ಕನ್ನಡದ ಖಾಸಗಿ ಸುದ್ದಿ ಚಾನೆಲ್‌ಗಳಾದ ಟಿವಿ9, ಪಬ್ಲಿಕ್ ಟಿವಿ, ಸುರ್ವಣ ನ್ಯೂಸ್ ಚಾನೆಲ್‌ಗಳ ಮಾಲಿಕರು ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ 100 ಹಾಸಿಗೆಗಳ ಕೊರೊನಾ ಆಸ್ಪತ್ರೆಗಳನ್ನು ತೆರೆಯಲಿದ್ದಾರೆ ಎಂಬ ಸಂದೇಶವಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂದೇಶದಲ್ಲಿ, ಕೊರೊನಾ ರೋಗಿಗಳನ್ನು ಅವರೇ ಮನೆ ಬಾಗಿಲಿಗೆ ಬಂದು ಕರೆದೊಯ್ಯುತ್ತಾರೆ ಎಂದು ಮಾಹಿತಿ ಕೂಡಾ ಇದ್ದು ಇದನ್ನು ಸತ್ಯವೆಂದು ನಂಬಿದ ಹಲವಾರು ಜನರು ಅದನ್ನು ತಮ್ಮ ಖಾತೆಗಳಲ್ಲಿ ಹಂಚುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಕೊರೊನಾ ವಿಚಾರದಲ್ಲಿ ಮಾಧ್ಯಮಗಳ ಕಿರುಚಾಟ ತಾಳಲಾರದ ಯಾವುದೋ ಟ್ರೋಲ್ ತಂಡ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಆರಂಭವಾದಾಗಿನಿಂದ ಕೊರೊನಾವನ್ನು ನಿಭಾಯಿಸುವಲ್ಲಿ ವಿಫಲವಾದ ಸರ್ಕಾರದ ವಿರುದ್ದ ಪ್ರಶ್ನೆ ಕೇಳುವುದನ್ನು ಬಿಟ್ಟು, ’ಕೊರೊನಾ ವಿರುದ್ದ ರಣಕಲಿ’, ’ಮೋದಿ ಮಂತ್ರ’, ’ಮೋದಿ ರಣತಂತ್ರ’, ’ಮೋದಿ ಅಬ್ಬರಕ್ಕೆ ಕೊರೊನಾ ಸೈಲೆಂಟ್’ ಎಂದೆಲ್ಲಾ ಕವರ್ ಸ್ಟೋರಿಗಳನ್ನು ಮಾಡಿದರ ವಿರುದ್ದ ಈ ಟ್ರೋಲ್ ಮಾಡಲಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಸಾರ್ವಜನಿಕರಿಗೆ ಸೂಚನೆ ಎಂಬ ಶಿರ್ಷಿಕೆ ಇರುವ ನೋಟಿಸಿನಲ್ಲಿ, “ಟಿವಿ9, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್ ಚಾನೆಲ್‌ಗಳ ಮಾಲಿಕರು ಕರ್ನಾಟಕದ ಪ್ರತಿ ಜಿಲ್ಲಾ ಮಟ್ಟದಲ್ಲಿಯೂ 100 ಹಾಸಿಗೆಗಳ ಕೊರೊನಾ ಆಸ್ಪತ್ರೆಗಳನ್ನು ತೆರೆಯುತ್ತಿದ್ದು, ಕೊರೊನಾ ರೋಗಿಗಳನ್ನು ಅವರೇ ಮನೆ ಬಾಗಿಲಿಗೆ ಬಂದು ಕರೆದೊಯ್ಯುತ್ತಾರೆ” ಎಂದು ಮಾಹಿತಿಯಿರುವ ಪತ್ರಿಕಾ ಪ್ರಕಟಣೆಯ ರೀತಿ ಬರೆಯಲಾಗಿದೆ. ಸಧ್ಯಕ್ಕೆ ಇದು ವೈರಲಾಗಿದ್ದು ಕೆಲವರಿಗೆ ಅದರ ವ್ಯಂಗ್ಯ ಅರ್ಥವಾದರೆ ಹಲವರು ಅದನ್ನು ನಿಜವೆಂದೇ ನಂಬಿದ್ದಾರೆ.
ಅದರಲ್ಲಿರುವ ಸಂಪರ್ಕ ಸಂಖ್ಯೆಗೆ ಹಲವರು ಕರೆ ಮಾಡಿ ಮೂರು ಮಾಧ್ಯಮಗಳನ್ನೂ ಆಸ್ಪತ್ರೆ ನಿರ್ಮಾಣದ ಬಗ್ಗೆ ವಿಚಾರಿಸಲಾರಂಭಿಸಿದ್ದಾರೆ. ಇದು ಸದ್ಯ ಮಾಧ್ಯಮಗಳಿಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಆದರೆ, ಕರ್ನಾಕಟದ ಯಾವ ಮಾಧ್ಯಮವೂ ಕೊರೊನಾ ಆಸ್ಪತ್ರೆಗಳನ್ನು ತೆರೆಯುತ್ತಿಲ್ಲ ಎಂಬುದಷ್ಟೇ ವಾಸ್ತವದ ಸಂಗತಿ.
ಓದಿ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ!; ಬಹುಜನ ಭಾರತ


