ತಿರುವನಂತಪುರಂ ಸೇರಿದಂತೆ ಮೂರು ವಿಮಾನ ನಿಲ್ದಾಣಗಳನ್ನು ಅದಾನಿ ಕಂಪನಿಗೆ 50 ವರ್ಷಗಳ ಕಾಲ ಹಸ್ತಾಂತರಿಸುವ ಕೇಂದ್ರದ ನಿರ್ಧಾರವನ್ನು ಕೇರಳದ ಎಲ್‌ಡಿಎಫ್ ಸರ್ಕಾರ ತೀವ್ರವಾಗಿ ಆಕ್ಷೇಪಿಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
“ಈ ನಿರ್ಣಯವು ನವದೆಹಲಿಯಲ್ಲಿ ನಡೆದಿದ್ದ ವೈಯಕ್ತಿಕ ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಆಶ್ವಾಸನೆಗೆ ವಿರುದ್ಧವಾಗಿದೆ” ಎಂದು ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನು ರಾಜ್ಯ ಸರ್ಕಾರ ಪ್ರಮುಖ ಪಾಲುದಾರರಾಗಿರುವ ಸ್ಪೇಷಲ್ ಪರ್ಪಸ್ ವೆಹಿಕಲ್‌ಗೆ (ಎಸ್‌ಪಿವಿ) ವರ್ಗಾಯಿಸಬೇಕೆಂಬ ಕೇರಳದ ಪುನರಾವರ್ತಿತ ಮನವಿಯನ್ನು ತಳ್ಳಿಹಾಕಿ, ಅದಾನಿಗೆ ನೀಡಲಾಗಿದೆ ಎಂದು ಪತ್ರದಲ್ಲಿ ಪಿಣರಾಯಿ ಹೇಳಿದ್ದಾರೆ.
ಲಕ್ನೋ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳನ್ನು ಲೀಸ್ ಮೇಲೆ ನಿರ್ವಹಿಸುವ ಹಕ್ಕನ್ನು ಅದಾನಿ ಎಂಟರ್ ಪ್ರೈಸಸ್ ಪಡೆದುಕೊಂಡಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಾಡೇಕರ್ ಬುಧವಾರ ದೆಹಲಿಯ ಸುದ್ಧಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಇದರ ಬಗ್ಗೆ ಅದಾನಿ ಸಂಸ್ಥೆಯೊಂದಿಗೆ 2020 ರ ಫೆಬ್ರವರಿಯಲ್ಲಿ ಒಪ್ಪಂದ ನಡೆದಿತ್ತು. ಅದರಂತೆ, ಆಗಸ್ಟ್ 12ರೊಳಗೆ ಪಡೆದುಕೊಳ್ಳಬೇಕು ಎಂದು ಟೆಂಡರ್ ನಲ್ಲಿ ಷರತ್ತು ವಿಧಿಸಲಾಗಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಗಡುವನ್ನು ನವೆಂಬರ್ 12ಕ್ಕೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದರು.
ಕೇಂದ್ರ ಸರ್ಕಾರ ಈ ಹಿಂದೆ 12 ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ನಿರ್ಧರಿಸಿತ್ತು. ಈ ಪ್ರಕಾರ ಮೊದಲ ಹಂತದಲ್ಲಿ 6 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಸಮೂಹ ಸಂಸ್ಥೆ ಅತ್ಯಧಿಕ ಮೊತ್ತ ನಮೂದಿಸುವ ಮೂಲಕ ಗೆದ್ದುಕೊಂಡಿದೆ ಎಂದು ಸರ್ಕಾರ ಹೇಳಿದೆ.
ಈ 6 ವಿಮಾನ ನಿಲ್ದಾಣಗಳಲ್ಲಿ, 3ರ ನಿರ್ವಹಣೆಯ ಹಕ್ಕನ್ನು ಅದಾನಿ ಸಂಸ್ಥೆಗೆ ವಹಿಸುವ ಕುರಿತ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ತಿರುವನಂತಪುರಂ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಖಾಸಗಿ ಕಂಪನಿಯೊಂದರ ಪಾಲ್ಗೊಳ್ಳುವಿಕೆಯು “2003 ರಲ್ಲಿ ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ನೀಡಿದ ಆಶ್ವಾಸನೆಗೆ ವಿರುದ್ಧವಾಗಿದೆ” ಎಂದು ಪಿಣರಾಯಿ ವಿಜಯನ್ ಒತ್ತಿಹೇಳಿದ್ದಾರೆ.
ಕೇರಳ ಸರ್ಕಾರವು 2005 ರಲ್ಲಿ 23.57 ಎಕರೆಗಳನ್ನು ಉಚಿತವಾಗಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ, ಅಂತಾರಾಷ್ಟ್ರೀಯ ಟರ್ಮಿನಲ್ ನಿರ್ಮಾಣಕ್ಕಾಗಿ ಹಸ್ತಾಂತರಿಸಿತ್ತು.
ಕೇಂದ್ರ ಸಚಿವ ಸಂಪುಟ ಬುಧವಾರ ನಡೆಸಿದ “ಏಕಪಕ್ಷೀಯ ನಿರ್ಧಾರ”ದ ಅಡಿಯಲ್ಲಿ ರಾಜ್ಯ ಸರ್ಕಾರವು “ಸಂಪೂರ್ಣ ಸಹಕಾರ” ನೀಡಲು ಸಾಧ್ಯವಾಗುವುದಿಲ್ಲ ಎಂದ ವಿಜಯನ್ ಈ ಕುರಿತು ಪ್ರಧಾನಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಕೊಚ್ಚಿ ಮತ್ತು ಕಣ್ಣೂರು ವಿಮಾನ ನಿಲ್ದಾಣಗಳ ಬಗ್ಗೆಯೂ ಉಲ್ಲೇಖಿಸಿದ್ದು, ಇವುಗಳನ್ನು ಸ್ಪೇಷಲ್ ಪರ್ಪಸ್ ವೆಹಿಕಲ್ ಮೂಲಕ ರಾಜ್ಯ ಸರ್ಕಾರವು ನಿರ್ವಹಿಸುತ್ತಿದೆ.
ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಗುತ್ತಿಗೆ ನೀಡುವ ಬಗ್ಗೆ ಚರ್ಚಿಸಲು ಕೇರಳದ ಮುಖ್ಯಮಂತ್ರಿ ಇಂದು ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ.
ವಿಶೇಷವೆಂದರೆ, ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಖಾಸಗಿ ಕಂಪನಿಗಳಿಗೆ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಅವಕಾಶ ನೀಡುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
“ಸ್ಪರ್ಧಾತ್ಮಕವಾಗಿ ಕಾರ್ಯಾಚರಣೆ ನಡೆಸುವ ಖಾಸಗಿ ಘಟಕದ ಮೂಲಕ ಈ ವಿಮಾನ ನಿಲ್ದಾಣವು ಅಭಿವೃದ್ಧಿ ಹೊಂದುತ್ತದೆ. ಆದರೆ ಭೂಮಿ ಮತ್ತು ವಿಮಾನ ನಿಲ್ದಾಣದ ಮಾಲೀಕತ್ವ ಮತ್ತು ಎಟಿಸಿಯು ಜವಾಬ್ದಾರಿ, ಭದ್ರತೆ, ಕಸ್ಟಮ್ಸ್ ಮತ್ತು ವಲಸೆಯ ಜವಾಬ್ದಾರಿಗಳು ಇನ್ನೂ ಸರ್ಕಾರಿ ಸಂಸ್ಥೆಗಳೊಂದಿಗೆ ಉಳಿದಿವೆ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸಂಸದ ವಿ ಮುರಳೀಧರನ್ ಕೂಡ ಈ ನಿರ್ಧಾರವನ್ನು ಸ್ವಾಗತಿಸಿದರು. “ಕೇಂದ್ರ ಕ್ಯಾಬಿನೆಟ್ ನಿರ್ಧಾರವು, ವಿಶ್ವ ದರ್ಜೆಯ ಪ್ರಯಾಣಿಕರ ಸೇವೆಗಳನ್ನು ಸಮಯಕ್ಕೆ ತಲುಪಿಸುತ್ತದೆ ಮತ್ತು ಸೌಲಭ್ಯಗಳನ್ನು ಸುಧಾರಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಮಹಾದ್ರೋಹ-ಮಾರಾಟವಾಗುತ್ತಿರುವ ’ಮಹಾರತ್ನಗಳು’: ಚಿಂತಕ ಶಿವಸುಂದರ್ ಬರಹ


