ಸತತ 11ನೇ ದಿನವೂ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ. ಇಂದು ಸಹ ಪೆಟ್ರೋಲ್ ದರ ಲೀಟರ್‌ಗೆ 55 ಪೈಸೆ ಹಾಗೂ ಡೀಸೆಲ್ ಲೀಟರ್‌ಗೆ 69 ಪೈಸೆ ಏರಿಕೆಯಾಗಿದೆ. ಆ ಮೂಲಕ ಗ್ರಾಹಕರಿಗೆ ನಿತ್ಯಹೊರೆ ಶುರುವಾಗಿದೆ.
ಕಳೆದ ವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ ಏರಿಕೆ ಕಾಣುತ್ತಿದೆ. ಕಳೆದ 10 ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 6.02 ರೂಪಾಯಿ ಹಾಗೂ ಡೀಸೆಲ್ 6.49 ರೂಪಾಯಿ ಹೆಚ್ಚಾಗಿದೆ.
ಇಂದು ಬೆಂಗಳೂರಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 79.22 ರೂಪಾಯಿ ಇದೆ. ಇನ್ನು ಡೀಸೆಲ್ ದರ ಪ್ರತಿ ಲೀಟರ್ಗೆ 71.49 ರೂಪಾಯಿ ಆಗಿದೆ.
ಲಾಕ್‌ಡೌನ್ ಕಾರಣಕ್ಕೆ 80 ದಿನಗಳ ಕಾಲ ದಿನಪ್ರತಿ ಬೆಲೆ ನಿಗಧಿ ಮಾಡದೇ ಒಂದೇ ದರವನ್ನು ಕೇಂದ್ರ ಸರ್ಕಾರ ನಿಗಧಿ ಮಾಡಿತ್ತು. ಇತ್ತೀಚೆಗೆ ಮತ್ತೆ ದಿನಪ್ರತಿ ದರನಿಗಧಿಗೆ ಮರಳಿದ್ದರಿಂದ ಸತತ 11 ನೇ ದಿನವೂ ಬೆಲೆ ಏರಿಕೆ ಕಂಡಿದೆ.
ಕೊರೊನಾ ಲಾಕ್ ಡೌನ್ ಸಮಯದಲ್ಲಿ ತೈಲ ಬೆಲೆ ಹೆಚ್ಚಳ ಮಾಡಿರುವುದು ಕೇಂದ್ರ ಸರ್ಕಾರದ ಸಂಪೂರ್ಣ ಅಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿನ್ನೆ ಆರೋಪಿಸಿದ್ದರು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ಮೋದಿ ಸರ್ಕಾರ ಪ್ರತಿ ದಿನ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಅನಗತ್ಯ ಹೊರೆ ಹೊರಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬಿಕ್ಕಟ್ಟಿನ ಸಮುಯದಲ್ಲೂ ತೈಲ ಬೆಲೆ ಹೆಚ್ಚಿಸಿದ ಕೇಂದ್ರಕ್ಕೆ ಸೂಕ್ಷ್ಮತೆಯಿಲ್ಲ : ಸೋನಿಯಾ ಗಾಂಧಿ


