ಚೀನಾ-ಭಾರತದ ಗಡಿ ಉದ್ವಿಗ್ನತೆ ಹೆಚ್ಚಾದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಭಾರತವನ್ನು ಬೆಂಬಲಿಸುತ್ತಾರೆ ಎಂಬ ಖಾತರಿಯಿಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ.
ಚೀನಾ ತನ್ನ ಗಡಿಯ ಸುತ್ತಲೂ ಯುದ್ಧದ ಹಪಾಹಪಿಯಲ್ಲಿ ವರ್ತಿಸುತ್ತಿದೆ, ಖಂಡಿತವಾಗಿಯೂ ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ, ಜಪಾನ್, ಭಾರತ ಮತ್ತು ಇತರರೊಂದಿಗಿನ ಸಂಬಂಧಗಳು ಕ್ಷೀಣಿಸಿವೆ ಎಂದು ಬೋಲ್ಟನ್ WION TV ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಚೀನಾ ವಿರುದ್ಧ ಭಾರತದ ಪರವಾಗಿ ಟ್ರಂಪ್ ಎಷ್ಟು ದೂರ ಬರಲು ಸಿದ್ಧರಿದ್ದಾರೆ? ಅವರು ಯಾವ ಮಾರ್ಗದಲ್ಲಿ ಹೋಗುತ್ತಾರೆಂದು ನನಗೆ ಮಾತ್ರವಲ್ಲ ಅವರಿಗೂ ತಿಳಿದಿಲ್ಲ. ಏಕೆಂದರೆ ಅವರು ಚೀನಾದೊಂದಿಗಿನ ವ್ಯಾಪಾರದ ಮೂಲಕ ಭೂ ಕಾರ್ಯತಂತ್ರದ ಸಂಬಂಧವನ್ನು ಎದುರು ನೋಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಜಾನ್ ಬೋಲ್ಟನ್ ಹೇಳಿದ್ದಾರೆ.
“ನವೆಂಬರ್ ಚುನಾವಣೆಯ ನಂತರ ಟ್ರಂಪ್ ಏನು ಮಾಡುತ್ತಾರೆಂದು ನನಗೆ ತಿಳಿದಿಲ್ಲ… ಅವರು ಚೀನಾದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಾರೆ. ಭಾರತ-ಚೀನಾ ನಡುವೆ ನಿರ್ಣಾಯಕ ವಿಷಯಗಳು ನಡೆಯುತ್ತಿರಬೇಕಾದರೆ, ಅವರು ಎಲ್ಲಿರುತ್ತಾರೆ ಎಂದು ನನಗೆ ಖಚಿತವಿಲ್ಲ” ಎಂದು ಅವರು ಹೇಳಿದ್ದಾರೆ.
ಭಾರತ-ಚೀನಾ ನಡುವೆ ನಡೆಯುತ್ತಿರುವ ದಶಕಗಳ ಘರ್ಷಣೆಗಳ ಇತಿಹಾಸದ ಬಗ್ಗೆ ಟ್ರಂಪ್‌ಗೆ ಏನೂ ತಿಳಿದಿಲ್ಲ ಎಂದು ಬೋಲ್ಟನ್ ಹೇಳಿದ್ದಾರೆ.
ಟ್ರಂಪ್‌ಗೆ ಇದರ ಬಗ್ಗೆ ಅಲ್ಪ ಮಾಹಿತಿ ಇರಬಹುದಾದರು ಇತಿಹಾಸದ ಬಗ್ಗೆ ನಿಜವಾಗಿಯೂ ಅವರಿಗೆ ತಿಳಿದಿಲ್ಲ ಎಂದು ಟ್ರಂಪ್ ಆಡಳಿತದಲ್ಲಿ ಏಪ್ರಿಲ್ 2018 ರಿಂದ ಸೆಪ್ಟೆಂಬರ್ 2019 ರವರೆಗೆ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಗಿದ್ದ ಬೋಲ್ಟನ್ ಹೇಳಿದ್ದಾರೆ.
ಕಳೆದ ಎಂಟು ವಾರಗಳಿಂದ ಪೂರ್ವ ಲಡಾಖ್‌ನ ಅನೇಕ ಸ್ಥಳಗಳಲ್ಲಿ ಭಾರತ-ಚೀನಾದ ಸೈನ್ಯ ಮುಖಾಮುಖಯಾಗಿದ್ದವು. ಅಲ್ಲದೆ ಗಾಲ್ವನ್‌ನಲ್ಲಿ ನಡೆದ ಘರ್ಷಣೆಯಿಂದ 20 ಭಾರತೀಯ ಸೇನಾ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದರು.
ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಉಭಯ ದೇಶ ಕಳೆದ ಕೆಲವು ವಾರಗಳಲ್ಲಿ ಹಲವಾರು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿದೆ.
ಓದಿ: ಟ್ರಂಪ್ ಟವರ್ ಮುಂದೆ ’ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಎಂದು ಬರೆದ ಚಳವಳಿಗಾರರು!


