6 ಬಿಎಸ್ಪಿ ಶಾಸಕರು ಪಕ್ಷ ತ್ಯಜಿಸಿ ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದನ್ನು ಅನುಮೋದಿಸಿದ್ದ ರಾಜಸ್ಥಾನ ಸ್ಪೀಕರ್ ಸಿ.ಪಿ ಜೋಶಿಯವರ ತೀರ್ಮಾನವನ್ನು ರಾಜಸ್ಥಾನ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟೆಲೇರಿದ್ದ ಬಿಎಸ್‌ಪಿ ಅರ್ಜಿಯನ್ನು ಸುಪ್ರೀಂ ಇಂದು ವಜಾಗೊಳಿಸಿದೆ.
ಶಾಸಕರಾದ ಆರ್. ಗುಧಾ, ಲಖನ್ ಸಿಂಗ್, ದೀಪ್ ಚಂದ್, ಜೆ.ಎಸ್. ಅವನಾ, ಸಂದೀಪ್ ಕುಮಾರ್ ಮತ್ತು ವಾಜಿಬ್ ಅಲಿ ಅವರಿಗೆ ಬಿಎಸ್ಪಿ ಪಕ್ಷ ಕಳೆದ ತಿಂಗಳು ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನೊಟೀಸ್ ನೀಡಿ, ವಿಪ್ ಜಾರಿ ಮಾಡಿದೆ. ಬಿಎಸ್ಪಿ ರಾಷ್ಟ್ರೀಯ ಪಕ್ಷವಾಗಿದ್ದು ಪಕ್ಷದ ಶಾಸಕರು ವಿಪ್ ಉಲ್ಲಂಘಿಸಿದರೆ ಶಾಸಕರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಲಾಗುವುದು ಎಂದು ಬೆದರಿಸಲಾಗಿತ್ತು.
ರಾಜಸ್ಥಾನದಲ್ಲಿ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದ ಆರು ಜನರು ಸಹ ಪಕ್ಷ ಸಾಮೂಹಿಕವಾಗಿ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿರುವುದರಿಂದ ಇದು ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲಂಘನೆಯಾಗುವುದಿಲ್ಲ. ಇದೀಗ ನಾವು ಕಾಂಗ್ರೆಸ್ ಶಾಸಕರು ಎಂದು ಅವರು ತಿರುಗೇಟು ನೀಡಿದ್ದರು.
ಜಸ್ಟೀಸ್ ಅರುಣ್ ಮಿಶ್ರಾ, ಬಿ.ಆರ್ ಗವಾಯಿ ಮತ್ತು ಕೃಷ್ಣ ಮುರಾರಿಯವರಿದ್ದ ಪೀಠದ ಎದುರು ಸ್ಪೀಕರ್ ಜೋಶಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಜರಾದರು.
ರಾಜಸ್ಥಾನ ಹೈಕೋರ್ಟ್ ಸ್ಪೀಕರ್ ಜೋಶಿಯವರಿಗೆ ಈ ವಿಷಯದ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆ ಸಮಯಾವಕಾಶ ನೀಡಿತ್ತು. ಅಲ್ಲದೇ ನಿಗದಿತ ಸಮಯದೊಳಗೆ ತೀರ್ಮಾನ ತೆಗೆದುಕೊಳ್ಳುವಂತೆ ರಾಜಸ್ಥಾನ ವಿಧಾನಸಭೆಗೆ ನಿರ್ದೇಶಿಸಿತ್ತು.
ಬಿಎಸ್‌ಪಿ ಮತ್ತು ಬಿಜೆಪಿಯ ಶಾಸಕ ಮದನ್ ದಿಲಾವರ್ ಪರವಾಗಿ ಹಿರಿಯ ವಕೀಲರಾದ ಎಸ್‌ಸಿ ಮಿಶ್ರಾ ಮತ್ತು ಸತ್ಯಪಾಲ್ ಜೈನ್ ವಾದಿಸಿದರು. ಈ ವಿಚಾರದ ಕುರಿತು ಮತ್ತಷ್ಟು ಸಮಯಾವಕಾಶ ಕೇಳಿದರೂ ಸಹ ಸುಪ್ರೀಂ ಅರ್ಜಿಯನ್ನು ವಜಾಗೊಳಿಸಿತು.
ಇದನ್ನೂ ಓದಿ: ರಾಜಸ್ಥಾನ: ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ, ಇಲ್ಲ ಪಕ್ಷದ ಸದಸ್ಯತ್ವ ರದ್ದು – ಮಾಯಾವತಿ


