ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 10,000 ಸೈನಿಕರನ್ನು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಿಂದ ಹಿಂತೆಗೆದುಕೊಳ್ಳಲು ಗೃಹ ಸಚಿವಾಲಯ ಆದೇಶಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಒಟ್ಟು 100 ಸಿಎಪಿಎಫ್ ಅರೆಸೈನಿಕ ತುಕಡಿಗಳನ್ನು ಹಿಂಪಡೆಯಲಾಗುವುದು, ಇದರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯಿಂದ 40 ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಗಡಿ ಭದ್ರತಾ ಪಡೆ ಮತ್ತು ಸಶಸ್ತ್ರ ಸೀಮಾ ಬಲದಿಂದ ತಲಾ 20 ತುಕಡಿಗಳನ್ನು ಹಿಂಪಡೆಯಲಾಗುತ್ತಿದೆ. ಈ ತುಕಡಿಗಳು ಭಾರತದ ಬೇರೆಡೆ ಇರುವ ತಮ್ಮ ಮೂಲ ನೆಲೆಗಳಿಗೆ ಮರಳುತ್ತವೆ ಎನ್ನಲಾಗಿದೆ.
ಇದನ್ನೂ ಓದಿ ಕಾಶ್ಮೀರದ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಪ್ರೇರೇಪಣೆಯ ಗೌತಮ್ ನೌಲಾಖ
5 ಆಗಸ್ಟ್ 2019 ರಂದು 370 ನೇ ವಿಧಿಯನ್ನು ರದ್ದುಪಡಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ತುಕಡಿಗಳನ್ನು ಜಮ್ಮು ಕಾಶ್ಮೀರದಾದ್ಯಂತ ನಿಯೋಜಿಸಲಾಗಿತ್ತು. ಅಂದು ಜಮ್ಮಕಾಶ್ಮೀರಕ್ಕೆ ಸಂವಿಧಾನ ನೀಡಿರುವ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿ, ರಾಜ್ಯದ ಸ್ಥಾನಮಾನ ತೆಗೆದುಹಾಕಿದ ನಂತರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು.
ಸಿಎಪಿಎಫ್ ತುಕಡಿಗಳಲ್ಲಿ ಪ್ರಸ್ತುತ ಹಿಂದುರುಗುತ್ತಿರುವುದು ಮೂರನೇ ಮತ್ತು ಅತಿದೊಡ್ಡ ವಾಪಸಾತಿಯಾಗಿದೆ. 2019 ರ ಡಿಸೆಂಬರ್‌ನಲ್ಲಿ 72 ತುಕಡಿಗಳು ಮತ್ತು ಈ ವರ್ಷದ ಮೇ ತಿಂಗಳಿನಲ್ಲಿ 10 ತುಕಡಿಗಳು ವಾಪಾಸಾಗಿದ್ದವು.
ಕಾಶ್ಮೀರ ಕಣಿವೆಯಲ್ಲಿನ ಚಳಿಗಾಲದ ಪರಿಸ್ಥಿತಿಯ ಕಾರಣಕ್ಕೆ ಸೈನ್ಯವನ್ನು ವಾಪಾಸ್ ಕರೆಸಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.


