ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯ ಊಹಾಪೋಹಗಳು ಏಳುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹತ್ತಾರು ಮಠಗಳ ಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ದ್ವನಿ ಎತ್ತಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಬಾರದು ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.
ಇಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರುದ್ರಮುನಿ ಸ್ವಾಮಿಗಳ ನೇತೃತ್ವದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹತ್ತಕ್ಕೂ ಹೆಚ್ಚು ಮಂದಿ ಸ್ವಾಮಿಗಳು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಮೂಲ ಕಾರಣ ಎಂಬುದನ್ನು ಬಿಜೆಪಿ ಹೈಕಮಾಂಡ್ ನೆನಪಿಟ್ಟುಕೊಳ್ಳಬೇಕು ಎಚ್ಚರಕೆಯ ಸಂದೇಶ ರವಾನಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ನಡೆಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರು ಕಾರಣ ಎಂಬುದನ್ನು ಯಾರೂ ಮರೆಯಬಾರದು. ಬಿಎಸ್ ವೈ ಕೆಳಗಿಳಿಸುವ ಪ್ರಯತ್ನ ಖಂಡಿನೀಯ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲು ಪ್ರಯತ್ನಿಸಬೇಡಿ. ಒಂದೊಮ್ಮೆ
ಹುದ್ದೆಯಿಂದ ಕೆಳಗಿಳಿಸಿದರೆ ಇಡೀ ವೀರಶೈವ ಸಮಾಜದ ಸ್ವಾಮೀಜಿಗಳು ಪಕ್ಷದ ವಿರುದ್ಧ ತಿರುಗಿಬೀಳಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಪಕ್ಷಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೂ ಪಕ್ಷದಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನಗಳು ನಡೆಯುತ್ತಲೇ ಇವೆ. ಇದು ಸಲ್ಲದು ಎಂದು ಆಕ್ರೋಶ ಹೊರಹಾಕಿದ್ದಾರೆ.


