ಲೇಷಿಸುತ್ತಾರೆ.ಲಂಕೇಶ್ ಟಿ.ಎಸ್ ಎಲಿಯಟ್ ಬಗ್ಗೆ ಬರೆಯುತ್ತ ‘ಆತ ಒಂದು ಭಾಷೆಯ ಜನರ ನುಡಿಗಟ್ಟು ಮತ್ತು ಸಂವೇದನೆಯನ್ನೇ ಬದಲಾಯಿಸಿದ್ದ’ ಎನ್ನುತ್ತಾರೆ. ಕರ್ನಾಟಕದಲ್ಲಿ ಲಂಕೇಶ್ ತಮ್ಮ ‘ಲಂಕೇಶ್ ಪತ್ರಿಕೆ’ಯಲ್ಲಿ ತಮ್ಮ ವಿಶಿಷ್ಟ ಗದ್ಯದಲ್ಲಿ ಬರೆಯುತ್ತ ಮಾಡಿದ್ದು ಇದೇ ಕೆಲಸವನ್ನು. ಲಂಕೇಶರ ವಿಚಾರ ಸಾಹಿತ್ಯದಲ್ಲಿ ಕನ್ನಡ ಭಾಷೆ ಮತಾಂಧತೆಯ ವಿಕಾರಗಳಿಲ್ಲದ ಜಾತ್ಯತೀತ, ಸಮಾಜವಾದಿ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ಹೋಗಬೇಕೆಂಬ ಕಾಳಜಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.
– ಡಾ. ಸರ್ಜಾಶಂಕರ ಹರಳಿಮಠ


