ಎಲೆಮರೆ-34
ಅರುಣ್ ಜೋಳದಕೂಡ್ಲಿಗಿ
ಕುಡಿಯುವ ನೀರಿಗೆ ಬರ ಇರುವ, ಅಂತರ್ಜಲ ತುಂಬಾ ಆಳಕ್ಕೆ ಕುಸಿದಿರುವ ಜಗಳೂರಿನಂತಹ ಬರಡು ನೆಲದಲ್ಲಿ, ಪ್ರವೀಣ್ ಕುಮಾರ್ ಭೂಗರ್ಭ ಶಾಸ್ತ್ರದಲ್ಲಿ ತಜ್ಞತೆ ಪಡೆದು, ತನ್ನ ಪಿಹೆಚ್‍ಡಿ ಸಂಶೋಧನೆಗೆ ಜಗಳೂರನ್ನೆ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.
ಓಮ್ನಿ ಕಾರಲ್ಲಿ ಇಬ್ಬರು ಯುವಕರು ಬಂದು ಯಾವು ಯಾವುದೋ ಮಿಷನ್ ತೆಗೆದುಕೊಂಡು ನೆಲದ ಮೇಲಿಟ್ಟು ಪರೀಕ್ಷೆ ಮಾಡುತ್ತಿದ್ದದ್ದು ರೈತರಿಗೆ ವಿಶೇಷವೆನ್ನಿಸಿತ್ತು. ಕುತೂಹಲಗೊಂಡು ಹೀಗೆ ಪರೀಕ್ಷೆ ಮಾಡುವ ಹುಡುಗನನ್ನು `ಏನ್ ಸ್ವಾಮಿ ಇದು?’ ಎಂದು ಕೇಳಿಯೇ ಬಿಟ್ಟರು. `ನಮ್ಮ ಭಾಗದಲ್ಲಿ ನೆಲದ ಒಳಗಿನ ನೀರು ಕಡಿಮೆಯಾಗುತ್ತಿದೆ, ಅದರ ಬಗ್ಗೆ ಸಂಶೋಧನೆ ಮಾಡ್ತಿದಿನಿ, ಎಷ್ಟು ಆಳಕ್ಕೆ ನೀರು ಹೋಗಿದೆ, ಯಾಕೆ ಹೋಗಿದೆ? ಮತ್ತೆ ನೀರು ಬರಬೇಕಂದ್ರೆ ಏನು ಮಾಡಬೇಕು ಅನ್ನೋದನ್ನು ಪರೀಕ್ಷೆ ಮಾಡತೀನಿ’ ಎಂದು ಒಬ್ಬ ಯುವಕ ರೈತರಿಗೆ ಸರಳವಾಗಿ ಅರ್ಥವಾಗುವಂತೆ ವಿವರಿಸುತ್ತಾನೆ. ಅದಕ್ಕೆ ರೈತರು `ಹೋದ ನೀರನ್ನು ವಾಪಾಸ್ ಹೆಂಗೆ ತರ್ತೀರಿ? ಎಂದು ಮರುಪ್ರಶ್ನೆ ಮಾಡುತ್ತಾರೆ. ಆ ಯುವಕ ತಾಳ್ಮೆಯಿಂದಲೆ `ಹೇಗೆ ನೀರನ್ನು ಮತ್ತೆ ತರಬೇಕು ಅಂತಾನೆ ಸಂಶೋಧನೆ ಮಾಡ್ತಿದಿನಿ, ನಾಲ್ಕೈದು ವರ್ಷ ಸಂಶೋಧನೆ ಮಾಡಿದ ಮೇಲೆ ಏನೇನು ಮಾಡಬಹುದು ಅಂತ ಹೇಳಬಹುದು, ಈಗಲೆ ಹೇಳೋಕೆ ಆಗಲ್ಲ’ ಎಂದು ಉತ್ತರಿಸುತ್ತಾನೆ. ಈ ಸಂಭಾಷಣೆ ನಡೆದದ್ದು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದಲ್ಲಿ. ಈ ಪ್ರಯೋಗ ಮಾಡಿದ ಯುವಕ ಜಗಳೂರು ತಾಲೂಕಿನ ಜ್ಯೋತಿಪುರದ ಪ್ರವೀಣ್ ತನ್ನ ಪಿಹೆಚ್.ಡಿ ಸಂಶೋಧನೆಯ ವಿಷಯವಾದ `ಹೈಡ್ರೋ ಜಿಯಾಲಜಿಕಲ್ ಅಕೌಂಟಿಂಗ್ ಆಫ್ ಜಗಳೂರ್ ತಾಲೂಕ್ ದಾವಣಗೆರೆ ಡಿಸ್ಟ್ರಿಕ್ಟ್ ಕರ್ನಾಟಕ ಸ್ಟೇಟ್ ಇನ್ ದ ಪರ್ಸ್‍ಸ್ಪೆಕ್ಟಿವ್ ಆಫ್ ಆರ್ಟಿಫಿಷಿಯಲ್ ರೀಚಾರ್ಜ್’ ಕುರಿತು ಸಂಶೋಧನೆಗಾಗಿ.
ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯದ ಸಂಶೋಧನೆಗಳಲ್ಲಿ ತಮ್ಮ ಪ್ರದೇಶದ ಸಂಸ್ಕøತಿ ಇತಿಹಾಸವನ್ನು ಕುರಿತು ಅಧ್ಯಯನ ಮಾಡುವುದು ಸಾಮಾನ್ಯ ಸಂಗತಿ. ಆದರೆ ಭೂಗರ್ಭ ಶಾಸ್ತ್ರ ಕಲಿಯುತ್ತಿರುವ ವಿಜ್ಞಾನದ ವಿದ್ಯಾರ್ಥಿಯೊಬ್ಬ ತನ್ನದೇ ಪ್ರದೇಶದ ಸಮಸ್ಯೆಯೊಂದನ್ನು ಆಯ್ದುಕೊಂಡು ಸಂಶೋಧನೆ ಮಾಡುವುದು ನಿಜಕ್ಕೂ ವಿಶಿಷ್ಟವಾದದ್ದು. ಜಗಳೂರು ತಾಲೂಕು ನೀರಿನ ಬವಣೆಯಲ್ಲಿದೆ. ಅಂತರ್ಜಲ ದೊಡ್ಡಮಟ್ಟದಲ್ಲಿ ಕೆಳಗಿಳಿದಿದೆ. ಇದೇ ನೆಲದಲ್ಲಿ ಬೆಳೆದ ತಾನು ತನ್ನ ಸಂಶೋಧನೆಯಿಂದ ಈ ಪ್ರದೇಶದ ರೈತರಿಗೆ, ಜನ ಸಾಮಾನ್ಯರಿಗೆ ಉಪಯುಕ್ತ ಆಗುವಂತೆ ಅಂತರ್ಜಲವನ್ನು ಹೆಚ್ಚಿಸುವ ಕುರಿತು ವೈಜ್ಞಾನಿಕ ಸಂಶೋಧನೆ ಕೈಗೊಂಡ ಈ ಯುವಕನೇ ಪ್ರವೀಣ್.
ಅರಣ್ಯ ಇಲಾಖೆಯ ದಿನಗೂಲಿ ನೌಕರ ದಲಿತ ಸಮುದಾಯದ ಡಿ.ವೆಂಕಟೇಶ್ ಮತ್ತು ಅಂಗನವಾಡಿ ಕಾರ್ಯಕರ್ತೆ ಮಹಾಂತಮ್ಮ ದಂಪತಿಗಳ ಮಗನಾದ ಪ್ರವೀಣ್ ಜಗಳೂರಿನಂತಹ ಬರಡು ಪ್ರದೇಶದಲ್ಲಿ ಕಡುಕಷ್ಟದಲ್ಲಿ ಓದಿದ ಯುವಕ. ಪಿ.ಯು ತನಕ ಜಗಳೂರಿನ ನಲಂದಾ ಕಾಲೇಜಿನಲ್ಲಿ ಓದಿದ ಪ್ರವೀಣ್ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಿಇಟಿಯಲ್ಲಿ ಉತ್ತಮ ಅಂಕ ಗಳಿಸಿ ಸೆಂಟ್ರಲ್ ಯುನಿವರ್ಸಿಟಿ ಗುಲ್ಬರ್ಗಾಕ್ಕೆ 2012ರಲ್ಲಿ ಸೇರುತ್ತಾನೆ. ಭೂವಿಜ್ಞಾನ ವಿಭಾಗದಲ್ಲಿ ಬಿಎಸ್ಸಿ ಆನರ್ಸ್ ನಾಲ್ಕನೆ ರ್ಯಾಂಕ್ ಪಡೆಯುತ್ತಾರೆ. ಆನ್ವಯಿಕ ಭೂವಿಜ್ಞಾನ ಮತ್ತು ಜಿಯೋ ಇನ್ಪಾರ್ಮಾಟಿಕ್‍ನಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆಯುತ್ತಾನೆ. ಇದೀಗ ಪ್ರೊ.ಮಹಮದ್ ಅಸ್ಲಾಂ ಅವರ ಮಾರ್ಗದರ್ಶನದಲ್ಲಿ ಜಗಳೂರು ಭಾಗದಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಸಾಧ್ಯತೆಗಳ ಕುರಿತು ಸಂಶೋಧನೆ ಮಾಡುತ್ತಿದ್ದಾರೆ.
ಈ ಸಂಶೋಧನೆ ಕುರಿತಂತೆ, ಪ್ರವೀಣ್ ಕುಮಾರ್ `ಜಗಳೂರು ಭಾಗದಲ್ಲಿ ಮಳೆ ನೀರಿನಿಂದ ರೀಚಾರ್ಜ್ ಮಾಡುವುದು ಹೇಗೆ? ಈ ಭಾಗದಲ್ಲಿ ನೀರಿನ ಆಳ ಎಷ್ಟಿದೆ, ಒಳಗಡೆ ಪ್ಲೆಕ್ಚಿಯೇಷನ್ ಹೇಗಿದೆ? ಇದೆಲ್ಲವನ್ನು ನೂರು ವರ್ಷದ ಮಳೆಯ ಅಂಕಿಅಂಶಗಳನ್ನು ಆಧರಿಸಿ ಅಧ್ಯಯನ ಮಾಡುತ್ತಿದ್ದೇನೆ. ಜಗಳೂರಿನ ಕುಡಿವ ನೀರಿನ ಗುಣಮಟ್ಟದ ಪರೀಕ್ಷೆಯನ್ನು 30 ಹಳ್ಳಿಗಳಲ್ಲಿಯೂ, 50 ಹಳ್ಳಿಗಳ ಲೋಕೇಷನ್ನುಗಳಲ್ಲಿ ವರ್ಟಿಕಲ್ ಎಲೆಕ್ರಿಕ್ಟ್ ಸರ್ವೆ ಮಾಡಲಾಗಿದೆ. ಅಂತಿಮವಾಗಿ ಈ ಸಂಶೋಧನೆಯಿಂದ ಜಗಳೂರು ಭಾಗದಲ್ಲಿ ಅಂತರ್ಜಲವನ್ನು ಹೇಗೆ ವೃದ್ಧಿಸಬಹುದು ಎನ್ನುವುದಕ್ಕೆ ಭೂಗರ್ಭ ಶಾಸ್ತ್ರದ ನೆಲೆಯ ವೈಜ್ಞಾನಿಕ ಮಾರ್ಗಗಳನ್ನು ಕಂಡುಹಿಡಿಯಲಾಗುವುದು’ ಎಂದು ಹೇಳುತ್ತಾನೆ.
ಭೂಗರ್ಭ ಶಾಸ್ತ್ರದ ಸಂಶೋಧನೆಗಳಲ್ಲಿ ಪ್ರವೀಣ್ ಕುಮಾರ್ ನಿರಂತರವಾಗಿ ತೊಡಗಿಕೊಂಡ ಕಾರಣ ಹೊಸ ಹೊಸ ಸಂಶೋಧನೆಗಳ ಮೂಲಕ ಗಮನಸೆಳೆದಿದ್ದಾನೆ. ಇಂತಹ ಪ್ರಯತ್ನಗಳಿಗಾಗಿ ಹಲವು ಪ್ರಶಸ್ತಿಗಳು ಪ್ರವೀಣ್ ಅವರನ್ನು ಗುರುತಿಸಿವೆ. ಕೊಲ್ಕತ್ತಾದ ಅಂತರಾಷ್ಟ್ರೀಯ ಎನ್ವಿರಾನ್‍ಮೆಂಟ್ ಅಂಡ್ ಇಕಾಲಜಿ ಪೌಂಡೇಷನ್ ಅವರು 2017ರ `ಜೂನಿಯರ್ ಸೈಂಟಿಸ್ಟ್’ ಪ್ರಶಸ್ತಿ, ಕೊಲ್ಕತ್ತಾದ ವಲ್ರ್ಡ್ ಅಚೀವರ್ಸ್ ಪೌಂಡೇಷನ್ 2018ರಲ್ಲಿ `ಕ್ಲೀನ್ ಎನ್ವಿರಾನ್‍ಮೆಂಟ್ ಎಜುಕೇಷನ್ ಅಂಡ್ ಪ್ರಮೋಷನ್’ ಪ್ರಶಸ್ತಿ, 2019ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ಕೇಂದ್ರ ಮತ್ತು ಯುವಜನ ಸಚಿವಾಲಯ ಪ್ರಾಯೋಜಿಸಿದ ಸೆಮಿನಾರಿನಲ್ಲಿ `ಸ್ವಾಮಿ ವಿವೇಕಾನಂದ ಎಕ್ಸಲೆನ್ಸ್ ಅವಾರ್ಡ್’, ಥಾಯಲ್ಯಾಂಡಿನ ಬ್ಯಾಂಕಾಕ್‍ನಲ್ಲಿ ಆಯೋಜಿಸಿದ ಎರಡನೆ ಅಂತರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಮ್ಮೇಳನದಲ್ಲಿ 2019ರ `ಯುವ ವಿಜ್ಞಾನಿ’ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈಚೆಗೆ ಆಸ್ಟ್ರಿಯಾ ದೇಶದ ಯುನೈಟೆಡ್ ಸ್ಪೇಸ್ ರಿಸರ್ಚ್ ಕೇಂದ್ರವು ಥಾಯ್‍ಲ್ಯಾಂಡ್‍ನ ಏಷಿಯನ್ ಇನ್‍ಸ್ಟಿಟೂಟ್ ಆಫ್ ಟೆಕ್ನಾಲಜೀಸ್‍ನ ಸಹಯೋಗದಲ್ಲಿ ಥಾಯಲ್ಯಾಂಡಿನ ಪತುಮಥನಿಯಲ್ಲಿ 202 ರ ಜನವರಿ 6ರಿಂದ 10ರ ವರೆಗೆ ಅಂತರಾಷ್ಟ್ರೀಯ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಆಸ್ಟ್ರಿಯಾ ಸರಕಾರವು ಸೆಟಲೈಟ್ ತಂತ್ರಜ್ಞಾನದಲ್ಲಿ ಆಧುನಿಕ ಸಾಫ್ಟ್‍ವೇರ್ ಅಭಿವೃದ್ಧಿಯನ್ನು ಉತ್ತೇಜಿಸಲು, ಈ ಕ್ಷೇತ್ರದಲ್ಲಿ ತಜ್ಞತೆ ಪಡೆದವರಿಂದ ಅರ್ಜಿ ಕರೆಯಲಾಗಿತ್ತು. ಅರ್ಜಿ ಸ್ವೀಕೃತಿಯ ನಂತರ ಅರ್ಜಿದಾರರಿಗೆ ಈ ಸಂಶೋಧನೆಯಿಂದ ನಿಮ್ಮ ದೇಶಕ್ಕೆ ಏನು ಕೊಡುಗೆ ನೀಡುತ್ತೀರಿ? ಎಂದು ಕೇಳಲಾಗಿತ್ತು. ಇದಕ್ಕೆ ಸಮರ್ಥವಾದ ಉತ್ತರ ನೀಡಿದ 18 ಜನರನ್ನು ಅಂತಿಮವಾಗಿ ಆರಿಸಿ, ಪ್ರತಿ ದೇಶದಿಂದ ಆಯ್ದ ಇಬ್ಬರಿಗೆ ಅವಕಾಶ ನೀಡಲಾಗಿತ್ತು. ಹಾಗಾಗಿ ಭಾರತದ ಪ್ರತಿನಿಧಿಗಳಾಗಿ ಉತ್ತರಖಂಡದ ಐಐಟಿ ರೂರ್ಕಿಯಿಂದ ಒಬ್ಬರು ಆಯ್ಕೆಯಾದರೆ, ಮತ್ತೊಬ್ಬರು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಜ್ಯೋತಿಪುರದ ಪ್ರವೀಣ್ ಆಯ್ಕೆಯಾಗಿದ್ದರು.
ಈ ತರಬೇತಿ ಶಿಬಿರದಲ್ಲಿ ಲ್ಯಾಂಡ್ ಸರ್ವೆ, ವೆಹಿಕಲ್ ಟ್ರಾಕಿಂಗ್, ಫಾರೆಸ್ಟ್ ನ್ಯಾವಿಗೇಷನ್, ಶಿಪ್ ನ್ಯಾವಿಗೇಷನ್ ಮುಂತಾದ ಹೊಸ ಸಂಶೋಧನೆಗಳ ಬಗೆಗೆ ಚರ್ಚೆಯಾಯಿತು. ಉದಾಹರಣೆಗೆ ಲ್ಯಾಂಡ್ ಸರ್ವೆ ಎಂದರೆ ಈಗಲೂ ಚೈನ್ ಹಿಡಿದು ಅಳತೆ ಮಾಡಲಾಗುತ್ತದೆ. ಆದರೆ ಲ್ಯಾಂಡ್ ಸರ್ವೆ ಸಾಫ್ಟ್‍ವೇರ್ ಅಭಿವೃದ್ಧಿಯಾದರೆ ಅಳತೆ ಮಾಡುವ ನೆಲದ ನಾಲ್ಕು ಬಿಂದುಗಳನ್ನು ಗುರುತಿಸಿಕೊಂಡು, ಆಂಟೆನಾ ನಿಲ್ಲಿಸಿ ಸ್ಯಾಟಲೈಟ್ ಸಂಪರ್ಕಿಸಿದರೆ ವಾರಗಟ್ಟಲೆ ಮಾಡುವ ಭೂ ಅಳತೆಯನ್ನು ಒಂದು ಗಂಟೆಯಲ್ಲಿ ಮಾಡಬಹುದಾಗಿದೆ. ಇಂತಹ ಹೊಸ ಬಗೆಯ ಸಂಶೋಧನೆಗಳ ಚರ್ಚೆ ಸಂವಾದ ಸಂಶೋಧನ ಪ್ರಬಂಧಗಳು ಈ ಶಿಬಿರದಲ್ಲಿ ಮಂಡನೆಯಾದವು. ಇದರಲ್ಲಿ ಪ್ರವೀಣ್ ಅವರ ಕೃತಕ ಪುನರ್‍ಭರ್ತಿ ಕಾರ್ಯ, ಜಲ ಸಂಪನ್ಮೂಲ ನಿರ್ವಹಣೆ, ಹೈಡ್ರಾಲಾಜಿ, ಘನತ್ಯಾಜ್ಯ ನಿರ್ವಹಣೆ, ಭೂ ಗರ್ಭಕ್ಕೆ ನೀರನ್ನು ಪುನರ್ ಹಾಯಿಸುವ ಹೊಸ ವಿಧಾನ, ಭೂಮಿ ಮತ್ತು ಪರಿಸರ ವಿಜ್ಞಾನದ ಬಗೆಗಿನ ಹೊಸ ಬಗೆಯ ಆಲೋಚನೆಗಳು ಮತ್ತು ಜಿಯೋ ಇನ್ಫಾರ್ಮೆಟಿಕ್ಸ್ ಮತ್ತು ರಿಮೋಟ್ ಸೆನ್ಸಿಂಗ್ ವಿಷಯದಲ್ಲಿ ಪ್ರವೀಣ್ ಕುಮಾರ್ ಅವರ ತಜ್ಞತೆಯು ಗಮನಸೆಳೆಯಿತು. ಇದೆಲ್ಲದರ ಪರಿಣಾಮವಾಗಿ ಈ ಶಿಬಿರದಲ್ಲಿ ಪ್ರವೀಣ್ ಅವರನ್ನು `ಅಂತರಾಷ್ಟ್ರೀಯ ಪ್ರಯಾಣ ವಿದ್ಯಾರ್ಥಿ ವೇತನ’ಕ್ಕೆ ಆಯ್ಕೆಮಾಡಲಾಯಿತು. ಇದು ಪ್ರವೀಣ್ ಅವರ ಈತನಕದ ಜೀವಿತದ ದೊಡ್ಡ ಸಾಧನೆಯೆಂದೇ ಹೇಳಬೇಕು.
ಕುಡಿಯುವ ನೀರಿಗೆ ಬರ ಇರುವ, ಅಂತರ್ಜಲ ತುಂಬಾ ಆಳಕ್ಕೆ ಕುಸಿದಿರುವ ಜಗಳೂರಿನಂತಹ ಬರಡು ನೆಲದಲ್ಲಿ, ಭೂಗರ್ಭ ಶಾಸ್ತ್ರದಲ್ಲಿ ತಜ್ಞತೆ ಪಡೆದು, ತನ್ನ ಪಿಹೆಚ್‍ಡಿ ಸಂಶೋಧನೆಗೆ ಜಗಳೂರನ್ನೆ ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ. ಜಗಳೂರು ಭಾಗದ ಅಂತರ್ಜಲ ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಶೋಧಿಸುತ್ತಿರುವ ದಲಿತ ಸಮುದಾಯಕ್ಕೆ ಸೇರಿದ ಯುವಕ ಪ್ರವೀಣ್ ಈ ಭಾಗದ ಭಗೀರಥನಂತೆಯೇ ಕಾಣುತ್ತಾನೆ.



ಇಂತಹ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು.