ಕೊರೊನಾ ಬಿಕ್ಕಟ್ಟಿನಿಂದಾದ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶಕ್ಕಾಗಿ ಡೀಸೆಲ್ ಮೇಲೆ ಶೇ. 30 ರಷ್ಟು ವ್ಯಾಟ್ ತೆರಿಗೆ ವಿಧಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ವ್ಯಾಟ್ ತೆರಿಗೆಯನ್ನು ಶೇ. 16.75 ಕ್ಕೆ ಇಳಿಸಿದ್ದಾರೆ.
ಇದರಿಂದಾಗಿ ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 8.36 ರೂಪಾಯಿಯಷ್ಟು ಕಡಿಮೆ ಆಗಲಿದೆ. ಲೀಟರ್‌ಗೆ 82 ರೂ ಇದ್ದ ಡೀಸೆಲ್ ಬೆಲೆ ವ್ಯಾಟ್ ಕಡಿತದಿಂದಾಗಿ 73.64ಕ್ಕೆ ಇಳಿಕೆಯಾಗಲಿದೆ.
ದೆಹಲಿಯ ಉದ್ಯಮಿಗಳು ಮತ್ತು ವರ್ತಕರ ಬೇಡಿಕೆ ಮೇರೆಗೆ ವ್ಯಾಟ್ ಇಳಿಕೆಯ ಈ ಕ್ರಮ ಕೈಗೊಳ್ಳಲಾಗಿದೆ. ಡೀಸೆಲ್ ಬೆಲೆ ಇಳಿಕೆಯಿಂದ ದೆಹಲಿಯ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮೊದಲಿಂದಲೂ ಡೀಸೆಲ್‌ಗೆ ಕಡಿಮೆ ಸುಂಕ ವಿಧಿಸಲಾಗುತ್ತಿದೆ. ಇದರಿಂದಾಗಿ ಡೀಸೆಲ್ ಯಾವಾಗಲೂ ಪೆಟ್ರೋಲ್‌ಗಿಂತಲೂ ಬೆಲೆ ಕಡಿಮೆ ಇರುತ್ತಿತ್ತು. ಆದರೆ, ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕತೆ ಸುಧಾರಿಸಲು ಮತ್ತು ಮಾಲಿನ್ಯಕಾರಕ ಡಿಸೆಲ್ಗೆ ಕಡಿವಾಣ ಹಾಕುವ ಉದ್ದೇಶದಿಂದ ದೆಹಲಿ ಸರ್ಕಾರ ಡೀಸೆಲ್ ಮೇಲೆ ವ್ಯಾಟ್ ತೆರಿಗೆಯನ್ನು ಶೇ. 30ರಷ್ಟು ಹೇರಲು ನಿರ್ಧರಿಸಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ಮುಸ್ಲಿಂ ವೈದ್ಯೆಯ ಮೇಲೆ RSS ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಯೇ?
ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ದುಬಾರಿಯಾಗಿತ್ತು. ಕಳೆದ ತಿಂಗಳ 18 ದಿನಗಳಲ್ಲಿ ಪೆಟ್ರೋಲ್ ಬೆಲೆ 8.50 ರೂ ಏರಿಕೆಯಾದರೆ, ಡೀಸೆಲ್ 10.48 ರೂ ಬೆಲೆ ಹೆಚ್ಚಳ ಕಂಡಿತ್ತು. ಸರ್ಕಾರದ ಈ ಕ್ರಮಕ್ಕೆ ಹಲವು ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು.
ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸೇರಲಾಗಿದ್ದ ಸಂಪುಟ ಸಭೆಯಲ್ಲಿ ಡೀಸೆಲ್ ಮೇಲಿನ ವ್ಯಾಟ್ ಇಳಿಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ರಾಜ್ಯ ಸರ್ಕಾರಗಳೂ ಕೂಡ ವ್ಯಾಟ್ ಅನ್ನು ಹೆಚ್ಚುವರಿಯಾಗಿ ವಿಧಿಸುತ್ತವೆ. ಹೀಗಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸ ಇರುತ್ತದೆ.
ಡೀಸೆಲ್ ಮತ್ತು ಪೆಟ್ರೋಲ್‌ಗೆ ಕೇಂದ್ರ ಸರ್ಕಾರ ಈಗ ಸರಿ ಸುಮಾರು ಒಂದೇ ಮೊತ್ತದ ತೆರಿಗೆ ವಿಧಿಸುತ್ತದೆ. ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರದ ಸುಂಕ 32.98 ರೂ ಇದ್ದು, ಡೀಸೆಲ್ ಮೇಲೆ 31.83 ಸುಂಕ ವಿಧಿಸುತ್ತದೆ.
ಓದಿ: ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ಪ್ರಾಧ್ಯಾಪಕನ ಬಂಧನ


