“ನಿಮ್ಮ ನಂಬರ್ ಕೊಡಿ ಅಣ್ಣ”. ಇದು ದೆಹಲಿಯಲ್ಲಿ ಸಿಕ್ಕಿಕೊಂಡಿರುವ ವಲಸೆ ಕಾರ್ಮಿಕನೊಬ್ಬ ಸಹಾಯಕ್ಕಾಗಿ ಚಿತ್ರನಟ ಸೋನು ಸೂದ್ ಬಳಿ ಟ್ವಿಟ್ಟರ್‌ನಲ್ಲಿ ಮನವಿ ಮಾಡಿದಾಗ, ಅದನ್ನು ಗಮನಿಸಿದ ಇನ್ನೊಬ್ಬ ನಟಿ ಸ್ವರ ಭಾಸ್ಕರ್ ಮಾಡಿದ ರಿಪ್ಲೆ. ಈ ಇಬ್ಬರೂ ನಟ-ನಟಿಯರು ಕೆಲದಿನಗಳಿಂದ ವಲಸೆ ಕಾರ್ಮಿಕರ ಪಾಲಿಗೆ ದೇವರಾಗಿಬಿಟ್ಟಿದ್ದಾರೆ.
ನೀವು ನಂಬುತ್ತೀರೋ ಇಲ್ಲವೋ, ಆದರೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸಹಾಯ ಕೇಳಿದ ಮೂರು ಜನರಿಗೆ ಸ್ವರ ಭಾಸ್ಕರ್ ತಮ್ಮೂರಿಗೆ ತಲುಪುವ ಭರವಸೆ ನೀಡಿ, ನಿಂಬರ್ ಫೋನ್ ನಂಬರ್‌ಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಕಾರ್ಮಿಕರಿಗೆ ನೆರವಾಗುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

ಕೊರೊನಾ ವೈರಸ್ ಕಾರಣಕ್ಕೆ ಘೋಷಿಸಲ್ಪಟ್ಟ ಲಾಕ್‌ಡೌನ್ ಕೋಟ್ಯಾಂತರ ವಲಸೆ ಕಾರ್ಮಿಕರ ಪಾಲಿಗೆ ನರಕಯಾತನೆಯಾಗಿಬಿಟ್ಟಿದೆ. ಕೆಲಸವಿಲ್ಲದೇ, ಹಣವಿಲ್ಲದೇ ಸಿಕ್ಕಿಕೊಂಡಿರುವ ಲಕ್ಷಾಂತರ ಜನ ಕನಿಷ್ಟ ತಮ್ಮೂರಿಗೆ ಹೋಗಲು ಪರದಾಡುತ್ತಿದ್ದಾರೆ. ಸರ್ಕಾರ ಸಮರ್ಪಕವಾಗಿ ರೈಲುವ್ಯವಸ್ಥೆ ಮಾಡದಿರುವುದರಿಂದ ಈ ಕಾರ್ಮಿಕರ ಅಕ್ಷರಶಃ ಸಾವು-ಬದುಕಿನ ನಡುವೆ ನರಳಾಡುತ್ತಿದ್ದಾರೆ. ಇಂತವರ ಪಾಲಿಗೆ ಸೋನು ಸೂದ್, ಸ್ವರ ಭಾಸ್ಕರ್ ಸೇರಿದಂತೆ ಹಲವರು ವರವಾಗಿ ಪರಿಣಮಿಸಿದ್ದು ಸಿಕ್ಕಿಕೊಂಡ ವಲಸೆ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ತಲುಪಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.
ಇಪ್ಪತ್ತು ದಿನಗಳ ಮೊದಲೇ ಮಹಾರಾಷ್ಟ್ರದಲ್ಲಿ ಸಿಕ್ಕಿಕೊಂಡಿದ್ದ ನೂರಾರು ವಲಸೆ ಕಾರ್ಮಿಕರು ತಮ್ಮ ಊರು ಕಲಬುರಗಿ ತಲುಪಲು ಸೋನು ಸೂದ್ 10 ಬಸ್ ವ್ಯವಸ್ಥೆ ಮಾಡಿದ್ದಲ್ಲದೆ, ಆ ಎಲ್ಲ ಕಾರ್ಮಿಕರಿಗೂ ಊಟದ ವ್ಯವಸ್ಥೆ ಮಾಡಿ ಮೆಚ್ಚುಗೆ ಪಡೆದಿದ್ದರು. ಅದಾದ ನಂತರ ಪಂಜಾಬ್ ಸರ್ಕಾರಕ್ಕೆ 1500 ಪಿಪಿಇ ಕಿಟ್‌ಗಳನ್ನು ದೇಣಿಗೆಯಾಗಿ ನೀಡಿ ಸುದ್ದಿಯಾದರು. ಜೊತೆಗೆ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ವಲಸೆ ಕಾರ್ಮಿಕರು ತಮ್ಮ ಮನೆ ಸೇರಲು ಸೋನು ಸಹಾಯ ಮಾಡಿದ್ದಾರೆ.
Sonu Sood 'home delivery' service! #SonuSood
Posted by Cartoonist Satish Acharya on Wednesday, May 27, 2020
ಅಷ್ಟಕ್ಕೆ ಸುಮ್ಮನಾಗದ ಅವರು ಕೇರಳದಲ್ಲಿ ಸಿಕ್ಕಿಕೊಂಡಿದ್ದ ನೂರಾರು ವಲಸೆ ಕಾರ್ಮಿಕರಿಗೆ ಮಾಡಿದ ಸಹಾಯ ದೇಶಾದ್ಯಂತ ಸುದ್ದಿಯಾಯಿತು. ಏಕೆಂದರೆ ಕೇರಳದಿಂದ ಓಡಿಸ್ಸಾಗೆ ಬಸ್ ವ್ಯವಸ್ಥೆ ಸಾಧ್ಯವಿಲ್ಲ ಎಂದು ಅರಿತು ಸೋನು ಸೂದ್ ಅವರೆಲ್ಲರೂ ವಿಮಾನವನ್ನೇ ಬುಕ್ ಮಾಡಿ ತಮ್ಮ ಊರು ತಲುಪುವಂತೆ ಮಾಡಿದ್ದರು..
ಸೋನು ಸೂದ್‌ರವರ ಈ ಕಾಳಜಿಗೆ ಮೆಚ್ಚಿದ ಮಹಿಳೆಯೊಬ್ಬರು ತನ್ನ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರಿಟ್ಟು ಕೃತಜ್ಞತೆ ಸಲ್ಲಿಸಿದ್ದರು. ಅಲ್ಲದೆ ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೋಶಿಯಾರಿಯವರು ಸೋನು ಸೂದ್‌ರವರನ್ನು ರಾಜಭವನಕ್ಕೆ ಆಹ್ವಾನಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ವರ ಭಾಸ್ಕರ್ ಸರದಿ…
ಕಳೆದ ವಾರ ಮುಂಬೈನಿಂದ ದೆಹಲಿಯನ್ನು ತಲುಪಿದ ಸ್ವರಾ ಭಾಸ್ಕರ್ ವಲಸೆ ಕಾರ್ಮಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 1350 ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಿಗೆ ಹಿಂದಿರುಗಿಲು ಸ್ವರ ಭಾಸ್ಕರ್ ನೆರವಾಗಿದ್ದಾರೆ.
@ReallySwara #portrait with due respect ✊ pic.twitter.com/3uZ60pdImX
— Miten (@mitenlapsiya) May 31, 2020
ದೆಹಲಿ ಸರ್ಕಾರದ ಸಹಾಯದೊಂದಿಗೆ ಸ್ವರ ಭಾಸ್ಕರ್ ಉತ್ತರ ಪ್ರದೇಶ ಮತ್ತು ಬಿಹಾರದ 1350 ಕಾರ್ಮಿಕರಿಗೆ ತನ್ನ ಸ್ವಂತ ಹಣದಿಂದ ರೈಲುಟಿಕೆಟ್ ಬುಕ್‌ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಅವರನ್ನು ಯಾರಾದರೂ ಹೊಗಳಿದರೆ “ಲಕ್ಷಾಂತರ ಜನರನ್ನು ನಿರ್ಗತಿಕತೆ ಮತ್ತು ಸಂಕಷ್ಟಗಳಿಗೆ ದೂಡುತ್ತಿರುವಾಗ ನಾನು ಮಾತ್ರ ನನ್ನ ಮನೆಯ ಸುರಕ್ಷತೆ ಮತ್ತು ಸೌಕರ್ಯದಲ್ಲಿರಲು ನನಗೆ ನಾಚಿಕೆಯಾಗಿದೆ” ಎಂದು ಸ್ವರಾ ಹೇಳುತ್ತಾರೆ.
ನೂರಾರು ಜನರು ನಡೆದುಕೊಂಡು ಹೋಗುತ್ತಿರುವುದ ನೋವು ಕಂಡಿರುವ ಸ್ವರ ನೂರಾರು ವಲಸೆ ಕಾರ್ಮಿಕರಿಗೆ ಚಪ್ಪಲಿ ಕೊಡಿಸಿದ್ದಾರೆ.
ಒಟ್ಟಿನಲ್ಲಿ ದೈತ್ಯ ಸರ್ಕಾರಗಳು ಕಾರ್ಮಿಕರಿಗಾಗಿ ಸಮರ್ಪಕ ವ್ಯವಸ್ಥೆ ಮಾಡಲು ವಿಫಲರಾದಾಗ ಸೋನು ಸೂದ್ ಮತ್ತು ಸ್ವರ ಭಾಸ್ಕರ್ ತರಹದ ಚಿತ್ರನಟ ನಟಿಯರ ಈ ಸಹಾಯ ಬಹಳ ದೊಡ್ಡದ್ದೆ ಆಗಿದೆ. ಇದಕ್ಕಾಗಿ ಈ ಇಬ್ಬರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಲಾಗುತ್ತಿದೆ.
ಇದರ ನಡುವೆಯೇ ಮೈಸೂರು ಜಿಲ್ಲೆಯ ಚೆನ್ನಗಿರಿಕೊಪ್ಪಲಿನ 70 ವರ್ಷದ ಕಮಲಮ್ಮ ಎಂಬುವವರು ತಮಗೆ ಬರುವ 600 ರೂ ಪಿಂಚಣಿಯಲ್ಲಿ 500 ರೂಗಳನ್ನು ಅಗತ್ಯವಿದ್ದವರಿಗೆ ಸಹಾಯ ಮಾಡಲೆಂದು ಸಂಘಟನೆಯೊಂದಕ್ಕೆ ಒತ್ತಾಯಪೂರ್ವಕವಾಗಿ ನೀಡಿದ್ದಾರೆ. ಇವರ ಮೆಚ್ಚುಗೆ ಸಾವಿರಾರು ಕೋಟಿ ದೇಣಿಗೆ ನೀಡಿದವರಿಗಿಂತಲೂ ಹೆಚ್ಚಿನದೆಂದು ಜನ ಅಭಿನಂದನೆಗಳನ್ನು ತಿಳಿಸಿದ್ದಾರೆ.
Donors! #Corona
Posted by Cartoonist Satish Acharya on Thursday, May 28, 2020
ಇದನ್ನೂ ಓದಿ: ಮುಂಬೈ ವೈರಸ್ ಬಿಕ್ಕಟ್ಟಿಗೆ ಗುಜರಾತ್‌ನ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ: ಸಂಜಯ್ ರಾವತ್


