ಚೀನಾ ಕಳೆದ ಮೇ ತಿಂಗಳಿನಿಂದ ಲಡಾಕ್‌ನ ಗಾಲ್ವನ್ ಕಣಿವೆ ಮತ್ತು ಪೋಂಗೊಂಗ್ ತ್ಸೋ ಕೆರೆಯ ಪ್ರದೇಶವನ್ನು ಒತ್ತುವರಿ ಮಾಡಿ ವಾಸ್ತವ್ಯ ಹೂಡಿದೆ ಎಂಬ ವರದಿಗಳು ಕೇಳುತ್ತಾ ಬಂದಿದ್ದೇವೆ. ಈಗ ಭಾರತ ತನ್ನ ಸೇನಾಧಿಕಾರಿಯನ್ನು ಸೇರಿದಂತೆ 20 ಯೋಧರನ್ನು ಈ ಗಡಿ ಸಂಘರ್ಷದಲ್ಲಿ ಕಳೆದುಕೊಂಡಿದೆ. ಚೀನಾ ಸೈನ್ಯದ ಸಾವು ನಷ್ಟ ಇನ್ನೂ ವರದಿಯಾಗಿಲ್ಲ. ಈ ಸಂಘರ್ಷದ ಸಾವುಗಳಿಗೆ ಮುಖ್ಯ ಕಾರಣ ತಿಳಿದು ಬಂದಿಲ್ಲವಾದರೂ, 70ರ ದಶಕದ ನಂತರ ಇದೇ ಮೊದಲ ಬಾರಿ 3488 ಕಿ.ಮೀ ಉದ್ದಗಲ ಇರುವ ಚೀನಾ ಗಡಿ ರೇಖೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ನಮ್ಮ ಮಾಧ್ಯಮಗಳು ಏನು ಹೇಳುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಚೀನಾದ ಮಾಧ್ಯಮಗಳ ಪ್ರಕಾರ ಭಾರತವು ಸಂಧಾನಕ್ಕೆ ಒಪ್ಪಿಯೂ ಕೂಡ ಸೋಮವಾರದಂದು ಎರಡು ಕಡೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದಾಗ ಈ ಸಂಘರ್ಷ ಆಗಿದೆ ಮತ್ತು ಅದಕ್ಕೆ ಭಾರತದ ಆಕ್ರಮಣಕಾರಿ ವರ್ತನೆಯೇ ಕಾರಣವಂತೆ. ಪ್ರಸ್ತುತ ಪರಿಸ್ಥಿತಿಯನ್ನು ಬಗೆಹರಿಸಲು ಎರಡೂ ಕಡೆಯ ಹಿರಿಯ ಸೇನಾಧಿಕಾರಿಗಳು ಸಂಧಾನದ ಮಾತುಕತೆಯಲ್ಲಿ ತೊಡಗಿದ್ದಾರೆ.
ಚೀನಾ ಈಗ ಲಡಾಕ್‌ನ ಮೂರು ಜಾಗಗಳಲ್ಲಿ ಬೀಡು ಬಿಟ್ಟು ರಸ್ತೆ, ಮೂಲ ಸೌಕರ್ಯ ಕಾಮಗಾರಿಯಲ್ಲಿ ತೊಡಗಿದೆ ಹಾಗೂ ಟಿಬೆಟ್ ಪ್ರಾಂತ್ಯದಲ್ಲಿನ ಗಾರಿ ಗುನ್ಸ ವಿಮಾನ ನಿಲ್ದಾಣವನ್ನು ನವೀಕರಿಸುತ್ತಿದೆ. 60 ಕಿಲೋಮೀಟರ್ ಚದುರದಷ್ಟು ಒತ್ತುವರಿ ಗಾಲ್ವನ್ ಕಣಿವೆಯಲ್ಲೇ ಮಾಡಿದೆ. ಪೋಂಗೊಂಗ್ ತ್ಸೋ ಸರೋವರದಲ್ಲಿ ಚೀನಾ ಸೇನೆ ತನ್ನ ಬೋಟ್‌ಗಳಿಂದ ಗಸ್ತು ಸುತ್ತುತ್ತಿದ್ದು ಆರು ಜಾಗಗಳಲ್ಲಿ ತನ್ನ ಆರ್ಟಿಲರಿ ಗನ್‌ಗಳನ್ನು ನಿಯೋಜಿಸಿದೆ. ಸಿಕ್ಕಿಂನ ನಕುಲ ಪ್ರದೇಶದಲ್ಲೂ ಚೀನಾ ಸೈನ್ಯದ ಇದೆ ರೀತಿಯ ನುಸುಳುವಿಕೆ ವರದಿಯಾಗಿದೆ. ಕಳವಳಕಾರಿ ಅಂಶವೆಂದರೆ ಗಾಲ್ವನ್ ಕಣಿವೆಯ ಎರಡು ಕಡೆಯ ಎತ್ತರದ ಪರ್ವತಗಳನ್ನು ಆಕ್ರಮಿಸಿಕೊಂಡಿರುವ ಚೀನಾ ಈಗ ಲಡಾಕ್‌ಗೆ ಸಂಪರ್ಕ ಕಲ್ಪಿಸುವ ದರ್ಬುಕ್-ಶ್ಯೋಕ್-ದೌಲತ್ ಬೆಗ್ ಒಳ್ದಿ ಹೆದ್ದಾರಿಯನ್ನು ನಿಯಂತ್ರಣ ಸುಲಭವಾಗಿ ಮಾಡಬಹುದಾಗಿದೆ.
ಕಳೆದ 2017ರಲ್ಲಿ ಭೂತಾನ್, ಭಾರತ ಮತ್ತು ಚೀನಾ ಗಡಿಯ ಬಳಿಯ ಧೊಕ್ಲೊಮ್ ಎತ್ತರದ ಪ್ರದೇಶದಲ್ಲಿ ಚೀನಾ ಈಗ ಮಿಲಿಟರಿ ಔಟ್‌ಪೋಸ್ಟ್ ಮಾಡಿ, ವಿಮಾನ ಏರುದಾರಿಯನ್ನು ನಿರ್ಮಿಸಿಕೊಂಡಿದೆ. ಭಾರತದ ಕಡೆಯಿಂದ ಸಿನಿಮೀಯ ರೀತಿಯಲ್ಲಿ ಉಡಾಫೆ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟರೆ, ಈ ಬಿಕ್ಕಟ್ಟಿನ ಸ್ವರೂಪ ಮತ್ತು ಗಂಭೀರತೆ ಕಾಣುತ್ತಿಲ್ಲ. ಗೃಹ ಸಚಿವ ಅಮಿತ್ ಶಾ ನಮ್ಮ ಒಂದು ಇಂಚು ಪ್ರದೇಶ ಯಾರಿಗೂ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದರೆ, ಗಡ್ಕರಿ ನಮಗೆ ಚೀನಾ ಪಾಕಿಸ್ತಾನದ ಜಾಗ ಬೇಡ ನಮಗೆ ಶಾಂತಿ ಬೇಕು ಎನ್ನುತ್ತಾರೆ. ಭಾರತದ ಯಾವುದೇ ಪ್ರಧಾನಿ ಕೈಗೊಳ್ಳದಷ್ಟು ಚೀನಾ ಪ್ರವಾಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈವರೆಗೂ ಆಗಿರುವ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
2019ರ ಆಗಸ್ಟ್ ತಿಂಗಳಿನಲ್ಲಿ ಭಾರತ ಏಕಪಕ್ಷೀಯವಾಗಿ ಸಂವಿಧಾನದ ಆರ್ಟಿಕಲ್ 370 ರದ್ದುಗೊಳಿಸಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಲಾಗಿತ್ತು. ಆಕ್ಸೈ ಚಿನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು ಮತ್ತು ಅದನ್ನು ಪಡೆಯುತ್ತೇವೆ ಎಂದು ಹೇಳಿತ್ತು. ಈ ಏಕಪಕ್ಷೀಯ ನಿರ್ಧಾರಗಳಿಂದ ಚೀನಾ ಕೆರಳಿತ್ತು. ಅದನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳುವ ಸಲುವಾಗಿ ಮೋದಿಯ ಚೀನಾ ಪ್ರವಾಸದ ವೂವಾನ್ ಸ್ಪಿರಿಟ್‌ನ ಮುಂದುವರೆದು ಭಾಗವಾಗಿ ಚೆನ್ನೈ ಕನೆಕ್ಟ್ ಮಾಡಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ನ್ನು ಮಹಾಬಲಿಪುರಂಗೆ ಕರೆಸಿ ಮಾತುಕತೆ ನಡೆಸಲಾಗಿತ್ತು. ಆ ಮಾತುಕತೆಗಳ ಸಾರಾಂಶವೇ ಯಾವುದೇ ಗಡಿ ವಿವಾದಗಳನ್ನು ಏಕಪಕ್ಷೀಯವಾಗಿ ನಿರ್ಧರಿಸದೇ ಪರಸ್ಪರ ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳುವುದಾಗಿತ್ತು. ಆದರೆ ಈವರೆಗೂ ಕೇಂದ್ರ ಸರ್ಕಾರ ಚೀನಾ ಗಡಿ ವಿವಾದದ ವಿಚಾರವಾಗಿ ಯಾವುದೇ ಸ್ಪಷ್ಟ ಸಂದೇಶ ಕೊಟ್ಟಿಲ್ಲ. ಚೀನಾದೊಂದಿಗಿನ ಭಾರತದ ಸಂಬಂಧ ಏನು? ಭಾರತ ಚೀನಾ ಸಮಸ್ಯೆಗಳೇನು? ಅದರ ಪರಿಹಾರ ಹೇಗೆ ಕಂಡುಕೊಳ್ಳುವುದು. ಭಾರತ ಮತ್ತು ಚೀನಾದ ಸಮನ್ವಯ ಗುರಿಯೇನು? ಈವರೆಗೂ ವಿರೋಧ ಪಕ್ಷದವರನ್ನು ಟೀಕಿಸುವುದನ್ನು ಬಿಟ್ಟು, ಚುನಾವಣಾ ಪ್ರಚಾರದಲ್ಲಿ ಭಾಷಣ ಬಿಟ್ಟು ಒಂದು ಸಣ್ಣ ಪ್ರೆಸ್ ಕಾನ್ಫರೆನ್ಸ್ ಕೂಡ ಮಾಡದ ಪ್ರಧಾನಿಯವರಿಂದ ಉತ್ತರ ಪಡೆಯುವುದು ಹೇಗೆ?
ಪ್ರಪಂಚದ ಮೇಲೆ ಅಧಿಪತ್ಯ ಸಾಧಿಸಲು ಹೊರಟಿರುವ ಚೀನಾದ ಆಕ್ರಮಣಕಾರಿ ನೀತಿಯನ್ನು ಭಾರತ ಒಗ್ಗಟ್ಟಾಗಿ ಎದುರಿಸಲೇಬೇಕಿದೆ. ಅಂತಹ ಒಗ್ಗಟ್ಟನ್ನು ಖಾತರಿಪಡಿಸುವ ಜವಾಬ್ದಾರಿ ಒಕ್ಕೂಟ ಸರ್ಕಾರದ್ದಾಗಿದೆ. ಏಕೆಂದರೆ ಎಲ್ಲಕ್ಕೂ ಇನ್ಯಾರನ್ನೋ ದೂರುತ್ತಾ, ಸತ್ಯಸಂಗತಿಗಳನ್ನು ಮುಚ್ಚಿಡುವ ಅದರ ರೀತಿಯು ಆತಂಕವನ್ನು ಹೆಚ್ಚಿಸುತ್ತಾ ಹೋಗುತ್ತಿದೆ.
(ಲೇಖಕರು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)
ಇದನ್ನೂ ಓದಿ: ಗಡಿಯಲ್ಲಿ ಸೈನಿಕರ ಸಾವು: ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು – ಸಿದ್ದರಾಮಯ್ಯ


