ಕುಖ್ಯಾತ ದರೋಡೆಕೋರ ವಿಕಾಸ್ ದುಬೆ ಅವರನ್ನು ಕಳೆದ ವಾರ ವಿವಾದಾತ್ಮಕವಾಗಿ ಹತ್ಯೆಗೈದಿರುವ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿದ ವಿಶೇಷ ತನಿಖಾ ತಂಡದ (SIT) ಸದಸ್ಯರೊಬ್ಬರು 13 ವರ್ಷಗಳ ಹಿಂದೆ ನಕಲಿ ಎನ್‌ಕೌಂಟರ್‌ನಲ್ಲಿ ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಂದ ಆರೋಪ ಎದುರಿಸುತ್ತಿದ್ದಾರೆ.
DIG ಜೆ. ರವೀಂದರ್ ಗೌಡ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ, ಹೆಚ್ಚುವರಿ ಪೊಲೀಸ್ DG ಹರಿರಾಮ್ ಶರ್ಮಾ ಈ ಮೂವರು SITಯ ಸದಸ್ಯರಾಗಿದ್ದಾರೆ.
2007 ರ ಎನ್‌ಕೌಂಟರ್‌ನಲ್ಲಿ ಬರೇಲಿಯಲ್ಲಿ ಯುವ ಔಷಧ ವ್ಯಾಪಾರಿ ಕೊಲ್ಲಲ್ಪಟ್ಟಿದ್ದರು. ಇದರ ಸಿಬಿಐ ತನಿಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ನಂತರ ಸಿಬಿಐ ಗೌಡ್ ಅವರ ಮೇಲೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಆದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರವು ಕಾನೂನು ಕ್ರಮ ಜರುಗಿಸಲು ಅನುಮತಿಯನ್ನು ತಡೆಹಿಡಿದಿತ್ತು. ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರವು ಅನುಮತಿ ನೀಡಿಲ್ಲ.
“ಇಂತಹ ಅಧಿಕಾರಿಯನ್ನು ಮೂರು ಸದಸ್ಯರ ಉನ್ನತ ಮಟ್ಟದ SITಯಲ್ಲಿ ಏಕೆ ಸೇರಿಸಬೇಕು. ನಕಲಿ ಎನ್ಕೌಂಟರ್ ನಿಂದ ಕಳಂಕಿತರಾದವರನ್ನು, ನಕಲಿ ಎನ್ಕೌಂಟರ್ ಎಂದು ಆರೋಪಿಸಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಮತ್ತೊಂದು ಪ್ರಕರಣದಲ್ಲಿ ತನಿಖೆ ಮಾಡಲು ಸೇರಿಸಿದ್ದಾರೆ ಎಂಬುದು ನಿಜವಾಗಿಯೂ ಆಘಾತಕಾರಿ” ಎಂದು ಹೈಕೋರ್ಟ್‌ನ ಹಿರಿಯ ವಕೀಲ ಐ.ಬಿ. ಸಿಂಗ್ ಹೇಳಿದ್ದಾರೆ.
ಜುಲೈ 31 ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ SIT ಗೆ ಕೋರಲಾಗಿದೆ. ಆದರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ, ಹೆಚ್ಚುವರಿ ಪೊಲೀಸ್ DG ಹರಿರಾಮ್ ಶರ್ಮಾ ಅವರೊಂದಿಗೆ ಈ ಮೇಲಿನ ಆರೋಪ ಹೊತ್ತಿರುವ ಗೌಡ್ ಸೇರ್ಪಡೆ ಅನುಮಾನಗಳನ್ನು ಹುಟ್ಟುಹಾಕಿದೆ.
2005 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಗೌಡ್, ಜೂನ್ 30, 2007 ರಂದು ಬರೇಲಿಯಲ್ಲಿ ಯುವ ಔಷಧ ವ್ಯಾಪಾರಿ ಮುಕುಲ್ ಗುಪ್ತಾ ಅವರ ನಕಲಿ ಎನ್‌ಕೌಂಟರ್‌ನಲ್ಲಿನ ಪಾತ್ರಕ್ಕಾಗಿ ಅಪಖ್ಯಾತಿಗೆ ಗುರಿಯಾಗಿದ್ದರು. ಈ ಅಧಿಕಾರಿ ಕೇವಲ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದರು.
ಗುಪ್ತಾ ಅವರ ತಂದೆ ಬ್ರಿಜೇಂದ್ರ ಗುಪ್ತಾ ತಮ್ಮ ಮುಗ್ಧ ಮಗನಿಗೆ ನಡೆದ ಅನ್ಯಾಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದರು. ಸಿಬಿಐ ತನಿಖೆಗಾಗಿ ಅಲಹಾಬಾದ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅವರ ಮನವಿಯನ್ನು ಕೋರ್ಟ್ ಅಂಗೀಕರಿಸಿತು. ಇದರಲ್ಲಿ ಗೌಡ್ ಸೇರಿದಂತೆ 10 ಪೊಲೀಸರನ್ನು ಆಗಸ್ಟ್ 26, 2014 ರಂದು ಚಾರ್ಜ್ ಶೀಟ್ ಮಾಡಲಾಗಿತ್ತು. ಆಘಾತಕಾರಿ ಸಂಗತಿಯೆಂದರೆ, ಗುಪ್ತಾ ಅವರ ಹೆತ್ತವರನ್ನು ಒಂದು ವರ್ಷದ ನಂತರ, ಏಪ್ರಿಲ್ 2015 ರಲ್ಲಿ ಕೊಲ್ಲಲಾಯಿತು. ಈ ಕೊಲೆಗಳ ಬಗ್ಗೆಯೂ ತನಿಖೆ ಪೂರ್ಣಗೊಂಡಿಲ್ಲ.
ಇಷ್ಟೆಲ್ಲಾ ಆರೋಪಗಳನ್ನು ಎದುರಿಸುತ್ತಿರುವ ಪೋಲಿಸರನ್ನು, ತನಿಖೆ ನಡೆಸುವ ತಂಡದಲ್ಲಿ ಸೇರಿಸಿರುವುದರ ಕುರಿತು ಸರ್ಕಾರ ಮತ್ತು ಅಧಿಕಾರಿಗಳು ಮೌನ ವಹಿಸಿದ್ದಾರೆ.
ಇದನ್ನೂ ಓದಿ: ವಿಕಾಸ್ ದುಬೆ ಹತ್ಯೆ ಅನುಮಾನಾಸ್ಪದ: ಸಾರ್ವಜನಿಕರಿಂದ 5 ಪ್ರಶ್ನೆಗಳು


