ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಹಿಂದಿ ಹೇರಿಕೆ ವಿರೋಧಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರನಟರು-ರಾಜಕಾರಣಿಗಳ ಬೆಂಬಲ ಸಿಕ್ಕಿದೆ. ಹಾಗಾಗಿ ಇಂದು ಟ್ವಿಟ್ಟರ್‌ನಲ್ಲಿ #WeWantTwolanguagepolicy ಹ್ಯಾಸ್‌ಟ್ಯಾಗ್ ಟ್ರೆಂಡ್ ಆಗಿದೆ.
ರಾಜ್ಯಾದ್ಯಂತ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ನೀತಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಟ್ವಿಟ್ಟರ್‌ನಲ್ಲಿ ಆಗ್ರಹ ಜೋರಾಗಿದೆ. ಉತ್ತರ ಭಾರತೀಯರು ತಮ್ಮ ಮಾತೃಭಾಷೆಯಾದ ಹಿಂದಿ ಜೊತೆಗೆ ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆ ಕಲಿಯುತ್ತಾರೆ. ತಮಿಳಿಗರು ಕೂಡ ತಮಿಳಿನ ಜೊತೆ ಇಂಗ್ಲಿಷ್ ಕಲಿಯುತ್ತಾರೆ. ಆದರೆ, ಕರ್ನಾಟಕದಲ್ಲಿ ಕನ್ನಡದ ಜೊತೆಗೆ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯುತ್ತಾರೆ. ಆದರೂ ಮೂರನೇಯ ಭಾಷೆಯಾಗಿ ಹಿಂದಿ ಹೇರಿಕೆ ಏಕೆ ಎಂಬ ಪ್ರಶ್ನೆ ಕೇಳಿಬಂದಿದೆ.
ನಟ ವಸಿಷ್ಠ ಎನ್. ಸಿಂಹ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ವೈಎಸ್‌ವಿ ದತ್ತ, ನಟ ಹಾಗೂ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕರು ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕು. ಅದಕ್ಕೆ ಹೊರತಾಗಿ ಬೇರೆ ಭಾಷೆಗಳನ್ನು ಕಲಿಯುವ ಆಯ್ಕೆ ಆಯಾ ವ್ಯಕ್ತಿಗಳದ್ದಾಗಿರುತ್ತದೆ. ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ’ಹಿಂದಿ’ ದಕ್ಷಿಣ ಭಾರತೀಯರ ಅವಕಾಶಗಳನ್ನು ಕಸಿದಿದೆ: ಎಚ್.ಡಿ ಕುಮಾರಸ್ವಾಮಿ
ಹಿಂದಿ ಹೇರಿಕೆಯ ಕೂಗು ಪ್ರಬಲವಾಗುತ್ತಿರುವ ದಿನಗಳಲ್ಲಿ ದ್ವಿಭಾಷಾ ನೀತಿಯು ಜಾರಿಗೆ ಬರಬೇಕು ಎನ್ನುವ ಕನ್ನಡಿಗರ ಧ್ವನಿ ಇನ್ನಷ್ಟು ಗಟ್ಟಿಯಾಗಬೇಕಿದೆ. 130 ಕೋಟಿ ಭಾರತೀಯರೆಲ್ಲರೂ ಹಿಂದಿ ಕಲಿಯಲೇ ಬೇಕು ಎನ್ನುವುದು ಮೂರ್ಖತನದ ಪರಮಾವಧಿ ಅಲ್ಲದೇ ಮತ್ತೇನು..? ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.
ಹಿಂದಿ ನಮ್ಮ ರಾಜ್ಯದ ಮೇಲೆ ಉತ್ತರ ಭಾರತದಿಂದ ಹೇರಲ್ಪಟ್ಟ ಭಾಷೆ. ಅನಗತ್ಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿಯನ್ನು ಪಠ್ಯಕ್ರಮದಲ್ಲಿ ಸೇರಿಸಿ ಮಕ್ಕಳನ್ನು ಒತ್ತಡಕ್ಕೆ ಒಳಗಾಗಿಸುತ್ತಿದ್ದೇವೆ. ಬದಲಿಗೆ ನಮ್ಮದೇ ರಾಜ್ಯದ ತುಳು, ಕೊಡವ ಭಾಷೆಗಳನ್ನು ಕಲಿಯುವ ಆಸಕ್ತಿ ಇದ್ದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬಹುದು ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯಪಟ್ಟಿದ್ದಾರೆ.
ಹಿಂದಿ ನಮ್ಮ ರಾಜ್ಯದ ಮೇಲೆ ಉತ್ತರ ಭಾರತದಿಂದ ಹೇರಲ್ಪಟ್ಟ ಭಾಷೆ. ಅನಗತ್ಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿಯನ್ನು ಪಠ್ಯಕ್ರಮದಲ್ಲಿ ಸೇರಿಸಿ ಮಕ್ಕಳನ್ನು ಒತ್ತಡಕ್ಕೆ ಒಳಗಾಗಿಸುತ್ತಿದ್ದೇವೆ. ಬದಲಿಗೆ ನಮ್ಮದೇ ರಾಜ್ಯದ ತುಳು, ಕೊಡವ ಭಾಷೆಗಳನ್ನು ಕಲಿಯುವ ಆಸಕ್ತಿ ಇದ್ದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬಹುದು.
— YSV Datta (@YSV_Datta) August 20, 2020
ತ್ರಿಭಾಷಾ ಸೂತ್ರದ ವಿರುದ್ಧದ ಕೂಗು ಬಹಳ ಹಿಂದಿನದ್ದು. ಕುವೆಂಪು,ತೇಜಸ್ವಿ ಹಾಗೆ ಅನೇಕ ಸಾಹಿತಿಗಳು ತ್ರಿಭಾಷಾ ಸೂತ್ರದ ವಿರುದ್ಧ ಇದ್ದವರೇ, ಇಂದಿನ ಯುವಕರು ದ್ವಿಭಾಷಾ ಸೂತ್ರದ ಪರ ಧ್ವನಿ ಎತ್ತುವುದರೊಂದಿಗೆ ತ್ರಿಭಾಷಾ ಸೂತ್ರದ ವಿರುದ್ಧದ ಹೋರಾಟವನ್ನು ಮುನ್ನೆಲೆಗೆ ತೆಗೆದುಕೊಂಡು ಬಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ ಎಂದು ನಟ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ನೆರೆಯ ತಮಿಳುನಾಡು ಹಾಗೂ ಉತ್ತರದ ಕೆಲ ರಾಜ್ಯಗಳಂತೆ ಕರ್ನಾಟಕದಲ್ಲೂ ದ್ವಿಭಾಷಾನೀತಿ ಜಾರಿಗೆ ಬರಬೇಕು. ಇತರೆ (optional) ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ ಕಲಿಯುವವರದ್ದಾಗಿರಬೇಕು!! ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ನಡೆಯಬಾರದು. ತ್ರಿಭಾಷಾನೀತಿ ಹೇರಣೆಯ ವಿರುದ್ಧ ಕೈಜೋಡಿಸೋಣ ಎಂದು ನಟ ವಸಿಷ್ಠ ಸಿಂಹ ಮನವಿ ಮಾಡಿದ್ದಾರೆ.
ಬಹಳಷ್ಟು ಕನ್ನಡಿಗರು ದ್ವಿಭಾಷಾ ನೀತಿ ಸಾಕು, ಹಿಂದಿ ಹೇರಿಕೆ ಬೇಡ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಹಿಂದಿ ಹೇರಿಕೆ ಚರ್ಚೆ: ಕನಿಮೊಳಿ ಪರ ದನಿಯೆತ್ತಿದ ಎಚ್.ಡಿ ಕುಮಾರಸ್ವಾಮಿ, ಚಿದಂಬರಂ


