ಪುಣೆ ಮೂಲದ ಆಟೋರಿಕ್ಷಾ ಚಾಲಕರೊಬ್ಬರು ತನ್ನ ಮದುವೆಗೆ ಉಳಿಸಿದ ಹಣದಿಂದ ವಲಸೆ ಕಾರ್ಮಿಕರ ಆಹಾರಕ್ಕಾಗಿ ಬಳಸುತ್ತಾ ಆದರ್ಶವನ್ನು ಮೆರೆದಿದ್ದಾರೆ. ಇದರಿಂದ ಪ್ರಭಾವಿತರಾದ ಹಲವಾರು ಜನರು ಅವರಿಗೆ ಹಣದ ಸಹಾಯವನ್ನು ಮಾಡುತ್ತಿದ್ದಾರೆ.
ಅಕ್ಷಯ್ ಕೊಥಾವಾಲೆ (30) ಮಹಾರಾಷ್ಟ್ರದ ಪುಣೆಯಲ್ಲಿ ಅಗತ್ಯವಿರುವ ಹಾಗೂ ಬಡ ಜನರಿಗೆ ಆಹಾರ ಮತ್ತು ಪಡಿತರ ಕಿಟ್‌ಗಳನ್ನು ಒದಗಿಸಲು ತನ್ನ ಹಣ ಮತ್ತು ತನಗೆ ದೊರೆತ ಸಹಾಯದ ಹಣವನ್ನೂ ಮತ್ತೆ ಬಳಸುತ್ತಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕೊತವಾಲೆ, ತನಗೆ ದೊರೆತ ಅಪಾರ ಬೆಂಬಲಕ್ಕೆ ಕೃತಜ್ಞನಾಗಿದ್ದೇನೆ ಮತ್ತು ಪುಣೆಯಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ನನ್ನನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಕ್ಷಯ್ ಕೊಥಾವಾಲೆ ತನ್ನ ಮದುವೆಗೆಂದು 2 ಲಕ್ಷ ರೂ.ಗಳನ್ನು ಉಳಿಸಿದ್ದರು. ಮದುವೆಯನ್ನು ಮೇ 25 ರಂದು ನಿಗದಿಪಡಿಸಲಾಗಿತ್ತು ಆದರೆ ಕೊರೊನಾ ವೈರಸ್ ಹಿನ್ನಲೆಯಲ್ಲಿ ಜಾರಿಗೊಳಿಸಿದ ಲಾಕ್‌ಡೌನ್ ಕಾರಣ ಮದುವೆಯನ್ನು ಮುಂದೂಡಲಾಗಿತ್ತು.
ಬಡ ಜನರು ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರು, ಯಾವುದೇ ಕೆಲಸ ಮತ್ತು ಆದಾಯವಿಲ್ಲದ ಕಾರಣ ಸಂಕಷ್ಟಗಳನ್ನು ಎದುರಿಸುತ್ತಿರುವುದನ್ನು ನೋಡಿದ ಅವರು, ತಮ್ಮಲ್ಲಿರುವ ಹಣದಿಂದ ಕೆಲವು ಸ್ನೇಹಿತರೊಂದಿಗೆ ಸೇರಿ ಆಹಾರವನ್ನು ಸಿದ್ಧಪಡಿಸುವ ಅಡುಗೆಮನೆ ಸ್ಥಾಪಿಸಿ, ಆಹಾರವನ್ನು ಪುಣೆಯ ಹಲವಾರು ಸ್ಥಳಗಳಲ್ಲಿ ವಿತರಿಸಿದರು.

ಅವರ ತಂದೆ ಕಳೆದ ತಿಂಗಳು ನಿಧನರಾಗಿದ್ದು, ಇದರ ಮಧ್ಯೆಯೂ ಅಕ್ಷಯ್ ತಮ್ಮ ಸೇವೆಯನ್ನು ಮುಂದುವರೆಸಿದ್ದರು. ತಮಗೆ ಒದಗಿ ಬಂದ ದುರಂತದ ನಡುವೆಯೂ ಆಹಾರ ವಿತರಣೆಯನ್ನು ಮುಂದುವರೆಸುವ ಅವರ ಸಂಕಲ್ಪದ ಬಗ್ಗೆ ಓದಿದ ದೇಶದಾದ್ಯಂತ ಹಲವಾರು ಜನರು ಆರ್ಥಿಕ ಸಹಾಯವನ್ನು ನೀಡಿದ್ದಾರೆ.
“ನಾನು ದೇಶಾದ್ಯಂತದ ಜನರಿಂದ ಸುಮಾರು 6 ಲಕ್ಷ ರೂ. ಪಡೆದಿದ್ದೇನೆ. ನಮ್ಮ ಕಾರ್ಯಕ್ರಮದ ಬಗ್ಗೆ ಓದಿದ ಹಲವಾರು ಜನರು ಮುಂದೆ ಬಂದು ಸಹಾಯ ಹಸ್ತ ನೀಡಿದ್ದಾರೆ. ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಅವರು ಹೇಳುತ್ತಾರೆ.
ತಾನು ಸ್ವೀಕರಿಸಿದ ಹಣದಿಂದ ಹಲವಾರು ಪ್ರದೇಶಗಳಲ್ಲಿ ಆಹಾರ ವಿತರಣೆಯನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
“ಕೈಯಲ್ಲಿರುವ ಹಣದೊಂದಿಗೆ, ನಾವು ಸಗಟು ಮಾರುಕಟ್ಟೆಯಿಂದ ಅಗತ್ಯವಾದ ದಿನಸಿ ವಸ್ತುಗಳನ್ನು ಖರೀದಿಸಿದ್ದೇವೆ, ನಂತರ ಅದನ್ನು ಬೇಯಿಸಿದ ಆಹಾರದ ಜೊತೆಗೆ, ಅಗತ್ಯವಿರುವ ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ವಿತರಿಸಲು ನಾವು ಯೋಜಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಆಹಾರ ವಿತರಣೆಯ ಜೊತೆಗೆ, ಅಕ್ಷಯ್ ಕೊಥವಾಲೆ ತಮ್ಮ ಸ್ವಂತ ರಿಕ್ಷಾದಲ್ಲಿ ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಉಚಿತ ಸವಾರಿಯನ್ನೂ ನೀಡುತ್ತಾರೆ.
ಅವರು ತಮ್ಮ ಆಟೋರಿಕ್ಷಾದಲ್ಲಿ ಧ್ವನಿವರ್ಧಕವನ್ನು ಹಾಕಿದ್ದು, ಅದರ ಮೂಲಕ ಅವರು ಮತ್ತು ಅವರ ಸ್ನೇಹಿತರು ಕೊರೊನಾ ಸಾಂಕ್ರಮಿಕದ ವಿರುದ್ಧ ಹೇಗೆ ಸುರಕ್ಷಿತವಾಗಿರಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಓದಿ: ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟಿರುವ ನಟರಾದ ಸೋನು ಸೂದ್ ಹಾಗೂ ಸ್ವರ ಭಾಸ್ಕರ್


