ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವತಿಯಿಂದ ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಗೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಭ್ಯರ್ಥಿಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯ 2 ಮತ್ತು 3ನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಹಸಿರು ನಿಶಾನೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.
ಕೊರೊನಾ ಕುರಿತು ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಯ ಶಿಫಾರಸುಗಳ ಆಧಾರದ ಮೇಲೆ ಸಮಗ್ರ ಮೌಲ್ಯಮಾಪನದ ನಂತರ ಎಸ್‌ಐಐಗೆ ಡಾ.ವಿ.ಜಿ.ಸೋಮಾನಿ ಭಾನುವಾರ ತಡರಾತ್ರಿ ಅನುಮೋದನೆ ನೀಡಿದ್ದಾರೆ.
3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಮುಂದುವರಿಯುವ ಮೊದಲು ದತ್ತಾಂಶ ಸುರಕ್ಷತಾ ಮೇಲ್ವಿಚಾರಣಾ ಮಂಡಳಿಯು (ಡಿಎಸ್‌ಎಂಬಿ) ಮೌಲ್ಯಮಾಪನ ಮಾಡಿದ ಸುರಕ್ಷತಾ ದತ್ತಾಂಶವನ್ನು ಸಿಡಿಎಸ್‌ಕೊಗೆ ಸಲ್ಲಿಸಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧ್ಯಯನದ ವಿನ್ಯಾಸದ ಪ್ರಕಾರ, ಪ್ರತಿಯೊಂದು ಘಟಕಕ್ಕೂ ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್‌ಗಳನ್ನು ನೀಡಲಾಗುವುದು. (ಮೊದಲ ದಿನದಂದು ಡೋಸ್ ನೀಡಿದ ನಂತರ 29 ನೇ ದಿನದಂದು ಎರಡನೇ ಡೋಸ್) ನಂತರ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿಯನ್ನು ಪೂರ್ವನಿರ್ಧರಿತ ಮಧ್ಯಂತರದಲ್ಲಿ ನಿರ್ಣಯಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಎಸ್‌ಐಐ, ಬ್ರಿಟಿಷ್-ಸ್ವೀಡಿಷ್ ಕಂಪನಿ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಸಂಸ್ಥೆ ಅಭಿವೃದ್ಧಿಪಡಿಸಿದ ಸಂಭಾವ್ಯ ಲಸಿಕೆಯನ್ನು ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.
ಆಕ್ಸ್‌ಫರ್ಡ್ ಲಸಿಕೆ ಲಂಡನ್ ನಲ್ಲಿ 2 ಮತ್ತು 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳು, ಬ್ರೆಜಿಲ್‌ನಲ್ಲಿ 3 ನೇ ಹಂತ ಮತ್ತು ದಕ್ಷಿಣ ಆಫ್ರಿಕಾದಲ್ಲಿ 1 ಮತ್ತು 2 ನೇ ಹಂತದಲ್ಲಿ ಪ್ರಯೋಗಗಳು ನಡೆಯುತ್ತಿದೆ.
ಕೆಲವು ಹೆಚ್ಚುವರಿ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಕ್ಲಿನಿಕಲ್ ಪ್ರಯೋಗಗಳಿಗೆ ತನ್ನ ಪ್ರೋಟೋಕಾಲ್ ಅನ್ನು ಪರಿಷ್ಕರಿಸಲು ಜುಲೈ 28 ರಂದು ಎಸ್‌ಇಸಿ ಕೇಳಿದ ನಂತರ ಸೆರಮ್ ಸಂಸ್ಥೆ ಬುಧವಾರ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಯನಕ್ಕಾಗಿ ಪ್ರಸ್ತಾಪಿಸಲಾದ ಕ್ಲಿನಿಕಲ್ ಟ್ರಯಲ್ ಸೈಟ್‌ಗಳನ್ನು ಭಾರತದಾದ್ಯಂತ ವಿತರಿಸಬೇಕೆಂದು ಸಮಿತಿ ಶಿಫಾರಸು ಮಾಡಿತ್ತು.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ)ನ ತಜ್ಞರ ಸಮಿತಿ, ತ್ವರಿತ ನಿಯಂತ್ರಕ ಪ್ರತಿಕ್ರಿಯೆಯಾಗಿ, ಭಾರತದ ಆರೋಗ್ಯವಂತ ವಯಸ್ಕರಲ್ಲಿ ‘ಕೋವಿಶೀಲ್ಡ್’ ಎಂಬ ಸಂಭಾವ್ಯ ಲಸಿಕೆಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು.
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್), ಪುಣೆಯ ಬಿಜೆ ವೈದ್ಯಕೀಯ ಕಾಲೇಜು, ರಾಜೇಂದ್ರ ಸ್ಮಾರಕ ಸಂಶೋಧನಾ ಸಂಸ್ಥೆ ಸೇರಿದಂತೆ ಆಯ್ದ 17 ತಾಣಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 1,600 ಜನರು ಪ್ರಯೋಗಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸೆರಮ್ ಸಂಸ್ಥೆ ತನ್ನ ಪರಿಷ್ಕೃತ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಚಂದ್ರಯಾನ-2ರ ರೋವರ್ ಚಂದ್ರನ ಮೇಲಿದೆ: ಚೆನ್ನೈ ಮೂಲದ ಟೆಕ್ಕಿ ಹೇಳಿಕೆ


