ಶ್ರಮಿಕ್ ವಿಶೇಷ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವುಗಳು ಸಣ್ಣ ಹಾಗೂ ಪ್ರತ್ಯೇಕ ಘಟನೆ, ಇದಕ್ಕಾಗಿ ರೈಲ್ವೇ ಇಲಾಖೆಯನ್ನು ನಿಂದಿಸುವುದು ಸರಿಯಲ್ಲ ಎಂದು ಪಶ್ಚಿಮ ಬಂಗಾಳ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಸೋಮವಾರದಿಂದ ತೀವ್ರ ಉಷ್ಣಾಂಶ ಹಾಗೂ ಹಸಿವೆಯಿಂದ ತಮ್ಮ ರಾಜ್ಯಗಳಿಗೆ ಹೊರಟಿದ್ದ ಒಟ್ಟು ಒಂಬತ್ತು ವಲಸೆ ಕಾರ್ಮಿಕರು ಶ್ರಮಿಕ್ ವಿಶೇಷ ರೈಲುಗಳಲ್ಲಿ ಮೃತಪಟ್ಟಿದ್ದಾರೆ.
“ಕೆಲವು ದುರದೃಷ್ಟಕರ ಘಟನೆಗಳು ನಡೆದಿವೆ, ಇದಕ್ಕಾಗಿ ರೈಲ್ವೆ ಇಲಾಖೆಯನ್ನು ದೂಷಿಸುವುದು ಸರಿಯಲ್ಲ. ವಲಸಿಗರನ್ನು ಅವರ ಊರಿಗೆ ತಲುಪಿಸುವ ಉತ್ತಮ ಕೆಲಸ ಮಾಡುತ್ತಿದೆ. ಕೆಲವು ಸಾವುಗಳು ನಡೆದಿವೆ, ಆದರೆ ಇವು ಪ್ರತ್ಯೇಕ ಘಟನೆಗಳು. ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಅತ್ಯುತ್ತಮವಾಗಿ ಪ್ರಯತ್ನಿಸಿದೆ ಎಂಬುದಕ್ಕೆ ನಮ್ಮಲ್ಲಿ ಉದಾಹರಣೆಗಳಿವೆ. ಕೆಲವು ಸಣ್ಣ ಘಟನೆಗಳು ನಡೆದಿವೆ, ಇದಕ್ಕಾಗಿ ರೈಲ್ವೆಗಳನ್ನು ಮುಚ್ಚಿ ಬಿಡಬೇಕು ಎನ್ನುವುದಲ್ಲ” ಸಂಸದರೂ ಆಗಿರುವ ಪಶ್ಚಿಮ ಬಂಗಾಳದ ಮುಖ್ಯಸ್ಥರಾಗಿರುವ ದಿಲೀಪ್ ಘೋಷ್ ಹೇಳಿದ್ದಾರೆ.
ಬಿಹಾರದ ಮುಜಾಫರ್ಪುರ್ ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿಯನ್ನು ಎಚ್ಚರಗೊಳಿಸಲು ಯತ್ನಿಸುತ್ತಿರುವ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆ ಹಲವಾರು ಜನರು ವ್ಯಾಪಕವಾಗಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ದಿಲೀಪ್ ಘೋಷ್ ಹೇಳಿಕೆಯನ್ನು ಪಶ್ಚಿಮ ಬಂಗಾಳದ ವಿಪಕ್ಷ ಸಿಪಿಐ(ಎಂ) ಹಾಗೂ ಆಡಳಿತ ಪಕ್ಷ ಟಿಸಿಎಂ ಖಂಡಿಸಿ, ವಲಸೆ ಕಾರ್ಮಿಕರ ದುಸ್ಥಿತಿಗೆ ಸೂಕ್ಷ್ಮವಾಗಿ ವರ್ತಿಸುವಂತೆ ಹೇಳಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪೊಲಿಟ್‌ಬ್ಯುರೊ ಸದಸ್ಯ ಮೊಹಮ್ಮದ್ ಸಲೀಂ ಮಾತನಾಡಿ, “ಬಿಜೆಪಿಯ ಆಡಳಿತದಲ್ಲಿ ಎಲ್ಲವೂ ಒಳ್ಳೆಯದಕ್ಕಾಗಿ ನಡೆಯುತ್ತದೆ ಎಂದು ಹೇಳುವ ಬಿಜೆಪಿಯ ಜಗತ್ತಿನಲ್ಲಿ ಉಳಿಯಲು ಘೋಷ್‌ರಂತಹ ನಾಯಕರು ಬಯಸುತ್ತಾರೆ. ವಲಸೆ ಕಾರ್ಮಿಕರ ಸಮಸ್ಯೆಯೂ ಮೋದಿ ಸರ್ಕಾರಕ್ಕೆ ಮಾನವ ಜೀವಗಳನ್ನು ಉಳಿಸಲು ಸಾಧ್ಯವಿಲ್ಲ ಎಂದು ಸಾಬೀತು ಮಾಡಿದೆ, ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರ ಬಿಕ್ಕಟ್ಟನ್ನು ತಪ್ಪಾಗಿ ನಿರ್ವಹಿಸಿದ ಬಗ್ಗೆ ನಾಚಿಕೆಪಡಬೇಕು” ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಸಂಸದರೂ ಆಗಿರುವ ಸೌಗತಾ ರಾಯ್ “ಈ ಸಮಸ್ಯೆಯು ಕೇಂದ್ರವು ಕೊರೊನಾ ಬಿಕ್ಕಟ್ಟನ್ನು ಮತ್ತು ಲಾಕ್ ಡೌನ್ ಅನ್ನು ತಪ್ಪಾಗಿ ನಿರ್ವಹಿಸಿದ ಪರಿಣಾಮವಾಗಿದೆ. ಎಷ್ಟೋ ಜನರು ಸಾಯುತ್ತಿದ್ದಾರೆ ಆದರೆ ಏನೂ ಆಗಿಲ್ಲ ಎಂಬಂತೆ ಬಿಜೆಪಿ ನಾಯಕರು ಸೊಕ್ಕಿನಿಂದ ವರ್ತಿಸುತ್ತಿದ್ದಾರೆ. ನಮ್ಮತ್ತ ಬೆರಳು ತೋರಿಸುವ ಮೊದಲು ದಿಲೀಪ್ ಘೋಷ್ ಸೂಕ್ಷ್ಮವಾಗಿ ವರ್ತಿಸಬೇಕು ಹಾಗೂ ಮಾತನಾಡಬೇಕು.” ಎಂಧು ಹೇಳಿದ್ದಾರೆ.
ಓದಿ: ಶ್ರಮಿಕ್ ವಿಶೇಷ ರೈಲುಗಳಲ್ಲಿ ಕಳೆದ 48 ಗಂಟೆಗಳಲ್ಲಿ 9 ವಲಸೆ ಕಾರ್ಮಿಕರು ಮೃತ


