Homeಮುಖಪುಟಕೊರೊನಾ: ವ್ಯಾಕ್ಸೀನ್ ಎಂದರೇನು? ಜಾಗತಿಕ ಸ್ಪರ್ಧೆಯು ಬೇಗ ವ್ಯಾಕ್ಸೀನ್ ಒದಗಿಸುತ್ತದೆಯೇ?

ಕೊರೊನಾ: ವ್ಯಾಕ್ಸೀನ್ ಎಂದರೇನು? ಜಾಗತಿಕ ಸ್ಪರ್ಧೆಯು ಬೇಗ ವ್ಯಾಕ್ಸೀನ್ ಒದಗಿಸುತ್ತದೆಯೇ?

ಸಾಮಾನ್ಯ ಸಂದರ್ಭದಲ್ಲಿ ಈ ಎಲ್ಲಾ ಹಂತಗಳು ತುರ್ತು ಸಂದರ್ಭ ಅಲ್ಲದಲ್ಲಿ, ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಲು ಸರಾಸರಿ 5 ರಿಂದ 10 ವರ್ಷ ಹಿಡಿಯುತ್ತದೆ.

- Advertisement -
- Advertisement -

ಕೋವಿಡ್-19 ಎಂಬ ಸಾಂಕ್ರಾಮಿಕ ಪಿಡುಗು ಇಡೀ ಜಗತ್ತನ್ನೇ ಸ್ಥಗಿತಗೊಳಿಸಿದೆ. ಲಾಕ್‍ಡೌನ್ ಮತ್ತು ಸರ್ಕಾರಗಳ ಇತರ ಕ್ರಮಗಳ ಹಾಗೂ ಆಶ್ವಾಸನೆಗಳ ಹೊರತಾಗಿಯೂ ಪ್ರತಿನಿತ್ಯ ಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸದ್ಯಕ್ಕೆ ವಿಶ್ವಾದ್ಯಂತ ಒಂದು ಕೋಟಿಗೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, 5 ಲಕ್ಷಕ್ಕೂ ಹೆಚ್ಚು ಜನರು ಇದರಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 7 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದು, 19,000 ಜನರು ಸಾವನ್ನಪ್ಪಿದ್ದಾರೆ.

ಕೋವಿಡ್-19 ಎಂಬುದು ಹೊಸ ನಾವೆಲ್ ಕೊರೊನಾ ವೈರಸ್ ಆಗಿದೆ. ಹಾಗಾಗಿ, ವೈದ್ಯಕೀಯ ಮತ್ತು ವೈಜ್ಞಾನಿಕ ಸಮುದಾಯಕ್ಕೆ ಈ ರೋಗದ ಗುಣಲಕ್ಷಣ ಮತ್ತು ಅದರ ಪೆಥಾಲಜಿ(ರೋಗಶಾಸ್ತ್ರ)ವನ್ನು ಅರಿಯಲು ಸಹಜವಾಗಿಯೇ ಹೆಚ್ಚಿನ ಸಮಯ ಹಿಡಿಯುತ್ತಿದೆ. ಇದನ್ನು ಈ ರೋಗದ ಬಗ್ಗೆ ಪ್ರಕಟವಾಗಿರುವ ಬರಹಗಳ ಸಂಖ್ಯೆಯಿಂದ ಅಂದಾಜಿಸಬಹುದು. ಮಾರ್ಚ್‍ನಿಂದ ಮೇ ತಿಂಗಳ ಮಧ್ಯೆ ಸುಮಾರು 36 ಸಾವಿರ ಬರಹಗಳು ಪ್ರಕಟವಾಗಿವೆ. ಸಹಜವಾಗಿಯೇ ಪ್ರಕಟಣೆಗಳನ್ನು ಹೊರತರುವ ಭರದಲ್ಲಿ ತಪ್ಪುಮಾಹಿತಿಗಳು ಕೂಡ ಈ ಬರಹಗಳಲ್ಲಿ ಒಳನುಸುಳಿಕೊಂಡಿದ್ದು ಕಂಡುಬಂದಿದೆ.

ಈ ಸ್ಪರ್ಧೆ ಕೇವಲ ಪ್ರಕಟಣೆಗಳಿಗೆ ಸೀಮಿತವಾಗಿಲ್ಲ. ಈ ರೋಗದೊಂದಿಗೆ ಹೋರಾಡುವ ಔಷಧಿಗಳನ್ನು ಹೊರತಂದು ಲಾಭ ಮಾಡಿಕೊಳ್ಳಲು ಔಷಧ ಕಂಪನಿಗಳೂ ಸೆಣಸುತ್ತಿವೆ. ಕಳೆದೆರಡು ತಿಂಗಳಲ್ಲಿ, ಹಲವಾರು ಆ್ಯಂಟಿವೈರಲ್ ಔಷಧಿಗಳನ್ನು ಪ್ರಯೋಗಿಸಲಾಗಿದ್ದು, ಅದರಲ್ಲಿ ಕೆಲವನ್ನು ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಒಂದೊಂದು ಔಷಧಿಯ ಬಗ್ಗೆ ಹೊರಬರುವ ಲೇಖನದಿಂದ ಆಯಾ ಔಷಧಿಗಳ ಬೆಲೆ ಏರುವುದು ಮತ್ತು ಇಳಿಯುವುದೂ ಕಂಡುಬಂದಿದೆ. ಒಂದು ದಿನ ಹೈಡ್ರಾಕ್ಸಿಕ್ಲೋರೋಕ್ವಿನ್ ಹೀರೋ ಆಗಿ ಮೆರೆದರೆ, ಇನ್ನೊಂದು ದಿನ ಡೆಕ್ಸಾಮೆತಸೋನ್ ಬೆಲೆ ಬಾಳುತ್ತಿದೆ.

ಇಂತಹ ಕಷ್ಟಕರ ಪರಿಸ್ಥಿತಿಗಳಲ್ಲಿ, ಯಾವ ರಾಷ್ಟ್ರಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆಯೋ, ಆ ರಾಷ್ಟ್ರಗಳು ಹೆಚ್ಚಿನ ಯಶಸ್ಸನ್ನು ಗಳಿಸಿವೆ. ಶ್ರೀಮಂತರಿಗಷ್ಟೇ ಆರೋಗ್ಯ ಸೇವೆ ಸುಲಭವಾಗಿರುವ ದೇಶಗಳಲ್ಲಿ ಹೆಚ್ಚಿನ ಸಾವುಗಳು ಕಂಡುಬಂದಿವೆ. ಈಗ ತಮ್ಮ ವಿಫಲತೆಯನ್ನು ಅಡಗಿಸಲು, ಈ ದೇಶದ ನಾಯಕರು ಇತರರನ್ನು ದೂಷಿಸುವುದು, ಯುದ್ಧದ ಬಗ್ಗೆ ಮಾತನಾಡುವುದು ಹಾಗೂ ಎಲ್ಲಾ ದೇವರ ಆಟ ಎಂದು ಹೇಳಲು ಆರಂಭಿಸಿದ್ದಾರೆ.

ವಿಜ್ಞಾನಿಗಳು, ಔಷಧ ಕಂಪನಿಗಳು ಹಾಗೂ ಸರಕಾರಗಳು ಈ ಪಿಡುಗನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದಕರ. ಈ ಪಿಡುಗಿಗೆ ಚಿಕಿತ್ಸೆಯ ಹುಡುಕಾಟವು ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿಗಳಿಂದ ಕೂಡಿರುವುದು ದುರದೃಷ್ಟಕರ.

ಈ ಸಮಯದಲ್ಲಿ, ರೋಗಿಗಳಿಗೆ ಆರೋಗ್ಯ ಸೇವೆ ಲಭ್ಯವಾಗಿಸುವಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಈ ಪಿಡುಗಿನಿಂದ ಸಾಯುತ್ತಿರುವ ರೋಗಿಗಳು ಔಷಧಿಗಳ ಕೊರತೆಯಿಂದ ಸಾಯುತ್ತಿಲ್ಲ. ಅದರ ಬದಲಿಗೆ, ಆಸ್ಪತ್ರೆಗಳಲ್ಲಿ ಪ್ರವೇಶ ಪಡೆಯಲಾರದೆ ಹಾಗೂ ಡಾಕ್ಟರ್‍ಗಳ ಮತ್ತು ವೆಂಟಿಲೇಟರ್‍ಗಳ ಕೊರತೆಯಿಂದ ಅಸುನೀಗುತ್ತಿದ್ದಾರೆ.

ಭಾರತದಲ್ಲಿ ಲಾಕ್‍ಡೌನ್ ಹೇರುವ ಮೂಲಕ ರೋಗವನ್ನು ನಿಯಂತ್ರಿಸುವ ವಿಧಾನಗಳು ವಿಫಲವಾಗಿದೆ. ಏಕೆಂದರೆ, ಸರಕಾರವು ಕೋವಿಡ್ ಪಾಸಿಟಿವ್ ರೋಗಿಗಳನ್ನು ಪತ್ತೆ ಹೆಚ್ಚಿ, ಅವರ ಸಂಪರ್ಕಕ್ಕೆ ಬಂದಿರಬಹುದಾದವರನ್ನು ಟ್ರ್ಯಾಕ್ ಮಾಡುವುದರಲ್ಲಿ, ಅವರನ್ನು ಪರೀಕ್ಷಿಸುವುದರಲ್ಲಿ ಹಾಗೂ ಆರೋಗ್ಯ ಸೇವೆಯಲ್ಲಿ ನಿರತರಾಗಿರುವವರಿಗೆ ಪಿಪಿಇ ಕಿಟ್ ನೀಡುವುದರಲ್ಲಿ ವಿಫಲವಾಗಿದೆ. ಭಾರತದಲ್ಲಿ ಹೆಚ್ಚಿನ ಆರೋಗ್ಯ ಸೇವೆಯು ಖಾಸಗಿ ಕೈಗಳಲ್ಲಿ ಇರುವುದರಿಂದ, ಖಾಸಗಿ ವೈದ್ಯಕೀಯ ಸಂಸ್ಥೆಗಳು ಈ ಬಿಕ್ಕಟ್ಟನ್ನು ಲಾಭ ಮಾಡುವ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿವೆ. ಇದನ್ನೇ ಬಳಸಿಕೊಂಡು ಪ್ರಧಾನಿಯವರು ಪಿಎಮ್-ಕೇರ್ಸ್ ನಿಧಿಯನ್ನು ಪ್ರಾರಂಭಿಸಿದರು. ಆದರೆ, ಅತ್ಯಂತ ದೊಡ್ಡ ಮೊತ್ತವನ್ನು ಸಂಗ್ರಹಿಸಿದ ಬಳಿಕ ಈಗ ಅದರ ಬಳಕೆ ಹೇಗೆ ಆಗುತ್ತಿದೆ ಎಂಬುದು ತಿಳಿಯುತ್ತಿಲ್ಲ; ರೋಗಿಗಳು ಖಾಸಗಿ ಆಸ್ಪತ್ರೆಗಳ ಲಕ್ಷಾಂತರ ರೂಪಾಯಿಗಳ ಬಿಲ್ ಪಾವತಿಸಲಾಗದೆ ಬಂಧಿಯಾದ ಸಂದರ್ಭದಲ್ಲಿ ಪಿಎಮ್ ಕೇರ್ಸ್ ನಿಧಿ ಅವರ ಸಹಾಯಕ್ಕೆ ಬರುತ್ತಿಲ್ಲ. ತನ್ನ ವಿಫಲತೆಗಳನ್ನು ಮುಚ್ಚಲು ಈಗ ನಮ್ಮ ಸರಕಾರವು ಬೇರೆಡೆ ಮುಖ ಮಾಡಿದೆ; ಅದು ವ್ಯಾಕ್ಸೀನ್, ಲಸಿಕೆ.

ಲಸಿಕೆಗಾಗಿ ಜಾಗತಿಕ ಸ್ಪರ್ಧೆ ಮತ್ತು ಭಾರತದ ಕೊವ್ಯಾಕ್ಸಿನ್

ಅನೇಕ ದೇಶಗಳು ಲಸಿಕೆ ಸಿದ್ಧಪಡಿಸಲು ಕೆಲಸ ಮಾಡುತ್ತಿವೆ. ಈಗಿನ ಅಂಕಿಅಂಶಗಳ ಪ್ರಕಾರ, 129 ಕೋವಿಡ್-19ರ ಲಸಿಕೆಗಳು ಪೂರ್ವಭಾವಿ (ಪ್ರಿ-ಕ್ಲಿನಿಕಲ್) ಹಂತದಲ್ಲಿವೆ ಹಾಗೂ 18 ಲಸಿಕೆಗಳನ್ನು ಮಾನವರ ಮೇಲೆ ಪ್ರಯೋಗಿಸಲಾಗುತ್ತದೆ.

ಆಸ್ಟ್ರಾಜೆನೆಕಾ ಎಂಬ ಬ್ರ್ರಿಟಿಷ್-ಸ್ವೀಡಿಷ್ ಕಂಪನಿಯು ಕೋವಿಡ್-19 ರೋಗಕ್ಕೆ ಲಸಿಕೆಯನ್ನು ತಯಾರಿಸುತ್ತಿದೆ ಹಾಗೂ ಅದನ್ನು 2020ರ ಕೊನೆಯಲ್ಲಿ ಯುರೋಪಿಯನ್ ಯುನಿಯನ್‍ಗಾಗಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. ಔಷಧಿಗಳ ಉತ್ಪಾದನೆ ಮತ್ತು ಬಯೋಟೆಕ್ ವಲಯದಲ್ಲಿ ಮುಂದುವರೆದು ಹೊರಹೊಮ್ಮುತ್ತಿರುವ ಭಾರತವೂ ಈ ಸ್ಪಧೆಯಲ್ಲಿ ತೊಡಗಿಸಿಕೊಂಡಿದೆ.

ಕಳೆದ ವಾರ, ಐಸಿಎಮ್‍ಆರ್ (ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ)ಯು ಆಗಸ್ಟ್ 15ರ ಒಳಗೆ ಭಾರತೀಯ ಕೋವಿಡ್-19 ಲಸಿಕೆಯನ್ನು ಸಿದ್ಧಪಡಿಸಲಿದೆ ಎಂದು ಘೋಷಿಸಿತು. ‘ಕೊವ್ಯಾಕ್ಸಿನ್’ ಎಂಬ ಈ ಲಸಿಕೆಯನ್ನು ಹೈದರಾಬಾದ್‍ನ ಬಯೋಟೆಕ್ ಕಂಪನಿಯಾದ ಭಾರತ್ ಬಯೋಟೆಕ್ ಮತ್ತು ಐಸಿಎಮ್‍ಆರ್ ಸೇರಿ ಅಭಿವೃದ್ಧಿಪಡಿಸುತ್ತಿದ್ದು, ಈ ಸುದ್ದಿಯು ಕೈಚೆಲ್ಲಿ ಕುಳಿತ ಅನೇಕರಲ್ಲಿ ನಿರೀಕ್ಷೆ ಹುಟ್ಟಿಸಿತು. ಆದರೆ ಕೆಲದಿನಗಳ ಮಟ್ಟಿಗೆ ಮಾತ್ರ.

ಕ್ಲಿನಿಕಲ್ ಟ್ರಯಲ್‍ಗಳಿಗೆ ಕೇವಲ 45 ದಿನಗಳನ್ನು ಮೀಸಲಿಟ್ಟು ಆಗಸ್ಟ್ 15ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ ನಂತರ, ಐಸಿಎಮ್‍ಆರ್‌ನ ನಿರ್ದೇಶಕರು ಲಸಿಕೆಯ ಕ್ಲಿನಿಕಲ್ ಟ್ರಯಲ್ ಮಾಡುವ 12 ಸಂಶೋಧನಾ ಸಂಸ್ಥೆಗಳಿಗೆ ಬರೆದ ಪತ್ರವೊಂದು ಬಹಿರಂಗವಾಯಿತು. ಆ ಪತ್ರದಲ್ಲಿ ಕ್ಲಿನಿಕಲ್ ಟ್ರಯಲ್‍ಗಳನ್ನು ತ್ವರಿತಗತಿಯಲ್ಲಿ ಮಾಡಬೇಕೆಂದು ನಿರ್ದೇಶಿಸಲಾಗಿತ್ತು. ಇದು ಸಹಜವಾಗಿಯೇ ವೈಜ್ಞಾನಿಕ ವಲಯದಲ್ಲಿ ಆತಂಕ ಸೃಷ್ಟಿಸಿತು. ಹಾಗೂ ಐಸಿಎಮ್‍ಆರ್ ಸಂಸ್ಥೆಯು ಆಗಸ್ಟ್ 15ರಂದು ಲಸಿಕೆ ಬಿಡುಗಡೆ ಮಾಡಿದರೆ, ಪ್ರಧಾನಮಂತ್ರಿಗಳು ಕೆಂಪು ಕೋಟೆಯಿಂದ ಘೋಷಿಸಬಹುದೆಂಬ ಉದ್ದೇಶ ಕೂಡ ಕಂಡುಬಂದಿದ್ದು, ದೇಶದ ಅತ್ಯುನ್ನತ ವೈಜ್ಞಾನಿಕ ಸಂಶೋಧನ ಸಂಸ್ಥೆಯ ಸ್ವಾಯತ್ತತೆಯ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿವೆ.

ವಿಜ್ಞಾನದ ಜಗತ್ತು ರಾಜಕಾರಣಿಗಳ ಹಿತಾಸಕ್ತಿಗಳ ಮೇರೆಗೆ ಕೆಲಸ ಮಾಡುವುದಿಲ್ಲ ಹಾಗೂ ಆ ಜಗತ್ತಿಗೆ ಸ್ವಾತಂತ್ರ್ಯ ದಿನ ಅಥವಾ ಗಣರಾಜ್ಯ ದಿನ ಎಂಬುದೂ ಗಣನೆಗೆ ಬರುವುದಿಲ್ಲ.

ವ್ಯಾಕ್ಸೀನ್ ಅಥವಾ ಲಸಿಕೆ ಎಂದರೇನು?

ಲಸಿಕೆ ಎಂದರೆ ವ್ಯಾಖ್ಯಾನದ ಅನುಗುಣವಾಗಿ, ಅದೊಂದು ಜೈವಿಕ ತಯಾರಿಕೆಯಾಗಿದ್ದು, ನಿರ್ದಿಷ್ಟ ಸಾಂಕ್ರಾಮಿಕ ರೋಗಗಳ ವಿರುದ್ಧ ಅದರಿಂದ ಆರ್ಜಿತ ರೋಗನಿರೋಧಕ ಶಕ್ತಿ ಉಂಟಾಗುತ್ತದೆ. ಲಸಿಕೆಯ ತಯಾರಿಕೆಯು ವಿವಿಧ ಸ್ವರೂಪಗಳಲ್ಲಿರಬಹುದಾಗಿದೆ. ಅದು ಆಯಾ ಬ್ಯಾಕ್ಟೀರಿಯ ಅಥವಾ ವೈರಸ್‍ನ ದುರ್ಬಲಗೊಳಿಸಿದ ಅಥವಾ ಶಾಖದಿಂದ ಕೊಲ್ಲಲ್ಪಟ್ಟ ಸ್ವರೂಪದಲ್ಲಿರಬಹುದು ಅಥವಾ ಆಯಾ ಬ್ಯಾಕ್ಟೀರಿಯ/ವೈರಸ್‍ನ ಪ್ರೋಟೀನ್‍ಗಳ ಒಂದು ಉಪಘಟಕವಾಗಿರಬಹುದು (ಸಬ್‍ಯುನಿಟ್). ಲಸಿಕೆಯ ಹಿಂದಿರುವ ಮೂಲತತ್ವವೇನೆಂದರೆ, ಅದನ್ನು ಮನುಷ್ಯರಿಗೆ ನೀಡಿದಲ್ಲಿ ಆ ವೈರಾಣುವಿನೊಂದಿಗೆ ಹೋರಾಡುವ ರೋಗನಿರೋಧಕ ಪ್ರತಿಕ್ರಿಯೆಯು ಪ್ರಾರಂಭವಾಗುವುದು ಹಾಗೂ ಅದರ ನೆನಪಿನ ಕೋಶಗಳ ಒಂದು ರಾಶಿಯನ್ನು ಸೃಷ್ಟಿಸುತ್ತದೆ. ಅದರಿಂದ ಭವಿಷ್ಯದಲ್ಲಿ ರೋಗ ಸೃಷ್ಟಿಸುವ ಆ ವೈರಾಣು ಅಥವಾ ಬ್ಯಾಕ್ಟೀರಿಯ(ಪ್ಯಾಥೋಜನ್)ದ ಸೋಂಕು ತಗುಲಿದಾಗ ಅದನ್ನು ಹಿಮ್ಮೆಟ್ಟಿಸುವ ಆ್ಯಂಟಿಬಾಡಿಗಳು ಸುಲಭದಲ್ಲಿ ಸೃಷ್ಟಿಯಾಗುವುದು. ಆಯಾ ಪ್ಯಾಥೋಜನ್‍ಗೆ ಅನುಗುಣವಾಗಿ ಆ ಲಸಿಕೆಯು ಜೀವನದುದ್ದಕ್ಕೂ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಬಹದು ಅಥವಾ ಅಲ್ಪಕಾಲಿಕ ರೋಗನಿರೋಧಕ ಶಕ್ತಿಯನ್ನಾದರೂ ಸೃಷ್ಟಿಸಬಹುದು. ಉದಾಹರಣೆಗೆ, ಫ್ಲೂ ವೈರಸ್ ತುಂಬಾ ವೇಗವಾಗಿ ರೂಪಾಂತರಗೊಳ್ಳುತ್ತಿರುತ್ತದೆ. ಹಾಗಾಗಿ, ಅದರ ಲಸಿಕೆಯನ್ನೂ ಆಗಾಗ ಅಪ್‍ಡೇಟ್ ಮಾಡಬೇಕಾಗುತ್ತದೆ.

ಲಸಿಕೆ (ವ್ಯಾಕ್ಸೀನ್) ತಯಾರಿಕೆಯ ಹಂತಗಳು

ಲಸಿಕೆಯ ತಯಾರಿಕೆಯು ಸುದೀರ್ಘ ಮತ್ತು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಹತ್ತಾರು ವರ್ಷಗಳ ಕ್ಲಿನಿಕಲ್ ಟ್ರಯಲ್ ನಂತರವೂ ಒಂದು ಯಶಸ್ವಿ ಲಸಿಕೆ ಸೃಷ್ಟಿಯಾಗದೇ ಇರಬಹುದು.

ಲಸಿಕೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ, ಅದನ್ನು ಇಲಿಗಳಂತಹ ಪ್ರಾಣಿ ಮಾದರಿಗಳ ಮೇಲೆ ಪರೀಕ್ಷಿಸಲಾಗುತ್ತದೆ. ಆಯಾ ಔಷಧಿ ಮತ್ತು ಲಸಿಕೆಯ ಪರಿಣಾಮ ಮತ್ತು ನಂಜನ್ನು ಪರೀಕ್ಷಿಸಲು ತಳೀಯವಾಗಿ ರೂಪಾಂತರಗೊಳಿಸಿದ ಇಲಿಗಳು ಇವಾಗಿರುತ್ತವೆ. ಈ ಮಾದರಿ ಇಲಿಗಳನ್ನು ಹೆಚ್ಚಾಗಿ ಅಮೆರಿಕ ಮತ್ತು ಯುರೋಪ್‍ನಿಂದ ತರಿಸಿಕೊಳ್ಳಲಾಗುತ್ತದೆ. ಹಾಗಾಗಿ, ಲಾಕ್‍ಡೌನ್ ಜಾರಿಯಲ್ಲಿದ್ದಾಗ, ವಾಯುಸಂಚಾರ ಇಲ್ಲದ ಸಮಯದಲ್ಲಿ ಭಾರತ್ ಬಯೋಟೆಕ್ ಕಂಪನಿಯು ಈ ವಿಶೇಷ ಇಲಿಗಳನ್ನು ಹೇಗೆ ತರಿಸಿತು ಎಂಬುದು ಯಕ್ಷಪ್ರಶ್ನೆ. ಅಲ್ಲದೆ ಭಾರತ್ ಬಯೋಟೆಕ್ ಕಂಪನಿ ತನ್ನ ಪೂರ್ವಭಾವಿ ಪ್ರಯೋಗ (ಪ್ರಿಕ್ಲಿನಿಕಲ್) ಅಧ್ಯಯನಗಳನ್ನು ಪ್ರಕಟಿಸಿಲ್ಲ.
ಅದರ ನಂತರದ ಹಂತ ಮಾನವರ ಮೇಲೆ ಮಾಡಲಾಗುವ ಪ್ರಯೋಗಗಳು (ಕ್ಲಿನಿಕಲ್ ಟ್ರಯಲ್ಸ್), ಅದನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತದೆ.

ಮೊದಲನೇ ಹಂತದ ಕ್ಲಿನಿಕಲ್ ಟ್ರಯಲ್‍ಗಳಲ್ಲಿ, ಚಿಕಿತ್ಸೆ ಪಡೆಯುತ್ತಿರುವ 25-100 ಜನರ ಮೇಲೆ ಹಾಗೂ ನಿಯಂತ್ರಿತ ಗುಂಪುಗಳ ಮೇಲೆ ಲಸಿಕೆಯನ್ನು ಪ್ರಯೋಗ ಮಾಡಲಾಗುತ್ತದೆ. ಅಧ್ಯಯನಕಾರರು ದೇಹದಲ್ಲಿಯ ರೋಗನಿರೋಧಕ (ಆ್ಯಂಟಿಬಾಡಿ) ಸೃಷ್ಟಿಯಾಗುವುದರ ಅಂಕಿಅಂಶ ಹಾಗೂ ಆ ವ್ಯಕ್ತಿಗಳ ಆರೋಗ್ಯದಲ್ಲಾಗಬಹುದಾದ ಏರುಪೇರುಗಳ ಅಂಕಿಅಂಶಗಳನ್ನು ಸಂಗ್ರಹಿಸುತ್ತಾರೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ಈ ಹಂತದಲ್ಲಿ ಅಳೆಯಲಾಗುತ್ತದೆ. ಈ ಮೊದಲ ಹಂತದಲ್ಲಿ ಲಸಿಕೆ ಉಂಟುಮಾಡುವ ಅಡ್ಡ ಪರಿಣಾಮಗಳು, ನಂಜು (ಟಾಕ್ಸಿಸಿಟಿ) ಆ ಲಸಿಕೆ ಮುಂದಿನ ಹಂತದ ಪ್ರಯೋಗಕ್ಕೆ ಅರ್ಹವೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತವೆ.

ಎರಡನೇ ಹಾಗೂ ಮೂರನೇ ಹಂತದಲ್ಲಿ ಲಸಿಕೆಯನ್ನು ವಿಭಿನ್ನ ವೇಳಾಪಟ್ಟಿಗಳಲ್ಲಿ, ಹೆಚ್ಚು ವೈವಿಧ್ಯ ಜನಸಮೂಹದ ಮೇಲೆ ಪ್ರಯೋಗ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ನೂರಾರು ಜನರ ಮೇಲೆ ಹಾಗೂ ಮೂರನೇ ಹಂತದಲ್ಲಿ ಸುಮಾರು 3000 ಜನರ ಮೇಲೆ ಪ್ರಯೋಗಿಸಲಾಗುತ್ತದೆ. ಲಸಿಕೆಯ ಪರಿಣಾಮಕಾರತ್ವ ಮತ್ತು ಅಡ್ಡಪರಿಣಾಮಗಳನ್ನು ಪರೀಕ್ಷಿಸಲು ಆ ಲಸಿಕೆಯನ್ನು ಪಡೆದ ಸ್ವಯಂಸೇವಕರನ್ನು ಹಲವಾರು ತಿಂಗಳ ಮಟ್ಟಿಗೆ ಪರೀಕ್ಷಿಸಲಾಗುತ್ತದೆ.

ಈ ಮೂರು ಹಂತಗಳು ಮಹತ್ವದ ಫಲಿತಾಂಶಗಳನ್ನು ನೀಡಿದ ಬಳಿಕ, ಆ ಲಸಿಕೆಯನ್ನು ಅನುಮೋದನೆಗಾಗಿ ಹಾಗು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಕಳುಹಿಸಲಾಗುತ್ತದೆ.

ಸಾಮಾನ್ಯ ಸಂದರ್ಭದಲ್ಲಿ ಈ ಎಲ್ಲಾ ಹಂತಗಳು ತುರ್ತು ಸಂದರ್ಭ ಅಲ್ಲದಲ್ಲಿ, ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಲು ಸರಾಸರಿ 5 ರಿಂದ 10 ವರ್ಷ ಹಿಡಿಯುತ್ತದೆ.

ಈ ನಿಟ್ಟಿನಲ್ಲಿ, ಒಂದೂವರೆ ತಿಂಗಳ ಕ್ಲಿನಿಕಲ್ ಟ್ರಯಲ್‍ನ ಐಸಿಎಮ್‍ಆರ್ ಘೋಷಣೆಯು ಕೇವಲ ಹಾಸ್ಯಾಸ್ಪದವಷ್ಟೇ ಅಲ್ಲ, ಅವೈಜ್ಞಾನಿಕವಾಗಿಯೂ ಕಂಡುಬರುತ್ತದೆ. ಹೌದು ನಾವೀಗ ತುರ್ತಿನಲ್ಲಿದ್ದೇವೆ ಹಾಗೂ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಿದೆ ಆದರೆ ಅದರರ್ಥ ಲಸಿಕೆ ಪರೀಕ್ಷೆಯ ನಿರ್ಣಾಯಕ ಹಂತಗಳನ್ನು ಬಿಟ್ಟುಬಿಡುವುದಲ್ಲ. ಕಠಿಣ ಪರೀಕ್ಷೆ ಮತ್ತು ಲಸಿಕೆ ಉಂಟುಮಾಡಬಲ್ಲ ಅಡ್ಡಪರಿಣಾಮಗಳ ಬಗ್ಗೆ ಸ್ಪಷ್ಟ ಮಾಹಿತಿ ನಿರ್ದಿಷ್ಟವಾಗಿ ಅಗತ್ಯ.

ಲಸಿಕೆಗಳನ್ನು ಸಾಮೂಹಿಕವಾಗಿ ನೀಡಿದ ನಂತರವೂ ಅದನ್ನು ವಾಪಸ್ ಪಡೆದ ನಿದರ್ಶನಗಳೂ ಇವೆ. 2016ರಲ್ಲಿ ಡೆಂಗ್ಯೂ ಲಸಿಕೆ ಎಂದು ನೀಡಿದ ಪರಿಣಾಮವಾಗಿ 10 ಮಕ್ಕಳ ಸಾವಿಗೆ ಕಾರಣವಾಗಿದ್ದ ಸನೋಫಿ ಎಂಬ ಫ್ರೆಂಚ್ ಕಂಪನಿಯ ವಿರುದ್ಧ ಫಿಲಿಫೀನ್ಸ್ ದೇಶವು ಕ್ರಿಮಿನಲ್ ದಾವೆ ಹೂಡಿತ್ತು. ಆ ಕಂಪನಿ ಲಸಿಕೆಯ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಆಪಾದಿಸಿತ್ತು. ಇಂತಹ ಸನ್ನಿವೇಶದಲ್ಲಿ ಆಗಸ್ಟ್ 15 ರಂದು ಬಿಡುಗಡೆ ಮಾಡುತ್ತೇವೆ ಎಂಬ ಘೋಷಣೆಯ ಹಿಂದೆ ಕಾಣಿಸುತ್ತಿರುವ ಅವೈಜ್ಞಾನಿಕತೆ ಮತ್ತು ಉದ್ಧಟತನವು, ಆ ಉನ್ನತ ಸಂಸ್ಥೆಯ ಉದ್ದೇಶಗಳನ್ನೇ ಪ್ರಶ್ನಿಸುವಂತೆ ಮಾಡಿದೆ.

ಈ ಸಾಂಕ್ರಾಮಿಕವು, ದೇಶದ ಹದಗೆಟ್ಟ ಆರೋಗ್ಯದ ಮೂಲಸೌಕರ್ಯಗಳನ್ನಷ್ಟೇ ಬಯಲು ಮಾಡಿಲ್ಲ, ಆದರೆ ಅದರೊಂದಿಗೆ ದೇಶದ ಉನ್ನತ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರಿಗೆ ವೈಜ್ಞಾನಿಕ ಮನೋಭಾವ ಇಲ್ಲದಿರುವುದು ಹಾಗೂ ರಾಜಕಾರಣಿಗಳಿಗೆ ಸರಿಯಾದ ಮಾಹಿತಿ ನೀಡಿ ಸಮಸ್ಯೆಗಳನ್ನು ವಿವರಿಸುವ ಧೈರ್ಯ ಇಲ್ಲದಿರುವುದನ್ನೂ ಜಗಜ್ಜಾಹೀರಗೊಳಿಸಿದೆ. ಅದರೊಂದಿಗೆ, ಪ್ರತಿಯೊಬ್ಬ ನಾಗರಿಕನಿಗೆ ಪ್ರಾಥಮಿಕ ಆರೋಗ್ಯ ಸೇವೆಯನ್ನು ಲಭ್ಯಗೊಳಿಸದಿದ್ದರೆ, ಎಷ್ಟೇ ಔಷಧಿಗಳು, ಲಸಿಕೆಗಳು ಇದ್ದರೂ ಅದರಿಂದ ಹೆಚ್ಚಿನ ಲಾಭ ಇಲ್ಲ ಎಂಬುದೂ ಗೊತ್ತಾಗುತ್ತಿದೆ.

ವ್ಯಾಕ್ಸಿನ್ ಎಂಬ ಪದ, ಲ್ಯಾಟಿನ್ ಪದ vacca, ದಿಂದ ಬಂದಿದೆ. ಅದರರ್ಥ ಆಕಳು. ಎಡ್ವರ್ಡ್ ಜೆನರ್ ಅವರು ಸ್ಮಾಲ್‍ಪಾಕ್ಸ್ ರೋಗಿಗೆ ಕಾವ್‍ಪಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿ ನೀಡಿದ ಕೆಲಸಕ್ಕೆ ಗೌರವಾರ್ಥವಾಗಿ ಇದು ಜಾರಿಗೆ ಬಂತು.

1798 ರಲ್ಲಿ ವೈದ್ಯ ಎಡ್ವರ್ಡ್ ಜೆನರ್ ಅವರು, ಗಂಭೀರವಲ್ಲದ ಕೌಪಾಕ್ಸ್ ರೋಗಕ್ಕೆ ತುತ್ತಾದ ಗೌಳಗಿತ್ತಿಯರು ಸಿಡುಬು(ಸ್ಮಾಲ್‍ಪಾಕ್ಸ್) ರೋಗಕ್ಕೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಗಮನಿಸಿದರು. ತಮ್ಮ ಊಹೆಯನ್ನು ದೃಢೀಕರಿಸಲು 8 ವರ್ಷದ ಒಬ್ಬ ಬಾಲಕನಿಗೆ ಕೌಪಾಕ್ಸ್ ಪುಸ್ಟೂಲ್‍ನ ದ್ರವವನ್ನು ಇನಾಕ್ಯಲೇಟ್ ಮಾಡಿದರು. ಅದಾದನಂತರ ಉದ್ದೇಶಪೂರ್ವಕವಾಗಿ ಆ ಬಾಲಕನಿಗೆ ಸ್ಮಾಲ್‍ಪಾಕ್ಸ್ ಸೋಂಕು ತಗಲಿಸಿದರು. ಈ ಪ್ರಯೋಗ ಸ್ಮಾಲ್‍ಪಾಕ್ಸ್ ಚಿಕಿತ್ಸೆಯ ಇತಿಹಾಸದಲ್ಲಿ ಹಾಗೂ ಲಸಿಕೆ ಅಭಿವೃದ್ಧಿಪಡಿಸುವ ಸಂಶೋಧನೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿ ಪರಿಣಮಿಸಿತು. ಆದರೆ ಇಂದಿನ ವೈದ್ಯಕೀಯ ನೈತಿಕತೆ ಇಂತಹ ಪ್ರಯೋಗಗಳಿಗೆ ಅವಕಾಶ ಕೊಡುವುದಿಲ್ಲ.

ಡಾ.ಸ್ವಾತಿ ಶುಕ್ಲಾ, ಬೆಂಗಳೂರಿನಲ್ಲಿರುವ ವಿಜ್ಞಾನಿಗಳು, ರೋಗನಿರೋಧಕ ಶಾಸ್ತ್ರಜ್ಞರು.

ಅನುವಾದ; ರಾಜಶೇಖರ್ ಅಕ್ಕಿ


ಇದನ್ನು ಓದಿ: ಲಸಿಕೆ, ಮೂಲಸೌಕರ್ಯ ಇಲ್ಲದಿದ್ದರೆ 2021 ವೇಳೆಗೆ ದಿನಕ್ಕೆ 2.87 ಲಕ್ಷ ಕೊರೊನಾ ಪ್ರಕರಣ ಸಾಧ್ಯತೆ: ಅಧ್ಯಯನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...