ಭಿನ್ನಮತೀಯ ಶಾಸಕರು ಸಭೆ ಸೇರಿ ಯಡಿಯೂರಪ್ಪ ವಿರುದ್ಧ ಚರ್ಚಿಸಿದ್ದಾರೆ ಎಂಬ ವರ್ತಮಾನದ ಬೆನ್ನಿಗೇ ಯಡಿಯೂರಪ್ಪ ಮುಖ್ಯಮಂತ್ರಿ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡುವ ಮೂಲಕ ಮತ್ತುಷ್ಟು ವಿವಾದಕ್ಕೆ ಕಾರಣರಾಗಿದ್ದಾರೆ.
ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ನಮ್ಮ ನಾಯಕರಾಗಿದ್ದರು. ಈಗ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ನಮ್ಮ ನಾಯಕರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ನಾಯಕತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ಸಚಿವ ಸ್ಥಾನ ವಂಚಿತರಾಗಿರುವ ಉಮೇಶ್ ಕತ್ತಿ ಅವರ ಬೆಂಗಳೂರಿನ ನಿವಾಸದಲ್ಲಿ ಐವರು ಬಿಜೆಪಿ ಶಾಸಕರು ಒಂದೆಡೆ ಸೇರಿ ಬಂಡಾಯದ ಮುನ್ಸೂಚನೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ತಮ್ಮ ರಾಗ ಬದಲಿಸಿದ್ದಾರೆ.
ನಾವು ಉಮೇಶ್ ಕತ್ತಿ ನಿವಾಸದಲ್ಲಿ ಸೇರಿ ಊಟ, ಮಾವಿನ ಹಣ್ಣು ಸೇವಿಸಿದ್ದೇವೆ. ಹರಟೆ ಹೊರದಿದ್ದೇವೆ. ಸಣ್ಣ ಪುಟ್ಟ ರಾಜಕೀಯ ವಿಚಾರ ಮಾಡಿದ್ದೇವೆ. ಅದೇ ವಿಷಯವನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ನಾವು ಮುಖ್ಯಮಂತ್ರಿಗಳ ವಿರುದ್ದವಾಗಲೀ, ಹೈಕಮಾಂಡ್ ವಿರುದ್ಧವಾಗಲೀ ಸಭೆ ನಡೆಸಿಲ್ಲ ಯತ್ನಾಳ್ ಹೇಳಿದ್ದಾರೆ.
ನಾಯಕತ್ವದ ಬದಲಾವಣೆ ಕುರಿತು ನಾನು ಏನೂ ಹೇಳಲಾರೆ. ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು. ಬದಲಾವಣೆ ಮಾಡಿದರೂ ಒಪ್ಪುತ್ತೇವೆ. ಮುಂದುವರಿಯಲಿ ಅಂದರೂ ಬದ್ದರಾಗಿರುತ್ತೇವೆ. ಹೈಕಮಾಂಡ್ ಏನು ಹೇಳುತ್ತೋ ಅದನ್ನಷ್ಟೇ ಪಾಲಿಸುತ್ತೇವೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದವಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಅಭಿವೃದ್ದಿ ಕೆಲಸಗಳು ಆಗಿಲ್ಲ. ಅದನ್ನು ಮುಖ್ಯಮಂತ್ರಿಗೂ ಹೇಳಿದ್ದೇವೆ. ನೀವು ಬಂದು ಮುಖ್ಯಮಂತ್ರಿಗಳ ಮುಂದೆ ಹೇಳಿ ಅಂದರೂ ನೇರವಾಗಿ ಹೇಳುತ್ತೇನೆ. ನನಗೆ ಹಣ ಬಿಡುಗಡೆ ಆಗಿಲ್ಲ. ಅದಕ್ಕೆ ಅಸಮಾಧಾನ ಇರುವುದು ಸತ್ಯ ಎಂದು ವಿವರಿಸಿದ್ದಾರೆ.
ನಾನು ಸಚಿವ ಸ್ಥಾನ ಕೇಳಿಲ್ಲ. ಕೇಳುವುದೂ ಇಲ್ಲ. ಯಡಿಯೂರಪ್ಪ ಇರುವವರೆಗೂ ಅವರನ್ನು ಕೇಳುವುದಿಲ್ಲ. ಹಿರಿಯರು ಅವರು. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದವರಲ್ಲಿ ಯಡಿಯೂರಪ್ಪ, ಅನಂತಕುಮಾರ್ ಮತ್ತು ಈಶ್ವರಪ್ಪ, ಮಲ್ಲಿಕಾರ್ಜುನಯ್ಯ, ಆನಂತರ ನಾನೇ ಹಿರಿಯ. ಪಕ್ಷಕ್ಕಾಗಿ ದುಡಿದವರಲ್ಲಿ ಒಬ್ಬ ಎಂದು ಹೇಳಿಕೊಂಡಿದ್ದಾರೆ.
ನಮ್ಮಲ್ಲಿ ಹೈಕಮಾಂಡ್ ಬಲಿಷ್ಠವಾಗಿದೆ. ಅವರ ವಿರುದ್ದ ಮಾತನಾಡಲಾರೆವು. ಉಮೇಶ್ ಕತ್ತಿ ಅವರಿಗೆ ಸಚಿವರ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನುಡಿದಂತೆ ನಡೆಯಬೇಕು. ರಮೇಶ್ ಕತ್ತಿ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನೂ ಕೇಳಿಲ್ಲ. ಸಣ್ಣಪುಟ್ಟ ರಾಜಕೀಯ ವಿಚಾರಗಳು ಚರ್ಚೆಯಾಗಿದೆಯೇ ಹೊರತು ಅಸಮಾಧಾನ ವ್ಯಕ್ತವಾಗಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ; ಬಿಎಸ್‌ವೈ ಸ್ಥಾನಕ್ಕೆ ’ಕತ್ತಿ’ಯಿಂದ ಕುತ್ತು?
Also Read: Karnataka government drops naming of flyover after “Veer” Savarkar


