Homeಮುಖಪುಟಊರ್ಜಿತ್ ಪಟೇಲ್ ರಾಜೀನಾಮೆ ಕೊನೆಯಿಲ್ಲದ ಸರಮಾಲೆಯ ಮತ್ತೊಂದು ದುರಂತ

ಊರ್ಜಿತ್ ಪಟೇಲ್ ರಾಜೀನಾಮೆ ಕೊನೆಯಿಲ್ಲದ ಸರಮಾಲೆಯ ಮತ್ತೊಂದು ದುರಂತ

- Advertisement -
- Advertisement -

 ಬಿ. ಶ್ರೀಪಾದ ಭಟ್ |

ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜಿನಾಮೆ ಸಲ್ಲಿಸಿದ್ದಾರೆ. ಬಹುದಿನಗಳಿಂದ ಚರ್ಚೆಯಲ್ಲಿದ್ದ ಈ ಪ್ರಹಸನ ಕೊನೆಗೂ ಅಂತ್ಯ ಕಂಡಿದೆ. ಈ ರಾಜಿನಾಮೆ ಎನ್ನುವ ಕಣ್ಣಾಮುಚ್ಚಾಲೆ ಆಟಕ್ಕೆ ಕೇವಲ ಒಂದು ಆಡಳಿತಾತ್ಮಕ ಸಮಸ್ಯೆ, ಹಣಕಾಸಿನ ನಿರ್ವಹಣೆಯ ತೊಡಕು ಮಾತ್ರ ಕಾರಣವಲ್ಲ. ಅದನ್ನು ಮೀರಿದ ಅಥವ ಅದನ್ನು ಒಳಗೊಂಡಂತೆ ಒಂದು ನಿರಂಕುಶ ಪ್ರಬುತ್ವದ ದೌರ್ಜನ್ಯ, ಹಸ್ತಕ್ಷೇಪ ಮತ್ತು ದುರಾಡಳಿತದಂತಹ ಬಹುಮುಖ್ಯ ಕಾರಣಗಳಿವೆ. ಸೆಪ್ಟೆಂಬರ್ 2019ರಲ್ಲಿ ಊರ್ಜಿತ್ ಪಟೇಲ್ ನಿವೃತ್ತಿ ಹೊಂದುತ್ತಿದ್ದರು. ಆದರೆ ಒಂಬತ್ತು ತಿಂಗಳ ಮುಂಚೆ ನಿರ್ಗಮಿಸಿದ್ದಾರೆ. ಇವರ ಈ ರಾಜಿನಾಮೆಗೆ ಅನೇಕ ಹಿನ್ನೆಲೆಗಳಿವೆ. ಮೋದಿ ಸರಕಾರದ ಸರ್ವಾದಿಕಾರಿ ವರ್ತನೆ ಮತ್ತು ಒತ್ತಡ ತಂತ್ರಗಳು ಮುಖ್ಯ ಕಾರಣಗಳಲ್ಲೊಂದು. ಜೊತೆಗೆ ಪಟೇಲ್‍ರ ಸ್ವಯಂಕೃತ ಅಪರಾದಗಳು ಪರೋಕ್ಷವಾಗಿ ಕಾರಣಗಳಾದರೆ ಅವರ ಕೆಳಗಿನ ಶ್ರೇಣಿಯ ಅದಿಕಾರಿಯ ದಿಟ್ಟ ಮಾತುಗಳು ನೇರವಾದ ಕಾರಣವಾಗಿದೆ. ಜೊತೆಗೆ ಮೋದಿ-ಆರೆಸ್ಸಸ್ ಸರಕಾರ ಒಂದು ಮುಳುಗುತ್ತಿರುವ ಹಡುಗು ಎನ್ನುವ ವಾಸ್ತವವೂ ಈ ರೀತಿಯ ಜೀವರಕ್ಷಣೆಯ ನೆಗೆತಕ್ಕೆ ಕಾರಣ

ಹಿನ್ನೆಲೆಗಳು
ಮೊದಲನೆಯದಾಗಿ ಆಗಸ್ಟ್ 6, 2018ರಂದು ಮೋದಿ ಸರಕಾರವು ಬಲಪಂಥೀಯ ಚಿಂತಕ, ಆರೆಸ್ಸಸ್‍ನ ಸಮರ್ಥಕ ಮಾಜಿ ಸಿಎ ಎಸ್. ಗುರುಮೂರ್ತಿಯವರನ್ನು ಆರ್‍ಬಿಐನ ಕೇಂದ್ರ ಮಂಡಳಿಗೆ ಅರೆಕಾಲಿಕ, ಲಾಬರಹಿತ ನಿರ್ದೇಶಕನಾಗಿ ನೇವiಕಾತಿ ಮಾಡಿತು. ಇದು ಮುಂದಿನ ದಿನಗಳಲ್ಲಿ ಆರ್‍ಬಿಐನ ಸ್ವಾಯತ್ತತೆಯನ್ನ ಆರೆಸ್ಸಸ್‍ನ ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇಟ್ಟ ಆರಂಬದ ಹೆಜ್ಜೆಯಾಗಿತ್ತು. ನೇಮಕಗೊಂಡ ದಿನದಿಂದಲೆ ಪೂರ್ವನಿರ್ದಾರದಂತೆ ಈ ಗುರುಮೂರ್ತಿ ಆರ್‍ಬಿಐ ಆಡಳಿತ ಮಂಡಳಿ ವಿರುದ್ದ ಹೇಳಿಕೆ ಕೊಡತೊಡಗಿದರು.
ಎರಡನೆಯದಾಗಿ ಆರ್‍ಬಿಐ ತನ್ನ 11 ಸಾರ್ವಜನಿಕ ಬ್ಯಾಂಕುಗಳ ಮೇಲೆ ‘ಸಕಾಲಿಕ ತಿದ್ದುಪಡಿ ಕ್ರಮ’ (prompt corrective action (PCA)ಯ ಮೂಲಕ ಹೊಂದಿದ್ದ ಹಿಡಿತವನ್ನು ಸಡಿಲಿಸಬೇಕೆಂದು ಕೇಂದ್ರ ಸರಕಾರವು ಒತ್ತಾಯಿಸುತ್ತಿತ್ತು. ಇದು ಅಬಿವೃದ್ದಿಯನ್ನು ಕುಂಠಿತಗೊಳಿಸುತ್ತದೆ ಎಂದು ಅಸಮದಾನ ವ್ಯಕ್ತಪಡಿಸುತ್ತಿತ್ತು. ಸಾಲದ ಮೇಲಿನ ಬಡ್ಡಿ ದರವನ್ನು ಆರ್‍ಬಿಐ ಕಡಿತಗೊಳಿಸಲು ನಿರಾಕರಿಸಿದಾಗ ಕೇಂದ್ರ ಸರಕಾರವು ಇದನ್ನು ಹದ್ದು ಮೀರಿದ ವರ್ತನೆ ಎಂದು ಟೀಕಿಸಿತು. ಕಿರು ಸಾಲಗಳು, ಅತಿ ಸಣ್ಣ, ಸಣ್ಣ, ಮದ್ಯಮ ಉದ್ಯಮಗಳಿಗೆ ಸಾಲ ನೀಡುವ ವಿಶಯದಲ್ಲಿ ಆರ್‍ಬಿಐ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿತ್ತು. ಈ ಸಾಲಗಳ ಮೂಲಕ ರಾಜಕೀಯ ಲಾಬ ಪಡೆಯಲು ಉದ್ದೇಶಿಸಿದ್ದ ಮೋದಿ ಸರಕಾರಕ್ಕೆ ಇದು ದೊಡ್ಡ ತಡೆಗೋಡೆಯಾಗಿತ್ತು.
ಮೂರನೆಯದಾಗಿ ಕೆಲ ತಿಂಗಳುಗಳ ಹಿಂದೆ ಕೇಂದ್ರ ಸರಕಾರದ ಹಣಕಾಸು ಇಲಾಖೆಯು 1934ರ ಆರ್‍ಬಿಐನ ಸೆಕ್ಷನ್ 7ಕಾಯಿದೆಯ ಕತ್ತಿಯನ್ನು ಅದರ ವಿರುದ್ದವೆ ಜಳಪಿಸತೊಡಗಿತು. ಈ ಕಾನೂನನ್ನು ಬಳಸಿಕೊಂಡು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಆರ್‍ಬಿಐನ ಆಡಳಿತದಲ್ಲಿ ಕೇಂದ್ರ ಸರಕಾರವು ಮದ್ಯಪ್ರವೇಶ ಮಾಡಲು ಬಯಸುತ್ತದೆ ಮತ್ತು ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತೇವೆ ಹಾಗೂ ನಮ್ಮೊಂದಿಗೆ ಚರ್ಚಿಸಿ ಆರ್‍ಬಿಐ ನಿರ್ದಾರಗಳನ್ನು ತೆಗೆದುಕೊಳ್ಳಬೇಕು ಎನ್ನುವ ಪತ್ರವನ್ನು ಬರೆದಿತ್ತು. ಅಲ್ಲದೆ ಆರ್‍ಬಿಐ ಬಳಿ ಹೆಚ್ಚುವರಿಯಾಗಿ ಸಂಗ್ರಹಗೊಂಡಿದ್ದ ಅಪತ್ಕಾಲಿನ ಮೀಸಲು ನಿದಿಯಾದ 3.6 ಲಕ್ಷ ಕೋಟಿ ಮೊತ್ತವನ್ನು ಕೇಂದ್ರ ಸರಕಾರದ ಕಲ್ಯಾಣ ಯೋಜನೆಗಳಿಗೆ ಬಳಸಿಕೊಳ್ಳಲು ನೀಡಬೇಕೆಂದು ಒತ್ತಾಯಿಸಿತು. ಆದರೆ ಆರ್‍ಬಿಐ ಇದನ್ನು ವಿರೋದಿಸಿತ್ತು
ನಾಲ್ಕನೆಯದಾಗಿ ಮೋದಿ ಸರಕಾರದ ಈ ಸರ್ವಾದಿಕಾರ ದೋರಣೆಯನ್ನು ವಿರೋದಿಸಿ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಅವರು ಪ್ರಬುತ್ವವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ ತಿಂಗಳಲ್ಲಿ ಕೊಲ್ಕತ್ತದಲ್ಲಿ ಎಡಿ ಶ್ರಾಫ್ ಸ್ಮಾರಕ ಉಪನ್ಯಾಸ ನೀಡುವ ಸಂದರ್ಬದಲ್ಲಿ ಆಚಾರ್ಯ ಅವರು ‘ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೇಂದ್ರ ಸರಕಾರಗಳು ನಿಯಂತ್ರಿಸಲು ಸಾದ್ಯವಿಲ್ಲ. ಈ ಬ್ಯಾಂಕುಗಳ ಸ್ವಾತಂತ್ರ್ಯವನ್ನು ಪ್ರಬುತ್ವವು ಗೌರವಿಸದೆ ಹೋದರೆ ಶೇರು ಮಾರುಕಟ್ಟೆಯ, ಹೂಡಿಕೆದಾರರ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದ್ದರು. ಇದನ್ನು ಬೆಂಬಲಿಸಿದ ಅಖಿಲ ಭಾರತ ರಿಸರ್ವ ಬ್ಯಾಂಕ್ ನೌಕರರ ಒಕ್ಕೂಟವು ಈ ಕೇಂದ್ರ ಬ್ಯಾಂಕುಗಳ ಸ್ವಾಯತ್ತತೆಯನ್ನು ಅತ್ಯಂತ ಕ್ಷುಲ್ಲಕವಾಗಿ ಪರಿಗಣಿಸಿದರೆ ಅದು ಮುಂಬರುವ ಅನಾಹುತವನ್ನು ಸ್ವಾಗತಿಸಿದಂತಾಗುತ್ತದೆ, ಸರಕಾರವು ಇದನ್ನು ಗಂಬೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಸಿತ್ತು. ಎಲ್ಲಾ ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತತೆ, ಸ್ವಾತಂತ್ರವನ್ನು ಕಸಿದುಕೊಂಡು ಸಂಪೂರ್ಣ ನಿಷ್ಕ್ರಿಯೆಗೊಳಿಸಿದ್ದ ಮೋದಿ ಸರಕಾರಕ್ಕೆ ಆರ್‍ಬಿಐನ ಈ ಹಠಾತ್ ಬಂಡಾಯವನ್ನು ಅರಗಿಸಿಕೊಳ್ಳಲು ಸಾದ್ಯವಾಗಲಿಲ್ಲ.
ಆಚಾರ್ಯ ಅವರ ಈ ಹಠಾತ್ ಬಂಡಾಯಕ್ಕೆ ಅವರ ಮೇ¯ದಿಕಾರಿ ಗವರನ್ನರ್ ಊರ್ಜಿತ್ ಪಟೇಲ್ ಅವರು ಪರೋಕ್ಷವಾಗಿ ಬೆಂಬಲಿಸಿದರು ಮತ್ತು ಅನೇಕ ಸಂದರ್ಬಗಳಲ್ಲಿ ನೇರವಾಗಿಯೆ ಸಮರ್ಥಿಸಿ ಮಾತನಾಡಿದರು. ಇದರಿಂದ ಕೆರಳಿದ ಮೋದಿ ಸರಕಾರ ಗವರ್ನರ್ ಊರ್ಜಿತ್ ಪಟೇಲ್ ವಿರುದ್ದ ಚಾಟಿ ಬೀಸತೊಡಗಿತು. ಈ ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್ ಅವರನ್ನು ಹಣಿಯಲು ಎಲ್ಲಾ ಬಗೆಯ ತಂತ್ರಗಳನ್ನು ರೂಪಿಸತೊಡಗಿತು. ಇದರ ಮೊದಲ ಹಂತವಾಗಿ ಆರ್‍ಬಿಐನ ಆಡಳಿತ ಮತ್ತು ನಿರ್ವಹಣೆ ತಂತ್ರವನ್ನು ಕುರಿತು ಚರ್ಚಿಸಲು ನವೆಂಬರ್ 19ರಂದು ಒಂಬತ್ತು ತಾಸುಗಳ ಕಾಲ ದೀರ್ಘ ಸಭೆಯನ್ನು ನಡೆಸಲಾಯಿತು. ಮೊದಲಿನಿಂದಲೂ 3.6 ಲಕ್ಷ ಕೋಟಿ ಮೊತ್ತವನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸುವುದನ್ನು ವಿರೋದಿಸುತ್ತಲೆ ಬಂದಿದ್ದ ಊರ್ಜಿತ್ ಪಟೇಲ್ ಮೇಲಿನ ಸಭೆಯಲ್ಲಿ ತಮ್ಮ ನಿರ್ದಾರವನ್ನು ಸಡಿಲಿಸಿದರು ಮತ್ತು ಈ ಮೊತ್ತವನ್ನು ಯಾವ ರೀತಿ ಹಂಚಿಕೆ ಮಾಡಬೇಕೆಂದು ಯೋಜಿಸಲು ಸಮಿತಿಯನ್ನು ರಚಿಸಬೇಕೆಂಬ ಸಬೆಯ ನಿರ್ದಾರಕ್ಕೆ ಸಹಿ ಹಾಕಿದರು. ಈ ಮೂಲಕ ಮೋದಿ ಸರಕಾರ ತಾನೆ ಅಂತಿಮ ಎಂದು ಸಾಬೀತುಪಡಿಸಿತು. ಸಣ್ಣ ದನಿಯಲ್ಲಿ ತನ್ನ ಸ್ವಾತಂತ್ರವನ್ನು ಪ್ರತಿಪಾದಿಸಲು ಮುಂದಾಗಿದ್ದ ಗವರ್ನರ್ ಊರ್ಜಿತ್ ಪಟೇಲ್ ಅವರು ಕಡೆಗೂ ಈ ನಿರಂಕುಶ ಪ್ರಬುತ್ವದ ದಾಳಿಯನ್ನು ಎದುರಿಸಲಾಗದೆ ಸೋಲನ್ನೊಪ್ಪಿಕೊಂಡು ಶರಣಾಗತರಾದರು. ಮುಂದಿನ ಸಬೆಯನ್ನು ಡಿಸೆಂಬರ್ 14ರಂದು ನಿಗದಿಪಡಿಸಲಾಗಿತ್ತು. ಅದಕ್ಕೂ ಮುಂಚೆ ಊರ್ಜಿತ್ ಪಟೇಲ್ ರಾಜಿನಾಮೆ ಸಲ್ಲಿಸಿದರು.
ಸ್ವಯಂಕೃತ ಅಪರಾದ, ಗುರುತರ ತಪ್ಪುಗಳು
ಊರ್ಜಿತ್ ಪಟೇಲ್ ಸೆಪ್ಟೆಂಬರ್ 5, 2016ರಂದು ಅದಿಕಾರ ಸ್ವೀಕರಿಸಿದ ಎರಡು ತಿಂಗಳ ನಂತರ ನರೇಂದ್ರ ಮೋದಿಯವರು ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಸಮಾಲೋಚಿಸದೆ, ಯಾರನ್ನು ಮೈಟ್ ಮಾಡದೆ ನವೆಂಬರ್ 2016ರಂದು ಶೇಕಡ 86 ಪ್ರಮಾಣದಲ್ಲಿ ಚಲಾವಣೆಯಲ್ಲಿದ್ದ ರೂ 500, 1000 ಕರೆನ್ಸಿಯನ್ನು ಏಕಪಕ್ಷೀಯವಾಗಿ ಅಮಾನ್ಯೀಕರಣಗೊಳಿಸಿದಾಗ ಈ ಊರ್ಜಿತ್ ಪಟೇಲ್ ಕೋಲೆಬಸವನಂತೆ ಗೋಣು ಆಡಿಸಿದ್ದು ಅವರ ಇಂದಿನ ದುರಂತಕ್ಕೆ ಅವರೇ ಬರೆದುಕೊಂಡ ಮುನ್ನುಡಿಯಾಗಿತ್ತು. ತನ್ನ ಪೂರ್ವದಿಕಾರಿ ರಘುರಾಮ್ ರಾಜನ್ ಅವರಲ್ಲಿದ್ದ ದಿಟ್ಟತೆಯನ್ನು ಸಹ ಈ ಊರ್ಜಿತ್ ಪಟೇಲ್ ಮೈಗೂಡಿಸಿಕೊಂಡಿರಲ್ಲಿಲ್ಲ. ಏಕೆಂದರೆ ರಘುರಾಮ್ ರಾಜನ್ ನೋಟಿನ ಅಮಾನ್ಯೀಕರಣ ನಿರ್ದಾರವನ್ನು ವಿರೋದಿಸಿದ್ದರು. ಆದರೆ ಒಬ್ಬ ಜವಬ್ದಾರಿಯುತ ಅದಿಕಾರಿಯಾಗಿ ಊರ್ಜಿತ್ ಪಟೇಲ್ ಅವರು ನೋಟು ಅಮಾನ್ಯೀಕರಣದ ನಂತರದ ಎರಡು ವರ್ಶಗಳ ಆ ಯಾತನಾಮಯದ ದಿನಗಳಲ್ಲಿ ಸಂತ್ರಸ್ತರಾಗಿದ್ದ ದೇಶದ ಜನತೆಯ ದುಖವನ್ನು ಶಮನಗೊಳಿಸುವ ಯಾವ ಪ್ರಯತ್ನವನ್ನೂ ಮಾಡದೆ ಸಂಪೂರ್ಣ ಮೌನ ವಹಿಸಿದ್ದು ಅವರ ಶರಣಾಗತಿ ವ್ಯಕ್ತಿತ್ವವನ್ನು ಬಹಿರಂಗಗೊಳಿಸಿತು. ದೇಶದ ಬಹುಮುಖ್ಯ ಹಣಕಾಸು ಸಂಸ್ಥೆಯಾದ ಆರ್‍ಬಿಐನ ಮುಖ್ಯಸ್ಥರಾಗಿ ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶವಿದ್ದಾಗ ನಿಷ್ಕ್ರಿಯರಾಗಿ ಕೈಕಟ್ಟಿಕೊಂಡು ಮೋದಿಯ ಮುಂದೆ ವಿದೇಯರಾಗಿ ನಡುಬಗ್ಗಿಸಿದ್ದ ಸ್ವಯಂಕೃತ ಅಪರಾದಕ್ಕೆ ಇಂದು ಸ್ವತಃ ಅವರೇ ಬಲಿಯಾಗಿದ್ದಾರೆ ಮತ್ತು ದೇಶದ ಬಹುಮುಖ್ಯ ಹಣಕಾಸು ಸಂಸ್ಥೆ ಆರ್‍ಬಿಐ ವಿಶ್ವಸಾರ್ಹತೆ ಕಳೆದುಕೊಳ್ಳುವುದಕ್ಕೂ ಕಾರಣಕರ್ತರಾದರು.
ಊರು ಕೊಳ್ಳೆ ಹೊಡೆದ ನಂತರ ದಿಡ್ಡೆ ಬಾಗಿಲು ಹಾಕಿದಂತೆ ನೋಟು ಅಮಾನ್ಯೀಕರಣದಿಂದ ಇಂಡಿಯಾದ ಆರ್ಥಿಕ ವ್ಯವಸ್ಥೆಯು ಸಂಪೂರ್ಣ ಕುಸಿದು ಅದರ ಅಬಿವೃದ್ದಿ ಸೂಚ್ಯಂಕವು ಶೇಕಡ 5.7 ಪ್ರಮಾಣಕ್ಕೆ ಇಳಿದ ನಂತರ ಎಚ್ಚೆತ್ತುಕೊಂಡಂತೆ ವರ್ತಿಸತೊಡಗಿದರು. ಆದರೆ ಆಗಲೆ ಸಮಯ ಮೀರಿತ್ತು. ಇವರು ಅದಿಕಾರ ವಹಿಸಿಕೊಂಡ ಸಂದರ್ಬದಲ್ಲಿ ಶೇಕಡ 4.5 ಪ್ರಮಾಣದಲ್ಲಿದ್ದ ಹಣದುಬ್ಬರ ಎರಡು ವರ್ಶಗಳ ನಂತರ ಇವರು ರಾಜಿನಾಮೆ ನೀಡುವ ಸಂದರ್ಬದಲ್ಲಿ ಶೇಕಡ 3.5 ಪ್ರಮಾಣಕ್ಕೆ ಇಳಿದಿದೆ ಎನ್ನುವ ಅಂಶವೂ ಸಹ ಊರ್ಜಿತ್ ಪಟೇಲ್ ನೆರವಿಗೆ ಬರಲಾರದು. ಇವರ ಕಾಲಾವದಿಯಲ್ಲಿ ಎನ್‍ಪಿಎ ಮೊತ್ತ 10 ಲಕ್ಷ ಕೋಟಿಯನ್ನು ದಾಟಿದಾಗ ಕೊಳೆ ತುಂಬಿಕೊಂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ಹೊರಟರು. ಸಾಲ ನೀಡಿಕೆಯ ಮೇಲೆ ನಿಯಂತ್ರಣವನ್ನು ಸಾದಿಸುವ ಕ್ರಮಕ್ಕೆ ಮುಂದಾದರು. ಆದರೆ ಗೂಳಿಯಾಗಲೆ ಚೀನಿ ಅಂಗಡಿಯಲ್ಲಿ ನುಗ್ಗಿಯಾಗಿತ್ತು. ಊರ್ಜಿತ್ ಪಟೇಲ್‍ಗೆ ಇದು ಅರ್ಥವಾಗುವಶ್ಟರಲ್ಲಿ ಎಲ್ಲವೂ ಕೈಮೀರಿ ಹೋಗಿಯಾಗಿತ್ತು.
ಒಂದೆಡೆ ಎನ್ ಪಿಎ ಸುಸ್ತಿದಾರರ ಪಟ್ಟಿ ಬಹಿರಂಗಗೊಳಿಸಿ ಎಂದು ಸಿಐಸಿ ಒತ್ತಡ ಹೇರುತ್ತಿದ್ದರು, ಮತ್ತೊಂದೆಡೆ ಬಹಿರಂಗಗೊಳಿಸಬೇಡಿ ಎಂದು ಮೋದಿ ತಾಕೀತು ಮಾಡಿದಂತಿತ್ತು. ಈ ಇಕ್ಕಟ್ಟಿನಿಂದ ಪಾರಗಲು ರಾಜಿನಾಮೆ ಕೊಟ್ಟಿರುವ ಸಾದ್ಯತೆ ಇದೆ.
ಸೀಸರ್‍ನ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತವೆ ‘ಹೇಡಿಯು ತನ್ನ ಸಾವಿಗಿಂತ ಮೊದಲೆ ಅನೇಕ ಬಾರಿ ಸತ್ತಿರುತ್ತಾನೆ. ಆದರೆ ಪರಾಕ್ರಮಿ ಒಮ್ಮೆ ಮಾತ್ರ ಸಾವಿನ ರುಚಿ ನೋಡುತ್ತಾನೆ’. ಶ್ರೀಮಾನ್ ಊರ್ಜಿತ್ ಪಟೇಲ್ ಇಂದು ಸೀಸರ್‍ನನ್ನು ಮತ್ತೆ ಮತ್ತೆ ಓದಿಕೊಳ್ಳುವುದು ಒಳ್ಳೆಯದು.

ಮೋದಿ ಸರ್ಕಾರಕ್ಕೆ ಮುಖಭಂಗ
ಹೌದು, ಏಕೆಂದರೆ ಊರ್ಜಿತ್ ಪಟೇಲರ ನಿರ್ಗಮನವು ಸರ್ಕಾರದ ಆರ್ಥಿಕ ನೀತಿಯನ್ನು ದೇಶದ ಆರ್ಥಿಕತೆಯ ನಿರ್ವಹಣೆಯ ಹೊಣೆ ಹೊತ್ತಿರುವ ಸ್ವಾಯತ್ತ ಸಂಸ್ಥೆಗಳಲ್ಲೊಂದಾದ ಆರ್‍ಬಿಐ ಒಪ್ಪುತ್ತಿಲ್ಲ ಎಂಬುದನ್ನು ತೋರುತ್ತಿದೆ. ಜೊತೆಗೆ ಈ ಪಟೇಲ್ ಸ್ವತಃ ಮೋದಿ ಸರ್ಕಾರವು ಆಯ್ದುಕೊಂಡಿದ್ದ ಅಧಿಕಾರಿಯಾಗಿದ್ದರು. ಮೋದಿ ಸರ್ಕಾರದ ಅತ್ಯಂತ ವಿವಾದಾಸ್ಪದ ಆರ್ಥಿಕ ನಡೆ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಅದನ್ನು ನಿರ್ವಹಿಸಬೇಕಾದ ಸಂಸ್ಥೆಯ ಗವರ್ನರ್ ಅವರೇ ಆಗಿದ್ದರು.
ಜೊತೆಗೆ ಊರ್ಜಿತ್ ಪಟೇಲ್ ಕಾರ್ಪೋರೇಟ್ ಆರ್ಥಿಕತೆಯ ವ್ಯಕ್ತಿಯೇ ಹೊರತು (ವಿತ್ತೀಯ ಮೂಲಭೂತವಾದದ ಕುರಿತ ಬಾಕ್ಸ್ ನೋಡಿ), ಜನಪರ ಅರ್ಥಶಾಸ್ತ್ರಜ್ಞರೇನೂ ಆಗಿರಲಿಲ್ಲ. ಅಂದರೆ, ಸ್ವತಃ ಕಾರ್ಪೋರೇಟ್ ಜಗತ್ತೂ ಸಹಾ ಮೋದಿಯವರ ಆರ್ಥಿಕ ನೀತಿಯನ್ನು ಒಪ್ಪುತ್ತಿಲ್ಲ ಎಂಬ ಸಂದೇಶವನ್ನೂ ಇದು ರವಾನಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...