ತುಮಕೂರಿನ ಎಸ್.ಎಸ್.ಪುರಂ ಮುಖ್ಯರಸ್ತೆಗೆ ಹೊಂದಿಕೊಂಡ ಎಂ.ಸಿ.ಕಾಲೋನಿಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಂಡು ವಾರ ಕಳೆಯುವುದರೊಳಗೆ ಛೇಂಬರ್ ಗಳು ಹಾಳಾಗಿವೆ. ಓಪನ್ ಚರಂಡಿ ಮತ್ತು ಛೇಂಬರ್ ಗಳನ್ನು ಕ್ಯೂರಿಂಗ್ ಮಾಡುವ ಮೊದಲೇ ಅವುಗಳ ಮೇಲೆ ರೋಡ್ ರೋಲರ್ ಹರಿಸಿದ್ದು ಛೇಂಬರ್ ಗಳ ಮೇಲ್ಭಾಗ ಪುಡಿಪುಡಿಯಾಗಿದೆ.
25ನೇ ವಾರ್ಡಿಗೆ ಸೇರುವ ಎಂ.ಸಿ. ಕಾಲೋನಿಯ ಮೂರು ರಸ್ತೆಗಳಲ್ಲಿ ಒಳಚರಂಡಿ ಮತ್ತು ಓಪನ್ ಚರಂಡಿ ನಿರ್ಮಾಣ ಮಾಡಿದೆ. ಕಳೆದ ಒಂದು ತಿಂಗಳಿಂದ ಈ ಮೂರು ರಸ್ತೆಗಳನ್ನು ಅಗೆದು ಒಳಚರಂಡಿ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಹದಿನೈದು ದಿನ ಕಳೆಯುವ ಮೊದಲೇ ಒಳಚರಂಡಿಯ ಎಲ್ಲಾ ಛೇಂಬರ್ಗಳನ್ನು ಹಾಳುಮಾಡಲಾಗಿದೆ.
ಇಲ್ಲಿನ ರಸ್ತೆಗಳಲ್ಲಿ ಯದ್ವಾತದ್ವಾ ಬಿದ್ದಿದ್ದ ಮಣ್ಣನ್ನು ರೋಡ್ ರೋಲರ್ ಮೂಲಕ ಸಮಗೊಳಿಸುವ ಕೆಲಸ ಮಾಡಲಾಗಿದೆ. ಹಾಗಾಗಿ ರಸ್ತೆಯ ಮಧ್ಯ ಭಾಗದಲ್ಲಿದ್ದ ಎಲ್ಲಾ ಛೇಂಬರ್‌ಗಳು ಕ್ಯೂರಿಂಗ್ ಮಾಡುವ ಮೊದಲೇ ಹಾಳುಗೆಡವಲಾಗಿದೆ.

ಕಾಮಗಾರಿ ಪೂರ್ಣಗೊಂಡ ಮೇಲೆ ಅದನ್ನು ಕ್ಯೂರಿಂಗ್ ಮಾಡಬೇಕು. 15 ದಿನಗಳ ಕಾಲ ಛೇಂಬರ್‌ಗಳಿಗೆ ನೀರು ಹಾಕಿ ಸೀಮೆಂಟ್ ಗಟ್ಟಿಯಾಗುವಂತೆ ನೋಡಿಕೊಳ್ಳಬೇಕು. ಕ್ಯೂರಿಂಗ್ ಆದ ಮೇಲೆಯೇ ರಸ್ತೆ ಸಮಗೊಳಿಸುವ ಪ್ರಯತ್ನಕ್ಕೆ ಮುಂದಾಗಬೇಕಾಗಿತ್ತು. ಆದರೆ ಗುತ್ತಿಗೆದಾರರು ಆತುರಾತುರವಾಗಿ ಕೆಲಸ ಮಾಡಿರುವುದೇ ಛೇಂಬರ್ ಗಳು ಒಡೆದುಹೋಗಲು ಕಾರಣ ಎಂಬ ದೂರುಗಳು ಕೇಳಿಬಂದಿವೆ.
ಒಳಚರಂಡಿಗೆ ಛೇಂಬರ್ ನಿರ್ಮಿಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ. ಆದರೆ ಕಾಮಗಾರಿ ಪೂರ್ಣಗೊಳಿಸುವ ಮೊದಲೇ ಛೇಂಬರ್ ಗಳನ್ನು ನಾಶ ಮಾಡಿದ್ದಾರೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ ಆಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ರೋಡ್ ರೋಲಾರ್ ಹರಿಸಿರುವುದರಿಂದ ಒಳಚರಂಡಿಯ ಎಲ್ಲಾ ಛೇಂಬರ್‌ಗಳು ನಜ್ಜುಗುಜ್ಜಾಗಿವೆ ಎಂದು ಜನರು ದೂರಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಛೇಂಬರ್‌ಗಳು ಹಾಳಾಗಿವೆ. ಕಾಮಗಾರಿಯ ನಿರ್ವಹಣೆಯ ಹೊಣೆ ಹೊತ್ತಿರುವ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳು ಸ್ಥಳದಲ್ಲಿದ್ದು ರೋಡ್ ರೋಲರ್ ಚಾಲಕನಿಗೆ ಸೂಚನೆಗಳನ್ನು ಕೊಡಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೇ ಇರುವುದರಿಂದ ಲಕ್ಷಾಂತರ ರೂಪಾಯಿಗಳನ್ನು ದುಂದು ವೆಚ್ಚ ಮಾಡಿದಂತಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಓದಿ: ಸಿಬ್ಬಂದಿಗೆ ಕೊರೊನಾ: ತುಮಕೂರು ಎಸ್ಪಿ ಕಚೇರಿ ಸೀಲ್ ಡೌನ್


