ಜೂನ್ 19 ರಂದು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯದ ನಾಲ್ಕು ಸ್ಥಾನಗಳಲ್ಲಿ ಎರಡಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ರಾಜ್ಯಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ತಮ್ಮ ಅಭ್ಯರ್ಥಿಯನ್ನಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಪಕ್ಷವೂ ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ಇಂದು ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ರಾಜ್ಯಸಭೆಗೆ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಇವತ್ತಿನ ಸಂದರ್ಭದಲ್ಲಿ ದೇಶಕ್ಕೆ ದೇವೇಗೌಡರಂತಹ ನಾಯಕರ ಅವಶ್ಯಕತೆ ಇದೆ. ಇಲ್ಲಿಯ ತನಕ ಯಾವ ಕಾಂಗ್ರೆಸ್ ನಾಯಕರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಆದರೆ ದೇವೇಗೌಡರು ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ ಎಂದು ಹೇಳಿದರು.
ರಾಜ್ಯಸಭೆಗೆ ಆಯ್ಕೆ ಆಗಲು ಮೊದಲ ಪ್ರಾಶಸ್ತ್ಯದ 48 ಶಾಸಕರ ಮತಗಳು ಬೇಕು. ಜೆಡಿಎಸ್ ಬಳಿ 34 ಶಾಸಕರಿದ್ದಾರೆ. ಅಲ್ಲಿಗೆ ಇನ್ನು 14 ಮತಗಳು ಕೊರತೆಯಾಗಲಿದ್ದು, ದೇವೇಗೌಡರು ಸ್ಪರ್ಧೆ ಮಾಡಿದರೆ ಈ ಮತಗಳನ್ನು 64 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇತ್ತ ಮಲ್ಲಿಕಾರ್ಜುನ ಖರ್ಗೆ ಅವರು ಅಭ್ಯರ್ಥಿಯಾಗಲು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಒಪ್ಪಿ, ಅನುಮತಿ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯಸಭೆ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಹಲವು ಮುಖಂಡರ ನಡುವೆ ಪೈಪೋಟಿ ನಡೆದಿತ್ತು. ಇದೀಗ ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.
ಕಾಂಗ್ರೆಸ್ ನಿಂದ ತುಮಕೂರಿನ ಮುದ್ದಹನುಮೇಗೌಡ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಖರ್ಗೆ ಹೆಸರನ್ನು ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರು ಕೂಡ ಶಿಫಾರಸ್ಸು ಮಾಡಿದ್ದರು ಎನ್ನಲಾಗಿದೆ. ಹೀಗಾಗಿ, ಇದೇ ಮೊದಲ ಬಾರಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮೇಲ್ಮನೆ ಪ್ರವೇಶಿಸುವುದು ಖಚಿತವಾಗಿದೆ.
ಸೋಲಿಲ್ಲದ ಸರದಾರ ಎಂದು ಕರೆಸಿಕೊಂಡಿದ್ದ ಖರ್ಗೆಯವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಅಲ್ಲದೆ, ಜೆಡಿಎಸ್ ವರಿಷ್ಟ ದೇವೇಗೌಡರೂ ಸಹ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದು, ಅವರೂ ಕೂಡ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಪ್ರವೇಶ ಪಡೆಯಲು ಮುಂದಾಗಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಬಿಜೆಪಿಯ ಒಳಗೇ ಗಹಗ್ಗಜಗ್ಗಾಟ ನಡೆಯುತ್ತಿದೆ.
ಜೆಡಿಎಸ್‌ನ ಕುಪೇಂದ್ರ ರೆಡ್ಡಿ,ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ಪ್ರೊ.ರಾಜೀವ್ ಗೌಡ, ಬಿಜೆಪಿಯ ಪ್ರಭಾಕರ್ ಅವರ ರಾಜ್ಯಸಭೆ ಅವಧಿ ಜೂನ್ 25ಕ್ಕೆ ಕೊನೆಗೊಳ್ಳಲಿದೆ. ಈ ನಾಲ್ಕು ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ.
ಓದಿ: ಪಿಪಿಇ ಕಿಟ್, ಔಷಧಿ ಪೂರೈಕೆ ಆಗುತ್ತಿಲ್ಲ; ರಾಜಕೀಯವಾಡದಿರಿ: ಬಿಜೆಪಿ ವಿರುದ್ದ ಮಹಾ ಸಿಎಂ ಕಿಡಿ


