ಪಶ್ಚಿಮ ಬಂಗಾಳ ರಾಜ್ಯವನ್ನು ಸ್ಥಳೀಯರು ಮುನ್ನಡೆಸಬೇಕೇ ಹೊರತು ಹೊರಗಿನವರಲ್ಲ ಅಥವಾ ಗುಜರಾಜ್ ಜನರಲ್ಲ ಎಂದು ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪಕ್ಷದ ಹುತಾತ್ಮರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಕಿತ್ತೊಕೊಳ್ಳುತ್ತಿದೆ. ಬಿಜೆಪಿ ರಾಜ್ಯಕ್ಕೆ ಅನ್ಯಾಯ ಬಗೆದಿದೆ. ಇದಕ್ಕೆ ಬಂಗಾಳದ ಜನ ಸೂಕ್ತ ಸಮಯದಲ್ಲಿ ತಿರುಗೇಟು ನೀಡಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ಬಿಜೆಪಿ ಮಾಡಿರುವ ಅವಮಾನಕ್ಕೆ ನಾವು ಸೇಡು ತೀರಿಸಿಕೊಳ್ಳುತ್ತೇವೆ. ಹೊರಗಿನವರು ಬಂಗಾಳವನ್ನು ಮುನ್ನಡೆಸಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದರು.
ರಾಜಸ್ಥಾನದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಯತ್ನಿಸುತ್ತಿದೆ. ಕೇಂದ್ರದ ಸಂಸ್ಥೆಗಳನ್ನು ಮತ್ತು ಹಣ ಬಲವನ್ನು ಬಳಸಿಕೊಂಡು ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಲದಲ್ಲೂ ಜನರಿಂದ ಆಯ್ಕೆಯಾದ ಸರ್ಕಾರವನ್ನು ಕೇಂದ್ರ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಇದಕ್ಕೆ ಕೇಂದ್ರ ಸಂಸ್ಥೆಗಳನ್ನು ಮತ್ತು ಹಣ ಬಲವನ್ನು ಬಳಸುತ್ತಿದೆ. ಬಿಜೆಪಿಯಂತ ವಿನಾಶಕಾರಿ ಪಕ್ಷ ದೇಶದಲ್ಲಿ ಎಂದೂ ನೋಡಿಲ್ಲ ಎಂದು ಟೀಕಿಸಿದರು.
ದೇಶದ ಜನರು ಮತ್ತು ಕೊರೊನ ವಾರಿಯರ್‌ಗಳು ಕೊರೊನ ಸೋಂಕು ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಆದರೆ ಬಿಜೆಪಿ ರಾಜಸ್ಥಾನ ಮತ್ತು ಪಶ್ಚಿಮಬಂಗಾಳ ಸರ್ಕಾರ ನಂತರ ಮಧ್ಯಪ್ರದೇಶ ಸರ್ಕಾರಗಳನ್ನು ಅಸ್ಥಿರಗೊಳಿಸುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
ಗುಜರಾತ್ ಆಡಳಿತವನ್ನು ಎಲ್ಲಾ ರಾಜ್ಯಗಳಲ್ಲೂ ಮಾಡಬಾರದೇಕೆ? ಫೆಡರಲ್ ರಚನೆಯ ಅವಶ್ಯಕತೆ ಏನು? ಎಂದು ಪ್ರಶ್ನಿಸಿದ ಅವರು ಒಂದು ದೇಶ ಒಂದು ಪಕ್ಷ ವ್ಯವಸ್ಥೆ ರಚನೆ ಮಾಡಲು ಬಿಜೆಪಿ ಹೊರಟಿದೆ ಎಂದು ಟೀಕಿಸಿದರು.
ಓದಿ: ನಾವು 2021ರ ಜೂನ್ ವರೆಗೂ ಉಚಿತ ಪಡಿತರ ನೀಡುತ್ತೇವೆ: ಮೋದಿಗೆ ಟಾಂಗ್ ಕೊಟ್ಟ ಮಮತಾ!


