ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್ಆರ್ಸಿಪಿ, ರಾಜ್ಯದ ವಿರೋಧ ಪಕ್ಷಗಳ ಮುಖಂಡರು, ವಕೀಲರು, ಪತ್ರಕರ್ತರು ಮತ್ತು ಕಾರ್ಯಕರ್ತರುಗಳ ಅಕ್ರಮ ಫೋನ್ ಟ್ಯಾಪ್ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಗುಪ್ತಚರ ಅಧಿಕಾರಿಗಳು ಅಕ್ರಮವಾಗಿ ಟ್ಯಾಪ್ ಮಾಡುತ್ತಿದ್ದಾರೆ ಎಂದು ವೈಎಸ್ಆರ್ಸಿಪಿ ಬಂಡಾಯ ಸಂಸದ ಕೆ ರಘು ರಾಮ ಕೃಷ್ಣ ರಾಜು ಭಾನುವಾರ ಆರೋಪಿಸಿದ ನಂತರ ಈ ಪತ್ರ ಬೆಳಕಿಗೆ ಬಂದಿದೆ.
ವೈಎಸ್ಆರ್ಸಿಪಿ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿರುವ ಚಂದ್ರಬಾಬು ನಾಯ್ಡು, ತನ್ನದೇ ಆದ ರಾಜಕೀಯ ಲಾಭಕ್ಕಾಗಿ, ಅಕ್ರಮವಾಗಿ ಫೋನ್ಗಳನ್ನು ಟ್ಯಾಪ್ ಮಾಡುತ್ತಿದೆ ಎಂದಿದ್ದಾರೆ.
ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885 ರ ಸೆಕ್ಷನ್ 5 (2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ಅನ್ನು ಉಲ್ಲೇಖಿಸಿ ನಾಯ್ಡು ಪತ್ರ ಬರೆದಿದ್ದು, ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಂತಹ ಪ್ರಕರಣಗಳಲ್ಲಿ ಮಾತ್ರ ಫೋನ್ ಟ್ಯಾಪಿಂಗ್ ಮಾಡಲು ಕಾನೂನು ಅನುಮತಿಸುತ್ತದೆ. ಆದರೆ ಈ ಸರ್ಕಾರ ಸಂವಿಧಾನದ 19 ಮತ್ತು 21ರ ವಿಧಿಯನ್ವಯ ಮೂಲಭೂತ ಹಕ್ಕುಗಳ ವಿರುದ್ಧವಾಗಿದ್ದು, ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ಸರ್ಕಾರದ ಅಸಮರ್ಪಕ ಕಾರ್ಯದ ವಿರುದ್ಧ ಧ್ವನಿ ಎತ್ತುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ಆಕ್ರಮಣ ಮಾಡುತ್ತಿದ್ದಾರೆ” ಎಂದು ಆರೋಪಿಸಿರುವ ಅವರು, ವಕೀಲರು, ಪತ್ರಕರ್ತರು ಮತ್ತು ಕಾರ್ಯಕರ್ತರಲ್ಲದೆ, ವೈಎಸ್ಆರ್ಸಿಪಿ ಈಗ ನ್ಯಾಯಾಂಗವನ್ನು ಸಹ ಗುರಿಯಾಗಿಸಿಕೊಂಡಿದೆ ಎಂದು ತೋರುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಖಾಸಗಿ ವ್ಯಕ್ತಿಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸಿಕೊಂಡು ಅಕ್ರಮವಾಗಿ ಫೋನ್ಗಳನ್ನು ಟ್ಯಾಪ್ ಮಾಡುತ್ತಿದ್ದಾರೆ. ಫೋನ್ ಟ್ಯಾಪಿಂಗ್ ಅನ್ನು ಅಕ್ರಮ ಸಾಫ್ಟ್ವೇರ್ ಮೂಲಕ ಮಾಡಲಾಗುತ್ತಿದೆ. ಇದು ದೀರ್ಘಾವಧಿಯಲ್ಲಿ “ರಾಷ್ಟ್ರೀಯ ಭದ್ರತೆಗೆ ತೊಂದರೆಯನ್ನು ಉಂಟುಮಾಡಬಹುದು ಎಂದು ಅವರು ತಿಳಿಸಿದ್ದಾರೆ.
“ಆಂಧ್ರಪ್ರದೇಶದ ಆಡಳಿತ ಪಕ್ಷ ಮತ್ತು ಖಾಸಗಿ ವ್ಯಕ್ತಿಗಳ ಕಾನೂನುಬಾಹಿರ ಚಟುವಟಿಕೆಗಳನ್ನು (ಫೋನ್ ಟ್ಯಾಪಿಂಗ್) ಪರಿಶೀಲಿಸಲು ತಕ್ಷಣದ ಮತ್ತು ಕಠಿಣ ಕ್ರಮಗಳನ್ನು ಪ್ರಾರಂಭಿಸಬೇಕು” ಎಂದು ನಾಯ್ಡು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಮತ್ತೊಂದೆಡೆ, ವೈಎಸ್ಆರ್ಸಿಪಿ ಬಂಡಾಯ ಸಂಸದ ಕೆ ರಘು ರಾಮ ಕೃಷ್ಣ ರಾಜು ಅವರು ಕೇಂದ್ರ ಗೃಹ ಕಾರ್ಯದರ್ಶಿ ಎ ಕೆ ಭಲ್ಲಾ ಅವರಿಗೆ ಪತ್ರ ಬರೆದಿದ್ದು, ‘ರೊಮೇನಿಯಾ, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ದಕ್ಷಿಣ ಕೊರಿಯಾ ಮತ್ತು ಸ್ಪೇನ್ ಸಂಕೇತಗಳನ್ನು ಪ್ರದರ್ಶಿಸುವ ವಿಚಿತ್ರ ಸಂಖ್ಯೆಗಳಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ದಯವಿಟ್ಟು ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದ್ದಾರೆ.
ನಮ್ಮ ರಾಜ್ಯ ಗುಪ್ತಚರ ಇಲಾಖೆ ನನ್ನ ಫೋನ್ಗಳನ್ನು ಟ್ಯಾಪ್ ಮಾಡುತ್ತಿದೆ ಎಂದು ನನಗೆ ಗೊತ್ತಾಗಿದೆ. ಇದು ಸಂವಿಧಾನದ 14, 19 ಮತ್ತು 21 ನೇ ವಿಧಿಗಳ ಉಲ್ಲಂಘನೆಯಾಗಿದೆ” ಎಂದು ಅವರು ಹೇಳಿದರು.
ತಾವು ಸದಸ್ಯರಾಗಿರುವ ವಿವಿಧ ಸಂಸದೀಯ ಸಮಿತಿಗಳನ್ನು ಉಲ್ಲೇಖಿಸಿದ ರಾಜು, ಸಹೋದ್ಯೋಗಿ ಸಂಸದರು ಮತ್ತು ಸಂಸತ್ತಿನ ಸಿಬ್ಬಂದಿಯೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಗೌಪ್ಯ ಮತ್ತು ವರ್ಗೀಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಮತ್ತು ಚರ್ಚಿಸಲಾಗುವುದು. ಅಂತಹ ಗೌಪ್ಯ ಮಾಹಿತಿಯ ಯಾವುದೇ ಸೋರಿಕೆ, ನನ್ನ ಕರ್ತವ್ಯಗಳು ಮತ್ತು ಕಟ್ಟುಪಾಡುಗಳ ಕಾರ್ಯಕ್ಷಮತೆಗೆ ಗಂಭೀರ ಅಡಚಣೆಯಾಗುವುದಲ್ಲದೆ ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕರವಾಗಬಹುದು ಎಂದೂ ಹೇಳಿದ್ದಾರೆ.
ಇದನ್ನು ಓದಿ: ಖಾಸಗಿ ಮನೆ ನಿರ್ಮಾಣಕ್ಕೆ ಸಾರ್ವಜನಿಕರ ಕೋಟಿ ಕೋಟಿ ಹಣ ಬಳಸಿಕೊಂಡರೆ ಆಂಧ್ರ ಸಿಎಂ ಜಗನ್!?


