ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್‌ನ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಜೊತೆ ಜಂಟಿಯಾಗಿ ಉದ್ಘಾಟನೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಭಾರತದ ಸಹಕಾರಕ್ಕೆ ಯಾವುದೆ ಷರತ್ತುಗಳಿಲ್ಲ ಎಂದು ಹೇಳಿದ್ದಾರೆ.
ಆನ್‌ಲೈನ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, “ಅಭಿವೃದ್ಧಿ ಸಹಭಾಗಿತ್ವದ ಹೆಸರಿನಲ್ಲಿ ರಾಷ್ಟ್ರಗಳನ್ನು ಹೇಗೆ ಅವಲಂಬನೆಯ ಸಹಭಾಗಿತ್ವಕ್ಕೆ ಒತ್ತಾಯಿಸಲಾಯಿತು ಎಂದು ಇತಿಹಾಸವು ನಮಗೆ ಕಲಿಸಿದೆ” ಎಂದು ಹೇಳಿದರು.
’’ಇದು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಆಡಳಿತಕ್ಕೆ ನಾಂದಿ ಹಾಡಿತು. ಹಾಗೆಯೇ ಜಾಗತಿಕ ಪವರ್ ಬ್ಲಾಕ್‌ಗಳಿಗೆ ನಾಂದಿ ಹಾಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಮರುಪಾವತಿ ಮಾಡಲಾಗದ ಸಾಲಗಳನ್ನು ಎದುರಿಸುತ್ತಿರುವ ಇತರ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಮೂಲಕ ಒಪ್ಪಂದಗಳನ್ನು ತನ್ನ ಪರವಾಗಿ ಹತೋಟಿಗೆ ತರಲು ಚೀನಾದ “ಜಾಗತಿಕ ಸಾಲ-ರಾಜತಾಂತ್ರಿಕತೆ” ಯ ಬಗ್ಗೆ ಹೆಚ್ಚುತ್ತಿರುವ ಆರೋಪಗಳ ಮಧ್ಯೆ ಪ್ರಧಾನ ಮಂತ್ರಿಯ ಈ ಹೇಳಿಕೆಗಳು ಮುಖ್ಯವಾದವುಗಳಾಗಿವೆ.
“ಭಾರತಕ್ಕೆ ಸಂಬಂಧಿಸಿದಂತೆ, ಅಭಿವೃದ್ಧಿ ಸಹಕಾರದಲ್ಲಿ ಅತ್ಯಂತ ಮೂಲಭೂತ ತತ್ವವೆಂದರೆ ನಮ್ಮ ಪಾಲುದಾರರನ್ನು ಗೌರವಿಸುವುದು” ಎಂದು ಅವರು ಹೇಳಿದರು.
“ಅಭಿವೃದ್ಧಿ ಪಾಠಗಳ ಈ ಹಂಚಿಕೆ ನಮ್ಮ ಏಕೈಕ ಪ್ರೇರಣೆ. ಅದಕ್ಕಾಗಿಯೇ ನಮ್ಮ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತುಗಳೊಂದಿಗೆ ಬರುವುದಿಲ್ಲ” ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಪೋರ್ಟ್ ಲೂಯಿಸ್‌ನಲ್ಲಿನ ಹೊಸ ಸುಪ್ರೀಂ ಕೋರ್ಟ್ ಕಟ್ಟಡವು ಭಾರತ-ಮಾರಿಷಸ್ ಸಹಕಾರ ಮತ್ತು ಹಂಚಿಕೆಯ ಮೌಲ್ಯಗಳ ಸಂಕೇತವಾಗಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.
ಇದನ್ನೂ ಓದಿ: ಅಸೆಂಬ್ಲಿ ಅಧಿವೇಶನಕ್ಕೆ ಹಾಜರಾಗುತ್ತೇವೆ: ಪೈಲಟ್ ಬಣದ ಶಾಸಕರು


