ದೇಶದಾದ್ಯಂತ ಗಮನ ಸೆಳೆಯಲ್ಪಟ್ಟ ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮನು ಶರ್ಮ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ದೆಹಲಿಯ ತಿಹಾರ್ ಜೈಲಿನಿಂದ ಇತರ 18 ಕೈದಿಗಳೊಂದಿಗೆ ಸೋಮವಾರ ಅವರನ್ನು ಕೂಡಾ ಬಿಡುಗಡೆ ಮಾಡಲಾಗಿದೆ.
ದೆಹಲಿ ದಂಡನಾ ಪರಿಶೀಲನಾ ಮಂಡಳಿಯ ಶಿಫಾರಸಿನ ನಂತರ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಈ ನಿರ್ಧಾರಕ್ಕೆ ಸಹಿ ಹಾಕಿದ್ದರು. ಕಳೆದ ತಿಂಗಳು ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಳಿ ಈ ಶಿಫಾರಸು ಮಾಡಿತ್ತು.
ಕೊರೊನಾ ವೈರಸ್ ಬಿಕ್ಕಟ್ಟಿನಲ್ಲಿ ಜನದಟ್ಟಣೆ ತಡೆಗಟ್ಟಲು ಕಾರಾಗೃಹಗಳು ಕೈಗೊಂಡ ಕ್ರಮಗಳ ಭಾಗವಾಗಿ 17 ವರ್ಷಕ್ಕಿಂತಲೂ ಕಡಿಮೆ ಜೈಲುವಾಸ ಅನುಭವಿಸಿದ ಮನು ಶರ್ಮಾ ಪೆರೋಲ್ ಮೇಲೆ ಬಿಡುಗಡೆಗೊಂಡಿದ್ದಾರೆ.
ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮ ಅವರ ಪುತ್ರ ಮನು ಶರ್ಮ, 2006 ರ ಏಪ್ರಿಲ್ 30 ರಂದು ದೆಹಲಿಯ ಟಾಮ್‌ರಿಂಡ್ ರೆಸ್ಟೋರೆಂಟ್‌ನಲ್ಲಿ ನಡೆದ ಸಮಾಜವಾದಿ ಪಕ್ಷದ ಬಿನಾ ರಮಣಿಯವರ ಪಾರ್ಟಿಯಲ್ಲಿ ರೂಪದರ್ಶಿ ಜೆಸ್ಸಿಕಾ ಲಾಲ್ ಅವರನ್ನು ಶೂಟ್ ಮಾಡಿ ಕೊಲೆ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದರು.
ವಿಚಾರಣಾ ನ್ಯಾಯಾಲಯ ಅವರನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿತ್ತಾದರೂ, ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗಳು ನಡೆದ ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿತು. 2010 ರಲ್ಲಿ ಈ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಕೂಡಾ ದೃಡಪಡಿಸಿತ್ತು.
ಕಳೆದ ಎರಡು ವರ್ಷಗಳಲ್ಲಿ, ಮನು ಶರ್ಮಾ ಅವರು “ಉತ್ತಮ ನಡವಳಿಕೆ” ಯ ಕಾರಣದಿಂದಾಗಿ ತೆರೆದ ಜೈಲಿನಲ್ಲಿದ್ದರು; ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕಾಗಿ ಜೈಲಿನಿಂದ ಹೊರಟು ಸಂಜೆ 6 ಗಂಟೆಗೆ ಮರಳಲು ಅವರಿಗೆ ಅವಕಾಶ ನೀಡಲಾಗಿತ್ತು. ಮನು ಶರ್ಮಾ ಕೈದಿಗಳ ಪುನರ್ವಸತಿಗಾಗಿ ಲಾಭರಹಿತವಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.
2018 ರಲ್ಲಿ, ಜೆಸ್ಸಿಕಾ ಲಾಲ್ ಅವರ ತಂಗಿ ಸಬ್ರಿನಾ ಲಾಲ್ ಮನು ಶರ್ಮಾ ಅವರನ್ನು ಕ್ಷಮಿಸಿದ್ದೇವೆ ಹಾಗೂ ಅವರು ಬಿಡುಗಡೆಗೊಂಡರೆ ಆಕ್ಷೇಪಿಸುವುದಿಲ್ಲ ಎಂದು ಹೇಳಿದ್ದರು.
ಈ ಅಪರಾಧದ ಆಧಾರವಾಗಿಟ್ಟುಕೊಂಡು ಚಲನಚಿತ್ರ ಬಂದಿದ್ದು, ಹಣ ಮತ್ತು ಪ್ರಭಾವವನ್ನು ಹೊಂದಿರುವವರಿಗೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಹಾಗೂ ಕೊಲೆಯಿಂದ ಪಾರಾಗಲು ಅನುವು ಮಾಡಿಕೊಡುವ ಕಾನೂನಿನಲ್ಲಿನ ಆಳವಾದ ನ್ಯೂನತೆಗಳನ್ನು ಇದು ಇದು ಎತ್ತಿ ತೋರಿಸಿತ್ತು.
ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಸುಳ್ಳು ವಾಟ್ಸಾಪ್ ಫಾರ್ವಾಡ್ ಸಂದೇಶವನ್ನು ಉಲ್ಲೇಖಿಸಿದ ಕೇಂದ್ರ ಸರ್ಕಾರ


